ಉಜಿರೆ: ಕೃಷಿ ಕ್ಷೇತ್ರವನ್ನು ಕೇವಲ ಜೀವನೋಪಾಯದ ಮಾರ್ಗವಾಗಿ ನೋಡದೆ, ವೈಜ್ಞಾನಿಕ ಜ್ಞಾನ, ಕೌಶಲ್ಯ ಮತ್ತು ಮಾರುಕಟ್ಟೆ ಅರಿವಿನೊಂದಿಗೆ ಉದ್ಯಮವನ್ನಾಗಿ ರೂಪಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಪ್ರಗತಿಪರ ಕೃಷಿಕರು ಹಾಗೂ ತಾಲೂಕು ಇಂಜಿನಿಯರ್ಸ್ ಅಸೋಸಿಯೇಷನ್, ಬೆಳ್ತಂಗಡಿ ಅಧ್ಯಕ್ಷ ಜಗದೀಶ್ ಪ್ರಸಾದ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ*ಯಲ್ಲಿ ನಡೆದ ಕೃಷಿ ಉದ್ಯಮಿ ತರಬೇತಿ ಕಾರ್ಯಕ್ರಮದ (ಬ್ಯಾಚ್ ನಂ.1003) ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕೃಷಿಯಲ್ಲಿ ಇಂದು ಅನೇಕ ಹೊಸ ಉದ್ಯಮಾವಕಾಶಗಳಿವೆ. ಕೇವಲ ಬೆಳೆ ಬೆಳೆಯುವುದಲ್ಲ, ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು. ಡ್ರ್ಯಾಗನ್ ಫ್ರೂಟ್, ಪಪ್ಪಾಯ, ಬಾಳೆಹಣ್ಣಿನಂತಹ ಹಣ್ಣು ಬೆಳೆಗಳು, ಕೃಷಿಯೊಂದಿಗೆ ಪಶುಸಂಗೋಪನೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಸಾವಯವ ಗೊಬ್ಬರ ತಯಾರಿಕೆ ಸೇರಿದಂತೆ ವಿವಿಧ ಪೂರಕ ಚಟುವಟಿಕೆಗಳನ್ನು ಇಂಜಿನಿಯರಿಂಗ್ ಮನೋಭಾವದಿಂದ ಕೈಗೊಳ್ಳುವ ಮೂಲಕ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಗಳ ಕೇಂದ್ರ ಕಛೇರಿ, ಉಜಿರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ. ವಿಜಯಕುಮಾರ್ ಅವರು ಮಾತನಾಡಿ, ತರಬೇತಿಯಲ್ಲಿ ಕಲಿತ ಕೌಶಲ್ಯವನ್ನು ಕಾರ್ಯರೂಪಕ್ಕೆ ತಂದು ಪ್ರತಿಯೊಬ್ಬ ತರಬೇತಿದಾರರೂ ಸ್ವಯಂ ಉದ್ಯೋಗದ ಮೂಲಕ ತಮ್ಮದೇ ಆದ ಉದ್ಯಮವನ್ನು ಸ್ಥಾಪಿಸಬೇಕು. ರುಡ್‌ಸೆಟ್ ಸಂಸ್ಥೆಯ ಉದ್ದೇಶ ಕೇವಲ ತರಬೇತಿ ನೀಡುವುದಲ್ಲ; ತರಬೇತಿದಾರರು ತಮ್ಮ ಬದುಕಿನಲ್ಲಿ ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಪ್ರೇರೇಪಿಸುವುದಾಗಿದೆ ಎಂದರು.
ರುಡ್‌ಸೆಟ್ ಸಂಸ್ಥೆ, ಉಜಿರೆಯ ನಿರ್ದೇಶಕರಾದ ಸುನಿಲ್ ಜಿ. ನಾಯಕ್ ಸ್ವಾಗತಿಸಿ, ಸಂಸ್ಥೆಯ ತರಬೇತಿ ಚಟುವಟಿಕೆಗಳು ಹಾಗೂ ಕೃಷಿ ಉದ್ಯಮಿ ತರಬೇತಿಯ ಉದ್ದೇಶದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಶ್ವೇತಾ ಪ್ರಾರ್ಥನೆ ಸಲ್ಲಿಸಿದರು. ತರಬೇತಿಯ ಅನುಭವವನ್ನು ಹಂಚಿಕೊಂಡ ಶ್ರೀಮತಿ ಬೇಬಿ ಹಾಗೂ ರಾಜು ಅವರು, ರುಡ್‌ಸೆಟ್ ಸಂಸ್ಥೆಯಲ್ಲಿ ಪಡೆದ ಪ್ರಾಯೋಗಿಕ ತರಬೇತಿ, ಉದ್ಯಮಶೀಲತಾ ಮಾರ್ಗದರ್ಶನ, ಕೋಳಿ-ಜೇನು ಸಾಕಾಣಿಕೆಯಿಂದ ಕಲಿತ ಜೀವನ ಪಾಠ ಹಾಗೂ ಪ್ರೇರಣೆಯು ಸ್ವಯಂ ಉದ್ಯೋಗದತ್ತ ಹೆಜ್ಜೆ ಇಡಲು ಆತ್ಮವಿಶ್ವಾಸ ನೀಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಯ ಸಿಬ್ಬಂದಿ, ತರಬೇತುದಾರರು ಹಾಗೂ ಹಿರಿಯ-ಕಿರಿಯ, ಪುರುಷ-ಮಹಿಳಾ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪನ್ಯಾಸಕರಾದ ಕರುಣಾಕರ ಜೈನ್ ವಂದಿಸಿದರು.











