September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್.ಡಿ.ಎಂ ಪಾಲಿಟೆಕ್ನಿಕ್ : ಕೃಷಿ ಮಾಹಿತಿ ಕಾರ್ಯಾಗಾರ

ಉಜಿರೆ: ವಿದ್ಯಾರ್ಥಿಗಳಲ್ಲಿ ಕೃಷಿ, ಪರಿಸರ ಸಂರಕ್ಷಣೆ ಹಾಗೂ ಔಷಧೀಯ ಸಸ್ಯಗಳ ಮಹತ್ವದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್‌ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕ, ಯುವ ರೆಡ್ ಕ್ರಾಸ್ ಘಟಕ ಹಾಗೂ ಉಜಿರೆಯ ರತ್ನಮಾನಸ ವಿದ್ಯಾರ್ಥಿ ನಿಲಯದ ಸಹಯೋಗದಲ್ಲಿ ಕೃಷಿ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರತ್ನಮಾನಸದ ಮುಖ್ಯ ಪಾಲಕರಾದ ಯತೀಶ್ ಕೆ. ಬಳೆಂಜ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ರತ್ನಮಾನಸದಲ್ಲಿ ನಡೆಯುತ್ತಿರುವ ವಿವಿಧ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಸ್ವಾವಲಂಬನೆ, ಪರಿಸರ ಸಂರಕ್ಷಣೆ ಹಾಗೂ ಕೃಷಿ ಚಟುವಟಿಕೆಗಳಿಗೆ ರತ್ನಮಾನಸ ನೀಡುತ್ತಿರುವ ಕೊಡುಗೆಗಳನ್ನು ವಿವರಿಸಿ, ಕೃಷಿಯು ಭಾರತೀಯ ಸಂಸ್ಕೃತಿ ಮತ್ತು ಜೀವನ ಪದ್ಧತಿಯ ಅವಿಭಾಜ್ಯ ಅಂಗವಾಗಿದೆ ಎಂದರು.

ಸಮಗ್ರ ಕೃಷಿ ಪದ್ಧತಿಯ ಮಹತ್ವವನ್ನು ವಿವರಿಸಿ, ಕೃಷಿಯಲ್ಲಿ ಬೆಳೆ, ಪಶುಸಂಗೋಪನೆ, ಸಾವಯವ ಗೊಬ್ಬರ ತಯಾರಿಕೆ, ತೋಟಗಾರಿಕೆ ಹಾಗೂ ಜಲಸಂರಕ್ಷಣೆಯನ್ನು ಸಮನ್ವಯಗೊಳಿಸುವ ಮೂಲಕ ಉತ್ತಮ ಉತ್ಪಾದನೆ ಮತ್ತು ಆರ್ಥಿಕ ಸ್ಥಿರತೆಯನ್ನು ಸಾಧಿಸಬಹುದಾಗಿದೆ. ಇಂದಿನ ಯುವಜನತೆ ಕೃಷಿಯತ್ತ ಆಸಕ್ತಿ ಬೆಳೆಸಿಕೊಳ್ಳುವುದು ಅಗತ್ಯವಾಗಿದ್ದು, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಯಶಸ್ಸು ಸಾಧಿಸಬಹುದು ಎಂದರು.

ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಸಸ್ಯಗಳು, ಹಣ್ಣುಗಳ ಗಿಡಗಳು, ಅಲಂಕಾರಿಕ ಸಸ್ಯಗಳು ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ಗಿಡಮರಗಳ ಕುರಿತು ಪರಿಚಯ ನೀಡಲಾಯಿತು. ತುಳಸಿ, ಬೇವು, ಅರಿಶಿನ, ಅಲೋವೆರಾ ಸೇರಿದಂತೆ ಹಲವಾರು ಔಷಧೀಯ ಸಸ್ಯಗಳ ಉಪಯೋಗಗಳು ಹಾಗೂ ಆರೋಗ್ಯ ರಕ್ಷಣೆಯಲ್ಲಿ ಅವುಗಳ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡರು. ಪರಿಸರದ ಸಮತೋಲನ ಕಾಪಾಡುವಲ್ಲಿ ಸಸ್ಯಗಳ ಮಹತ್ವವನ್ನು ವಿವರಿಸಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಾಗಾರದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಗಳು, ಸಸ್ಯ ಸಂರಕ್ಷಣೆ ಹಾಗೂ ಔಷಧೀಯ ಸಸ್ಯಗಳ ಕುರಿತು ಹಲವು ಸಂಗತಿಗಳನ್ನು ಚರ್ಚಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಸಾಯಿ ಚರಣ್ ಸಿ.ಎಚ್., ರತ್ನಮಾನಸದ ಹಿರಿಯ ಸಿಬ್ಬಂದಿ ರವಿಚಂದ್ರ, ಯುವ ರೆಡ್ ಕ್ರಾಸ್ ಘಟಕದ ಯೋಜನಾಧಿಕಾರಿ ಅವನೀಶ್ ಪಿ., ಎನ್‌ಎಸ್‌ಎಸ್ ಉಪಯೋಜನಾಧಿಕಾರಿ ತ್ರಿಭುವನ್ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ದ.ಕ. ಜಿಲ್ಲಾ ಪಶುವೈದ್ಯಕೀಯ ಪರೀಕ್ಷಕರ ಸಂಘದಿಂದ ನಿವೃತ್ತಿಗೊಂಡ ಡಾ ಕೆ. ಜಯಕೀರ್ತಿ ಜೈನ್ ರಿಗೆ ಸನ್ಮಾನ

Suddi Udaya

ಕುಕ್ಕುಟೋದ್ಯಮದ ಸಮಸ್ಯೆಗಳ ಕುರಿತು ಬೆಂಗಳೂರಿನಲ್ಲಿ ಸಭೆ – ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ಬಲವಾದ ಪ್ರತಿಪಾದನೆ

Suddi Udaya

ಬುರುಡೆ ಪ್ರಕರಣ ಆರೋಪಿ ಚಿನ್ನಯ್ಯ ಮತ್ತೆ ಎಸ್.ಐ.ಟಿ ಕಸ್ಟಡಿಗೆ

Suddi Udaya

ಗುರುವಾಯನಕೆರೆ ಶ್ರೀ ಶಾರದಾಂಬ ಯಕ್ಷಗಾನ ಕಲಾ ಬಳಗದಿಂದ ಬಣ್ಣಗಾರಿಕೆ ಶಿಬಿರ

Suddi Udaya

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಪ್ರತಿಭಟನೆ

Suddi Udaya

ಬೆಳಾಲಿನ ಶಿಲ್ಪಿ ಶಶಿಧರ ಆಚಾರ್ಯ ರಿಗೆ ದಿ| ಬೋಳೂರು ಹರಿಶ್ಚಂದ್ರ ಆಚಾರ್ಯ ಪುರಸ್ಕಾರ

Suddi Udaya
error: Content is protected !!