
ಬೆಳ್ತಂಗಡಿ: ಭಾರತೀಯ ಕಬಡ್ಡಿ ತಂಡದ ನಾಯಕ ಹಾಗೂ ಸ್ಟಾರ್ ಆಟಗಾರ ಪವನ್ ಶೇರಾವತ್ ಅವರು ತಮ್ಮ ಧಾರ್ಮಿಕ ಬದ್ಧತೆ ಹಾಗೂ ನಂಬಿಕೆಯನ್ನು ಮೆರೆಯುವ ಮೂಲಕ ಕರಾವಳಿಯ ಜನರ ಗಮನ ಸೆಳೆದಿದ್ದಾರೆ.

ಭಾರತ ತಂಡವು ಚಿನ್ನದ ಪದಕ ಗೆದ್ದರೆ ಅಳದಂಗಡಿಯ ಪ್ರಸಿದ್ಧ ಸತ್ಯದೇವತೆ ಸನ್ನಿಧಾನಕ್ಕೆ ಬರುವುದಾಗಿ ಹರಕೆ ಹೊತ್ತಿದ್ದ ಅವರು, ಇದೀಗ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಭಾರತಕ್ಕೆ ಚಿನ್ನದ ಗೆಲುವು ತಂದುಕೊಟ್ಟ ಬೆನ್ನಲ್ಲೇ, ಪವನ್ ಶೇರಾವತ್ ಅವರು ಜಪಾನ್‌ನಿಂದಲೇ ಅಳದಂಗಡಿ ಸತ್ಯದೇವತೆ ಕ್ಷೇತ್ರದ ಆಡಳಿತ ಮೋಕ್ತೇಸರರಾದ ಶಿವಪ್ರಸಾದ್ ಅಜಿಲ ಅವರಿಗೆ ವಾಯ್ಸ್ ಮೆಸೇಜ್ ಕಳುಹಿಸಿ, ತಾವು ಹರಕೆ ಹೊತ್ತ ಪ್ರಕಾರ ಶೀಘ್ರದಲ್ಲೇ ಅಳದಂಗಡಿಗೆ ಬಂದು ಸತ್ಯದೇವತೆಯ ದರ್ಶನ ಪಡೆದು ಹರಕೆ ತೀರಿಸುವುದಾಗಿ ಅವರು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ತಾರೆಯೊಬ್ಬರು ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಶ್ರೀ ಸತ್ಯದೇವತಾ ಸನ್ನಿಧಿಗೆ ಹರಕೆ ಹೊತ್ತು, ವಿಜಯದ ನಂತರ ಇಲ್ಲಿಗೆ ಆಗಮಿಸುತ್ತಿರುವುದು ಸ್ಥಳೀಯ ಕ್ರೀಡಾಭಿಮಾನಿಗಳಲ್ಲಿ ಹಾಗೂ ಭಕ್ತರಲ್ಲಿ ತೀವ್ರ ಕುತೂಹಲ ಮತ್ತು ಸಂತಸವನ್ನು ಮೂಡಿಸಿದೆ.












