29.4 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದಿಡುಪೆಯಲ್ಲಿ ಪ್ರವಾಸಿಗರಿಗೆ ದಂಡ ಪ್ರಕರಣ, ಹೈಕೋರ್ಟ್ ತೀವ್ರ ಅಸಮಾಧಾನ; ಅರಣ್ಯಾಧಿಕಾರಿಗಳಿಂದ ವಿವರಣೆ ಕೇಳಿದ ಹೈಕೋರ್ಟ್

ಬೆಳ್ತಂಗಡಿ : ದಿಡುಪೆ ಜಲಪಾತಕ್ಕೆ ಭೇಟಿ ನೀಡಿದ್ದಾಗ ಪಾವತಿಸಿದ ಪ್ರವೇಶ ಶುಲ್ಕಕ್ಕೆ ಡಿಜಿಟಲ್ ಬಿಲ್ ಕೇಳಿದ್ದ ಪ್ರವಾಸಿಗರಿಗೆ ದಂಡ ಪಾವತಿ ರಸೀದಿ ನೀಡಿದ್ದಲ್ಲದೆ, ಹಲ್ಲೆ ನಡೆಸಿ 50 ಸಾವಿರ ರೂ. ನಗದು ಕಿತ್ತುಕೊಂಡ ಆರೋಪದ ಮೇರೆಗೆ ಎಫ್‌ಐಆರ್ ದಾಖಲಿಸಿರುವ ಪ್ರಕರಣದಲ್ಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಅಲ್ಲದೆ, ಪ್ರಕರಣದ ಕುರಿತ ವಿವರಣೆ ನೀಡಲು ನ.6ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ನ್ಯಾಯಾಲಯ ಅರಣ್ಯ ಇಲಾಖೆ ಕಾಯದರ್ಶಿ ಹಾಗೂ ಮಂಗಳೂರು ವಲಯ ಅರಣ್ಯಾಧಿಕಾರಿಗೆ ಸೂಚಿಸಿದೆ. ಪ್ರಕರಣ ಸಂಬಂಧ ತಮ್ಮ ವಿರುದ್ಧ ಎಫ್‌ಐಆರ್ ರದ್ದು ಕೋರಿ ಚಿಕ್ಕಮಗಳೂರಿನ ಎಸ್.ಪ್ರತಾಪ್ ಸೇರಿ ಐವರು ಯುವಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಘಟನೆ ಕುರಿತು ಸಾಕ್ಷ್ಯ ಹೇಳಲು ಸ್ಥಳದಲ್ಲಿ ಸ್ವತಂತ್ರ ಸಾಕ್ಷಿ ಇಲ್ಲವಾಗಿದ್ದು, ಅರ್ಜಿದಾರರನ್ನು ಮಂಪರು ಪರೀಕ್ಷೆ ನಡೆಸಲು ಸೂಚಿಸಿರುವ ಬೆಳ್ತಂಗಡಿ ಠಾಣೆಯ ತನಿಖಾಧಿಕಾರಿ ಸಹ ಅರ್ಜಿಯ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಸೂಚಿಸಿರುವ ಪೀಠ, ಅರ್ಜಿದಾರರ ವಿರುದ್ಧದ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿದೆ. ಪ್ರಕರಣದಲ್ಲಿ ಪ್ರವೇಶ ಶುಲ್ಕ ಪಾವತಿಸಿರುವುದಕ್ಕೆ ಡಿಜಿಟಲ್ ಮತ್ತು ಕೈಬರಹ ನೀಡಲು ಅರ್ಜಿದಾರರು ಕೇಳಿದ್ದಕ್ಕೆ ಬಿಲ್ಲಿಂಗ್ ಮೆಷಿನ್ ಹಾಳಾಗಿದೆ. ಕೈ ಬರಹ ಬಿಲ್ ಇಲ್ಲವಾಗಿದೆ ಎಂದು ಹೇಳಿ ದಂಡ ಪಾವತಿ ರಸೀದಿ ನೀಡಿದ ಮತ್ತು ಬಿಲ್ಲಿಂಗ್ ಕೌಂಟರ್‌ನಲ್ಲಿ ಅರಣ್ಯ ವಾಚರ್ ಹಣ ಸ್ವೀಕರಿಸುತ್ತಿದ್ದ ವಿಚಾರಕ್ಕೆ ನ್ಯಾಯಮೂರ್ತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸರಕಾರಿ ಅಭಿಯೋಜಕರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, “ಡಿಜಿಟಲ್ ಬಿಲ್ ಕೇಳಿದರೆ ಬಿಲ್ಲಿಂಗ್ ಮೆಷಿನ್ ಕೆಟ್ಟಿದೆ ಅಂತೀರಾ. ಹೋಗಲಿ ಮ್ಯಾನ್ಯುಯಲ್ ಬಿಲ್ ಕೇಳಿದರೆ ದಂಡ ಪಾವತಿ ರಸೀದಿ ಕೊಡ್ತೀರಾ? ಶುಲ್ಕ ಪಾವತಿ ರಸೀದಿ ಇಲ್ಲವೆಂದರೆ ಪ್ರವಾಸಿಗರು ಪಾವತಿಸಿದ ದುಡ್ಡು ಎಲ್ಲಿಗೆ ಹೋಗುತ್ತಿದೆ? ಪ್ರವಾಸಿಗರು ಪ್ರೇಕ್ಷಣಿಯ ಸ್ಥಳಕ್ಕೆ ಬಂದರೆ ದಂಡ ವಿಧಿಸುತ್ತೀರಾ? ಬಿಲ್ಲಿಂಗ್ ಕೌಂಟರ್‌ನಲ್ಲಿ ಅರಣ್ಯ ವಾಚರ್ ಕೆಲಸ ಮಾಡುತ್ತಾರಾ? ಏನ್ರಿ ಇದೆಲ್ಲಾ?” ಎಂದು ಕಟುವಾಗಿ ಪ್ರಶ್ನಿಸಿದರು.

ಅಲ್ಲದೆ, ”ದಿನಕ್ಕೆ ನೂರಾರು ಪ್ರವಾಸಿಗರು ಜಲಪಾತ ನೋಡಲು ಬರುತ್ತಾರೆ. ಅವರಿಂದ ಸಂಗ್ರಹಿಸಿದ ಶುಲ್ಕಕ್ಕೆ ಎಲ್ಲಿದೆ ಲೆಕ್ಕ? ದುಡ್ಡು ಸರಕಾರಕ್ಕೆ ಹೋಗುತ್ತಿದೆಯೇ ಎನ್ನುವುದೇ ಅನುಮಾನ. ಡಿಜಿಟಲ್ ಬಿಲ್ ಕೇಳಿರುವುದಕ್ಕೆ ಅರ್ಜಿದಾರರ ವಿರುದ್ಧವೇ ದೂರು ದಾಖಲಿಸುವುದೇ? ಏನ್ರಿ ಸರಕಾರ ಇದು? ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಇವರು ಬ್ರಿಟಿಷ್ ಪಳೆಯುಳಿಕೆಯಾಗಿದ್ದಾರೆ. ಅರಣ್ಯ ಇಲಾಖೆ ಕಾರ್ಯದರ್ಶಿ ಪ್ರಕರಣದ ಕುರಿತು ವಿಚಾರಣೆಗೆ ಬಂದು ಉತ್ತರ ಹೇಳಬೇಕು, ಇಲ್ಲವಾದರೆ ಪ್ರವಾಸೋದ್ಯಮ ಸಚಿವರನ್ನೇ ಖುದ್ದು ವಿಚಾರಣೆಗೆ ಹಾಜರಾಗಲು ಸೂಚಿಸುತ್ತೇನೆ.. ಎಂದು ನ್ಯಾಯಮೂರ್ತಿ ಮೌಖಿಕವಾಗಿ ಪ್ರಶ್ನಿಸಿದರು.

ಪ್ರಕರಣದ ಹಿನ್ನೆಲೆ : ಅರ್ಜಿದಾರರು ಮತ್ತವರ 15 ಮಂದಿ ಸ್ನೇಹಿತರು 2026ರ ಜು.19ರಂದು ಬೆಳ್ತಂಗಡಿ
ತಾಲೂಕಿನ ಮಲವಂತಿಗೆ ದಿಡುಪೆ ಜಲಪಾತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರವೇಶ ಶುಲ್ಕ ಒಬ್ಬೊಬ್ಬರಿಗೆ ತಲಾ 200 ರೂ.ನಂತೆ ಒಟ್ಟು ಮೂರು ಸಾವಿರ ಪ್ರವೇಶ ಶುಲ್ಕ ಪಾವತಿಸಿದ್ದರು. ಅರ್ಜಿದಾರರು ಕೇಳಿದರೂ ಸ್ಥಳದಲ್ಲಿ ಕರ್ತವ್ಯ ನಿರತ ಸಿಬ್ಬಂದಿ ಭರತೇಶ್ ಡಿಜಿಟಲ್ ಬಿಲ್ ಕೊಟ್ಟಿರಲಿಲ್ಲ. ಅದೇ ವಿಚಾರದಲ್ಲಿ ಅರ್ಜಿದಾರರು ಮತ್ತು ಭರತೇಶ್ ನಡುವೆ ವಾಗ್ವಾದ ನಡೆದಿತ್ತು. ನಂತರ ಅರಣ್ಯ ವಾಚರ್ ಗೋಪಾಲ್, ಬೆಳ್ತಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅರ್ಜಿದಾರರು ಭರತೇಶ್ ಮೇಲೆ ಹಲ್ಲೆ ನಡೆಸಿ ಅವರ ಕೈಯಿಂದ 50,500 ರೂ. ಹಣವಿದ್ದ ಬ್ಯಾಗ್ ಕಿತ್ತುಕೊಂಡು ಹೋದ ಆರೋಪದ ಮೇರೆಗೆ ದೂರು ನೀಡಿದ್ದರು. ಇದರಿಂದ ಪೊಲೀಸರು ದಾಖಲಿಸಿರುವ ಎಫ್‌ ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರರು, ‘ಘಟನೆ ನಡೆದಾಗ ವಿಡಿಯೋ ಚಿತ್ರೀಕರಿಸಲಾಗಿದೆ. ನಾವು ಹಲ್ಲೆ ನಡೆಸಿಲ್ಲ ಮತ್ತು ಹಣದ ಬ್ಯಾಗ್ ಕಸಿದುಕೊಂಡಿಲ್ಲ’ ಎಂದು ತಿಳಿಸಿದ್ದಾರೆ.

Related posts

ಮುಂಡಾಜೆ: ಯಂಗ್ ಚಾಲೆಂಜರ್ಸ್ ನಲ್ಲಿ ಅಣಬೆ ತರಬೇತಿ ಕಾರ್ಯಾಗಾರ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ವತಿಯಿಂದ ವಾರ್ಷಿಕ ಕ್ರೀಡಾಕೂಟ

Suddi Udaya

ಅ.16: ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ನಿಮಿತ್ತ ‘ಅಟ್ಟಳಿಗೆಯ ಸ್ತಂಭ ನ್ಯಾಸ’ ಕಾರ್ಯಕ್ರಮ

Suddi Udaya

ಭೀಮ ಗೋಲ್ಡ್ CSR ಸಹಕಾರದಿಂದ ಬೈಂದೂರು ಸೇವಾಧಾಮದಲ್ಲಿ ನೀರಿನ ಘಟಕದ ಉದ್ಘಾಟನೆ

Suddi Udaya

ಬೆಳ್ತಂಗಡಿ ಸಂಜಯ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಮಳೆಲ್ ಓರ್ ನಾಲ್ ಕ್ರೀಡಾಕೂಟ

Suddi Udaya

ಉಜಿರೆ ವಿಪತ್ತು ಘಟಕದಿಂದ ಶಾಲಾ ಪ್ರಾರಂಭೋತ್ಸವದ ದಿನದಂದೆ ಕಲ್ಮಂಜ ಶಾಲೆಯ ಕುಡಿಯುವ ನೀರಿನ ಬಾವಿಯ ಸ್ವಚ್ಛತೆ

Suddi Udaya
error: Content is protected !!