ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಪದವಿ ಅಧ್ಯಯನ ಕೇಂದ್ರದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ವತಿಯಿಂದ ” ಸಂಶೋಧನಾ ವಿಧಾನಶಾಸ್ತ್ರ: ಪರಿಕಲ್ಪನೆಗಳು, ವಿನ್ಯಾಸ ಮತ್ತು ಫಲಿತಾಂಶ” ವಿಷಯದಡಿಯಲ್ಲಿ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ವಿದ್ಯಾರ್ಥಿಗಳಿಗಾಗಿ
ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಆಯೋಜಿಸಿದ ಎರಡು ದಿನಗಳ ಸಂಶೋಧನಾ ಕಾರ್ಯಗಾರಕ್ಕೆ ಚಾಲನೆ ನೀಡಲಾಯಿತು.
ಕಾರ್ಯಗಾರವನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗು ಮಂಗಳೂರಿನ ಕಾಗ್ನೇಟ್ ಇಂಡಸ್ಟ್ರಿಯಲ್ ಆಟೋಮೇಷನ್ ಸಂಸ್ಥೆಯ ಸಹ-ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಡಾ. ಪುರುಷೋತ್ತಮ ಚಿಪ್ಪಾರ್ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿ, ವಿದ್ಯಾರ್ಥಿ ಸಮುದಾಯ ತನ್ನ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣಗಳ ವೀಕ್ಷಣೆಗೆ ವಿನಿಯೋಗಿಸುವ ಬದಲು ವಿನೂತನ ಆಲೋಚನೆ ಹಾಗು ನಿರಂತರ ಅಧ್ಯಯನದ ಮೂಲಕ ಹೊಸ ಜ್ಞಾನ ಪರಂಪರೆಯನ್ನು ಕಟ್ಟಿಕೊಡಬೇಕು. ಅಧ್ಯಾಯನದ ಹಾದಿಯನ್ನು ಸ್ಪಷ್ಟಪಡಿಸಿ ಸುಸ್ಥಿರ ಬದಲಾವಣೆ ಕಡೆಗೆ ಹೆಜ್ಜೆ ಹಾಕುವುದರ ಜೊತೆಗೆ ಹೊಸ ಸಂಶೋಧನೆ ಹಾಗು ಆವಿಷ್ಕಾರಗಳ ಕಡೆಗೆ ಹೆಜ್ಜೆ ಹಾಕಬೇಕು. ವಿದ್ಯಾರ್ಥಿಗಳ ಸಂಶೋಧನಾ ವಿಷಯಗಳು ಹೊಸ ಒಳವುಗಳನ್ನು ಪರಿಚಯಿಸಿ, ನಿರ್ದಿಷ್ಟ ವಿಷಯದ ಕುರಿತು ಆಳವಾದ ಪ್ರಬುದ್ಧತೆಯನ್ನು ಹೊಂದುವುದರ ಮೂಲಕ ವಿಚಾರವಂತರಾಗಬೇಕು.
ಪ್ರತಿಯೊಂದು ಅಧ್ಯಾಯನ ಹಾಗು ಸಂಶೋಧನೆಗೆ ತನ್ನ ಗುರಿ ಮತ್ತು ಉದ್ದೇಶ ಅತ್ಯಂತ ಅವಶ್ಯ. ವಿದ್ಯಾರ್ಥಿಗಳು
ಕೌಶಲ್ಯಾಧರಿತ ಅಧ್ಯಾಯನ ಮತ್ತು ಸಂಶೋಧನೆಗಳಿಂದ ಮಾತ್ರ ಉತ್ಕೃಷ್ಟ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಕಾರ್ಯಕ್ರಮದ ಆಯೋಜಕರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ಶಿಕ್ಷಣ ಎನ್ನುವುದು ಕೇವಲ ಪಠ್ಯದ ಅಧ್ಯಾಯನವಲ್ಲ ಇದೊಂದು ಬಹುಮುಖ ಜ್ಞಾನಾರ್ಜನೆ, ಪ್ರಯೋಗಾಲಯ, ವಿವಿಧ ವಿಷಯಗಳ ಕುರಿತು ಪ್ರಬುದ್ಧರಾಗುವ ವೇದಿಕೆ. ಇಂತಹ ವಿಚಾರ ಸಿರಿವಂತಿಕೆಯನ್ನು ಸಾಧಿಸಲು ಸಂಶೋಧನೆ, ಚರ್ಚೆ, ವಿಚಾರ ಸಂಕಿರಣ, ಕಾರ್ಯಾಗಾರದಂತಹ ಕಾರ್ಯಕ್ರಮಗಳು ಬಹು ಮುಖ್ಯ ಪಾತ್ರ ವಹಿಸುತ್ತದೆ. ಇದರ ಭಾಗವಾಗಿ ಇಂದು ಎರಡು ದಿನಗಳ ಕಾಲ ” ಸಂಶೋಧನಾ ವಿಧಾನಶಾಸ್ತ್ರ: ಪರಿಕಲ್ಪನೆಗಳು, ವಿನ್ಯಾಸ ಮತ್ತು ಫಲಿತಾಂಶ” ವಿಷಯದಡಿಯಲ್ಲಿ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಶೈಕ್ಷಣಿಕ ಬೆಳವಣಿಗೆಯನ್ನು ಸಾಧಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಎಸ್.ಡಿ.ಎಂ ಸಂಸ್ಥೆಯ ವತಿಯಿಂದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಕಾರ್ಯಕ್ರಮದ ವೇದಿಕೆಯಲ್ಲಿ ಸ್ನಾತಕೋತ್ತರ ಕೇಂದ್ರದ ಡೀನ್ ಹಾಗು ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ನಿರ್ದೇಶಕಿ ಡಾ. ಸೌಮ್ಯ ಬಿ ಪಿ, ಕಾರ್ಯಾಗಾರದ ಸಂಯೋಜಕರಾದ ಡಾ. ಶಶಿಪ್ರಭ ಹಾಗು ಡಾ. ಮಂಜುಶ್ರೀ ಆರ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಚಾರ್ಯರಾದ ನಂದ ಕುಮಾರಿ ಕೆ ಪಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.











