ಬೆಳ್ತಂಗಡಿ: ವೈದ್ಯರು ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ. ಪ್ರದೀಪ್ ಎ. ನಾವೂರು ಅವರ ಆರೋಗ್ಯ ಕ್ಲಿನಿಕ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆಗೆ ಆಯುಷ್ ಫೆಡರೇಶನ್ ಆಫ್ ಇಂಡಿಯಾ, ಬೆಳ್ತಂಗಡಿ ಬ್ರಾಂಚ್ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಡಾ. ಪ್ರದೀಪ್ ನಾವೂರು ಅವರು ವೈದ್ಯಕೀಯ ಸೇವೆಯ ಜೊತೆಗೆ ಸಮಾಜದ ಆರೋಗ್ಯ ಮತ್ತು ಜಾಗೃತಿಯ ದೃಷ್ಟಿಯಿಂದ ಹಲವಾರು ಉಪನ್ಯಾಸ ಹಾಗೂ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ದೇವಸ್ಥಾನ, ದೈವಸ್ಥಾನ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಮುಂಚೂಣಿ ವ್ಯಕ್ತಿಯಾಗಿದ್ದಾರೆ.
ಇಂತಹ ಸಮಾಜಮುಖಿ ಹಾಗೂ ಸೇವಾ ಮನೋಭಾವದ ವ್ಯಕ್ತಿಯ ಆರೋಗ್ಯ ಕ್ಲಿನಿಕ್‌ಗೆ ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ಬೆಂಕಿ ಹಚ್ಚಿರುವುದು ಅತ್ಯಂತ ಕಳವಳಕಾರಿ ಹಾಗೂ ಖಂಡನೀಯ ಸಂಗತಿಯಾಗಿದೆ. ವೈದ್ಯರು ಸಮಾಜದ ಆರೋಗ್ಯ ಕಾಪಾಡುವ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದು, ಅವರ ಸೇವಾ ಕೇಂದ್ರದ ಮೇಲೆಯೇ ಇಂತಹ ಕೃತ್ಯಕ್ಕೆ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಫೆಡರೇಶನ್ ತಿಳಿಸಿದೆ.
ಡಾ. ಪ್ರದೀಪ್ ನಾವೂರು ಅವರು ಕೇವಲ ವೈದ್ಯರಲ್ಲ,ಸಮಾಜದ ಪ್ರತಿಯೊಬ್ಬರಿಗೂ ಅಗತ್ಯವಿರುವ ಒಬ್ಬ ಉತ್ತಮ ವ್ಯಕ್ತಿತ್ವದ ಸಮಾಜಮುಖಿ ವ್ಯಕ್ತಿ. ಅವರ ಆರೋಗ್ಯ ಸೇವೆ ಹಾಗೂ ಸಾಮಾಜಿಕ ಕಾಳಜಿ ಶ್ಲಾಘನೀಯವಾಗಿದೆ. ಇಂತಹ ವ್ಯಕ್ತಿಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿರುವುದು ಅತ್ಯಂತ ಖಂಡನೀಯ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಕೃತ್ಯದ ಹಿಂದಿರುವ ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಯುಷ್ ಫೆಡರೇಶನ್ ಆಫ್ ಇಂಡಿಯಾ, ಬೆಳ್ತಂಗಡಿ ಬ್ರಾಂಚ್ ಅಧ್ಯಕ್ಷೆ ಡಾ. ಸುಷ್ಮಾ ಡೋಂಗ್ರೆ ಒತ್ತಾಯಿಸಿದ್ದಾರೆ.













