ಬೆಳ್ತಂಗಡಿ: ಕರಾವಳಿ ಕರ್ನಾಟಕದ ಜಾನಪದ ಭಾಷೆಯಾದ ತುಳುವನ್ನು ಡಿಜಿಟಲ್ ಲೋಕದಲ್ಲಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಆಂಡ್ರಾಯ್ಡ್ ಸ್ಮಾಟ್ ಫೋನ್ ಬಳಕೆದಾರರಿಗಾಗಿ ತುಳು ಲಿಪಿಯಲ್ಲೇ ನೇರವಾಗಿ ಟೈಪ್ ಮಾಡಬಹುದಾದ ನೂತನ ಕೀಬೋರ್ಡ್ ಬಿಡುಗಡೆಯಾಗಿದೆ.
ತಂತ್ರಾಂಶ ಅಭಿವೃದ್ಧಿಪಡಿಸುವ ಸಾಫ್ಟ್ ವೇರ್ ಡೆವಲಪರ್‌ಗಳಾದ ಹರ್ಷಿತ್ ದೇವಾಡಿಗ ಹಾಗೂ ಚೈತ್ರ ಪೂಜಾರಿ ಅವರು ಈ ‘ಕುರಲ್ ತುಳು ಟಚ್’ ಕೀಬೋರ್ಡ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ‘ತುಳುನಾಡ ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಇದನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು.
ಈ ಕೀಬೋರ್ಡ್ ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ‘ಬರವು ಸರವು’ ಆಪ್ ಮೂಲಕ ಲಭ್ಯವಿದೆ. ಆಪ್‌ನಲ್ಲಿನ ‘ನ್ಯೂ ಕೀಬೋರ್ಡ್’ ಆಯ್ಕೆಯನ್ನು ಸಕ್ರಿಯಗೊಳಿಸುವ ಮೂಲಕ ಬಳಕೆದಾರರು ವಾಟ್ಸಾಪ್ ಸೇರಿದಂತೆ ವಿವಿಧ ಆಪ್‌ಗಳಲ್ಲಿ ತುಳು ಲಿಪಿಯಲ್ಲೇ ಸಂದೇಶಗಳನ್ನು ಕಳುಹಿಸಬಹುದು. ಜೊತೆಗೆ ತುಳು ಮತ್ತು ಇತರೆ ಕೀಬೋರ್ಡ್ಗಳ ನಡುವೆ ಬದಲಾಯಿಸಲು ಹಾಗೂ ಟೈಪ್ ಮಾಡಿದ ಪಠ್ಯವನ್ನು ಡಿಜಿಟಲ್ ಚಾಟ್‌ಗಾಗಿ ಸ್ಟಿಕ್ಕರ್‌ಗಳಾಗಿ ಪರಿವರ್ತಿಸಿ ಹಂಚಿಕೊಳ್ಳಲು ಸಹ ಇದು ನೆರವಾಗುತ್ತದೆ.
ದೈನಂದಿನ ಸಂವಹನದಲ್ಲಿ ತುಳು ಲಿಪಿ ಸಾಮಾನ್ಯ ಮೊಬೈಲ್ ಕೀಬೋರ್ಡ್ ವಿನ್ಯಾಸದಲ್ಲೇ ರೂಪುಗೊಂಡಿರುವ ‘ಕುರಲ್ ತುಳು ಟಚ್’, ತುಳು ಲಿಪಿಯಲ್ಲಿ ಟೈಪಿಂಗ್ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಿದೆ. ಇದು ತುಳು ಅಕ್ಷರಗಳು, ಸಂಖ್ಯೆಗಳು, ಗುಣಿತಾಕ್ಷರ ಹಾಗೂ ಒತ್ತಕ್ಷರಗಳನ್ನು ಬೆಂಬಲಿಸುವುದರಿAದ ಬಳಕೆದಾರರು ನಿಖರವಾಗಿ ಪದ ಸಂಯೋಜನೆಗಳನ್ನು ಮಾಡಲು ಸಾಧ್ಯವಾಗುತ್ತದೆ.













