ಧರ್ಮಸ್ಥಳ: ಉಪ್ಪಿನಂಗಡಿ- ಶಿಶಿಲ – ಸುದೆಗಂಡಿ(ಹೊಳೆಗಂಡಿ) ಸಂಚರಿಸುವ ಸರಕಾರಿ ಬಸ್ಸು ಪ್ರಯಾಣಿಕರನ್ನು ಅರ್ಧದಾರಿಯಲ್ಲೇ ಇಳಿಸಿ ಹಿಂದಿರುಗಿ ಬರುತ್ತಿರುವ ಘಟನೆ ಶಿಶಿಲದಲ್ಲಿ ನಡೆಯುತ್ತಿದೆ.

ಈ ಭಾಗಕ್ಕೆ ಸಂಜೆ 4:30 ಸಮಯಕ್ಕೆ ಬರುವ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಬಸ್ಸು ಕೆಟ್ಟಿದೆ ಎಂಬ ನೆಪವನ್ನೊಡ್ಡಿ ಸುದೆಗಂಡಿ(ಹೊಳೆಗಂಡಿ)ಗೆ ಸಂಚರಿಸದೆ ಪ್ರಯಾಣಿಕರನ್ನು ಶಿಶಿಲ ಪೇಟೆಯಲ್ಲಿಯೇ ಇಳಿಸಿ ಮರಳಿ ಬರುವ ಕೆಲಸವಾಗುತ್ತಿದೆ ಎಂಬುವುದರ ಬಗ್ಗೆ ಪ್ರಯಾಣಿಕರು ಸುದ್ದಿ ಉದಯಕ್ಕೆ ತಿಳಿಸಿದ್ದಾರೆ.
ಶಿಶಿಲದಿಂದ ಹೊಳೆಗಂಡಿಗೆ ಹೋಗುವ ದಾರಿ ಮಧ್ಯೆ ನೂರಾರು ಕುಟುಂಬಗಳು ವಾಸವಾಗಿದ್ದು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ವಯಸ್ಕರು, ಉದ್ಯೋಗಿಗಳು, ಹೈನುಗಾರರು ಸುಮಾರು 8 ಕಿ.ಮೀ ಪಾದಯಾತ್ರೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ. ಡಿಪ್ಪೋ ಧರ್ಮಸ್ಥಳ ವ್ಯವಸ್ಥಾಪಕರಿಗೆ ತಿಳಿಸಿದರೂ ಸಮರ್ಪಕವಾಗಿ ಉತ್ತರಿಸುತ್ತಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.












