ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ವಿವಿಧ ಯೋಜನೆಗಳಡಿ ಮಂಜೂರಾಗಿರುವ ಒಟ್ಟು ರೂ.31.04 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮಗಳು ಸೆಪ್ಟೆಂಬರ್ 29 ಮತ್ತು 30ರಂದು ತಾಲೂಕಿನ ವಿವಿಧೆಡೆ ನಡೆಯಲಿವೆ.
ದಕ್ಷಿಣ ಕನ್ನಡ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಹಾಗೂ 15ನೇ ಹಣಕಾಸು ಯೋಜನೆಯಡಿ (PM-ABHIM) ರೂ.16.90 ಕೋಟಿ ವೆಚ್ಚದಲ್ಲಿ ಮಂಜೂರಾಗಿರುವ 26 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಶಿಲಾನ್ಯಾಸ ನಡೆಯಲಿದೆ.
ಆದಿವಾಸಿ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರೂ.9 ಕೋಟಿ ವೆಚ್ಚದ ಎರಡು ಪರಿಶಿಷ್ಟ ಪಂಗಡದ ವಾಲ್ಮೀಕಿ ಆಶ್ರಮ ಶಾಲೆಗಳ ಉದ್ಘಾಟನೆ ನಡೆಯಲಿದೆ. ಇದರೊಂದಿಗೆ MRPL ಸಂಸ್ಥೆಯ CSR ಅನುದಾನದಲ್ಲಿ ರೂ.15 ಲಕ್ಷ ವೆಚ್ಚದಲ್ಲಿ ಚಾರ್ಮಾಡಿ ಅಂಗನವಾಡಿ ಕೇಂದ್ರದ ಶಿಲಾನ್ಯಾಸ ನೆರವೇರಲಿದೆ.
ರೂ.12 ಲಕ್ಷ ವೆಚ್ಚದ ಸರ್ಕಾರಿ ಪ್ರೌಢಶಾಲೆ ಪೆರ್ಲಬೈಪಾಡಿಯ ಶೌಚಾಲಯ ಕಾಮಗಾರಿಗೆ ಶಿಲಾನ್ಯಾಸ ಹಾಗೂ ರೂ.12 ಲಕ್ಷ ವೆಚ್ಚದ ಸರ್ಕಾರಿ ಪ್ರೌಢಶಾಲೆ ಬೆಳ್ತಂಗಡಿಯ ಶೌಚಾಲಯ ಕಾಮಗಾರಿಯ ಉದ್ಘಾಟನೆ ನಡೆಯಲಿದೆ. ವಿದ್ಯಾರ್ಥಿಗಳ ವಸತಿ ಸೌಲಭ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರೂ.2 ಕೋಟಿ ವೆಚ್ಚದ ನೂತನ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ರೂ.2 ಕೋಟಿ ವೆಚ್ಚದ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಲಿದೆ. ಗ್ರಾಮೀಣ ಪ್ರದೇಶಗಳ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ರೂ.75 ಲಕ್ಷ ವೆಚ್ಚದ ಒಟ್ಟು ಮೂರು ಕಾಲುಸಂಕ ಕಾಮಗಾರಿಗಳಿಗೂ ಈ ಸಂದರ್ಭದಲ್ಲಿ ಶಿಲಾನ್ಯಾಸ ನಡೆಯಲಿದೆ.











