ಬೆಳ್ತಂಗಡಿ: ದಾವಣಗೆರೆಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಸರ್ಕಾರಿ ಬಸ್‌ನಲ್ಲಿ ಅ.6 ರಂದು ಸಂಜೆ 4 ಗಂಟೆಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಮಾರ್ಗಮಧ್ಯೆ ಅನಿರೀಕ್ಷಿತವಾಗಿ ಅಸ್ವಸ್ಥರಾಗಿ ಪ್ರಜ್ಞೆ ತಪ್ಪಿ, ಮಾತನಾಡಲು ಹಾಗೂ ದೇಹವನ್ನು ಚಲಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಗಮನಿಸಿದ ಸಹ ಪ್ರಯಾಣಿಕರು ಈ ಬಗ್ಗೆ ಚಾಲಕ ನಿರ್ವಾಹಕರಿಗೆ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿಯ ತೀವ್ರತೆ ಅರಿತ ಬಸ್ ಚಾಲಕ ಕಿರಣ್ ಹಾಗೂ ನಿರ್ವಾಹಕ ಸಂತೋಷ್ ಸಂಗಪ್ಪ ಗೌಡ ಕಕ್ಕಿಂಜೆ ಬರುತ್ತಿದ್ದಂತೆಯೇ ನೇರವಾಗಿ ಬಸ್ಸನ್ನು ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಗೆ 4:30 ಕ್ಕೆ ಕೊಂಡೊಯ್ದು ಸಂಕಷ್ಟದಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕಾರ್ಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಅಶ್ರಫ್ ಚಾರ್ಮಾಡಿ, ಫಾರುಕ್ ಕಕ್ಕಿಂಜೆ, ಗಾಂಧಿನಗರ ಹಾಗೂ ನೌಫಾಲ್ ಕಕ್ಕಿಂಜೆ, ಗಾಂಧಿನಗರ ಅವರು ಮಹಿಳೆಗೆ ಅಗತ್ಯ ಸಹಾಯ ಮಾಡುವಲ್ಲಿ ಜೊತೆಯಾಗಿ ನಿಂತಿದ್ದಾರೆ.













