ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿಭಾಗದ ವತಿಯಿಂದ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿ ಭವಿಷ್ಯದ ನಾಯಕರನ್ನು ನಿರ್ಮಿಸುವ ‘ವಿಶಿಷ್ಟ’ ಎಂಬ ವಿದ್ಯಾರ್ಥಿಗಳ ಪರಿಕಲ್ಪನೆಯಲ್ಲಿ “Stimulating Entrepreneurial Spirit 5.0” ಎಂಬ ಒಂದು ದಿನದ ಉದ್ಯಮಶೀಲತಾ ಬೂಟ್ ಕ್ಯಾಂಪ್ ಹಾಗು ವಿದ್ಯಾರ್ಥಿಗಳ ನೂತನ ಸ್ಟಾರ್ಟ್‌ಅಪ್‌ಗಳ ಶುಭಾರಂಭ ಸಮಾರಂಭ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಯಮಿಯಾಗಿರುವ ಹಾಗೂ ಅಳದಂಗಡಿಯ ಸೇಂಟ್ ಪೀಟರ್ ಕ್ಲೇವರ್ ಇಂಗ್ಲಿಷ್ ಮೀಡಿಯಂ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಮೋನಿಕಾ ನೀಲೋಫರ್ ಡಿಸೋಜಾ ನೂತನ ಸ್ಟಾರ್ಟ್‌ಅಪ್‌ಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಇವರು, ಪ್ರತಿಯೊಂದು ದೊಡ್ಡ ಉದ್ಯಮವೂ ಆರಂಭದಲ್ಲಿ ಸಣ್ಣ ಕನಸು, ಸಣ್ಣ ಪ್ರಯತ್ನ ಹಾಗು ಹೊಸ ಆಲೋಚನೆಯಿಂದಲೇ ಆರಂಭವಾಗುತ್ತದೆ. ಆ ಆಲೋಚನೆಗಳು ದೃಢಸಂಕಲ್ಪದಿಂದ ಕಾರ್ಯರೂಪಕ್ಕೆ ತಂದು, ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ನಿರಂತರವಾಗಿ ಮುನ್ನಡೆದಾಗ ಮಾತ್ರ ಅದು ದೊಡ್ಡ ಉದ್ಯಮವಾಗಿ ಬೆಳೆಯಲು ಸಾಧ್ಯ.

ವಿದ್ಯಾರ್ಥಿಗಳು ಕೇವಲ ಉದ್ಯಮವನ್ನು ಆರಂಭಿಸುವ ಕೌಶಲ್ಯವನ್ನಷ್ಟೇ ಅಲ್ಲದೆ, ಅದನ್ನು ನಿರಂತರವಾಗಿ ನಿರ್ವಹಿಸುವ ಮತ್ತು ಸುಸ್ಥಿರವಾಗಿ ಬೆಳೆಸುವ ಸಾಮರ್ಥ್ಯವನ್ನೂ ಬೆಳೆಸಿಕೊಳ್ಳಬೇಕು. ಮಾರುಕಟ್ಟೆಯ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವುದು, ಗ್ರಾಹಕರ ಅಗತ್ಯಗಳನ್ನು ಗುರುತಿಸುವುದು, ಉತ್ಪನ್ನದ ಗುಣಮಟ್ಟವನ್ನು ಕಾಪಾಡುವುದು, ಸೂಕ್ತ ಬೆಲೆ ನಿಗದಿಪಡಿಸುವುದು, ಹಣಕಾಸಿನ ನಿರ್ವಹಣೆ ಹಾಗೂ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಉದ್ಯಮದ ಯಶಸ್ಸಿಗೆ ಅಗತ್ಯ.
ಈಗಾಗಲೇ ವಿದ್ಯಾರ್ಥಿಗಳು ತಮ್ಮ ಉತ್ಪನ್ನಗಳನ್ನು ಕಾನೂನಾತ್ಮಕವಾಗಿ ನೋಂದಾಯಿಸಿಕೊಂಡು ಸೂಕ್ತ ಪರವಾನಗಿಗಳನ್ನು ಪಡೆದುಕೊಂಡಿರುವುದರಿಂದ, ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಕ್ಕೆ ವಿಶಿಷ್ಟ ಗುರುತನ್ನು ಸೃಷ್ಟಿಸುವುದು ಮಾತ್ರವಲ್ಲದೆ, ಗುಣಮಟ್ಟದ ಉತ್ಪನ್ನ ಮತ್ತು ಉತ್ತಮ ಸೇವೆಯ ಮೂಲಕ ಜನರ ವಿಶ್ವಾಸವನ್ನು ಗಳಿಸಬೇಕು. ಒಂದು ಬ್ರಾಂಡ್‌ನ ನಿಜವಾದ ಮೌಲ್ಯವು ಅದರ ಹೆಸರಿನಲ್ಲಿ ಮಾತ್ರವಲ್ಲ, ಅದನ್ನು ಬಳಸುವ ಗ್ರಾಹಕರ ವಿಶ್ವಾಸ ಮತ್ತು ಅನುಭವದಲ್ಲಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಉತ್ಪನ್ನವನ್ನು ವೃತ್ತಿಪರವಾಗಿ ಅಭಿವೃದ್ಧಿಪಡಿಸಿ, ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ಬೆಳೆಸುವ ದೃಷ್ಟಿಕೋನ ಹೊಂದಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ಎಸ್.ಡಿ.ಎಂ ಸಂಸ್ಥೆ ವಿಪುಲವಾದ ಅವಕಾಶ ಮತ್ತು ವ್ಯವಸ್ಥೆಗಳನ್ನು ಕಲ್ಪಿಸಿಕೊಡುತ್ತಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಪೋಷಕರ ಪ್ರೋತ್ಸಾಹ ಮತ್ತು ಉಪನ್ಯಾಸಕರ ಮಾರ್ಗದರ್ಶನದಿಂದ ಬದುಕಿನ ಗುರಿಯತ್ತ ಹೆಜ್ಜೆ ಹಾಕಬೇಕು. ನಕಾರಾತ್ಮಕ ಚಿಂತನೆಗಳಿಗೆ ತಲೆದೂಗದೆ ಸಕಾರಾತ್ಮಕ ಯೋಚನೆ ಮತ್ತು ಯೋಜನೆಯೊಂದಿಗೆ ಮುಂದೆ ಸಾಗಬೇಕು.
ಪ್ರಸ್ತುತ ಬದಲಾಗುತ್ತಿರುವ ಶೈಕ್ಷಣಿಕ ಪರಿಸರದಲ್ಲಿ ಕೇವಲ ವಿಷಯಜ್ಞಾನ ಹೊಂದಿರುವುದಕ್ಕಿಂತ, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಕೌಶಲ್ಯಗಳು ಅತ್ಯಂತ ಅಗತ್ಯವಾಗಿವೆ. ವಿದ್ಯಾರ್ಥಿಗಳು ಪ್ರಶ್ನಿಸುವ, ವಿಶ್ಲೇಷಿಸುವ, ಹೊಸ ಆಲೋಚನೆಗಳನ್ನು ರೂಪಿಸುವ ಹಾಗೂ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣವು ವಿದ್ಯಾರ್ಥಿಗಳನ್ನು ಪರೀಕ್ಷೆಗಳಿಗೆ ಮಾತ್ರ ಸಿದ್ಧಪಡಿಸುವ ಬದಲು, ಜೀವನದ ವಿವಿಧ ಸವಾಲುಗಳನ್ನು ಎದುರಿಸಲು ಮತ್ತು ಭವಿಷ್ಯದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಜ್ಜುಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.
2019 ರ ಸಂದರ್ಭದಲ್ಲಿ ಯುಜಿಸಿಯ ಮಾರ್ಗಸೂಚಿಯಂತೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ಡಾ.ಬಿ ಯಶೋವರ್ಮರವರ ಮಾರ್ಗದರ್ಶನದಲ್ಲಿ ನೂತನವಾಗಿ ಬಿವೋಕ್ ಕೋರ್ಸ್ ಆರಂಭವಾದಾಗ ಹಲವು ಸವಾಲುಗಳಿದ್ದವು. ಆದರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಮೇಲಿನ ಭರವಸೆಯಿಂದ ಧೈರ್ಯದಿಂದ ಮುಂದೆ ಹೆಜ್ಜೆ ಹಾಕಿತು. ಈ ನಡುವೆ ಇಂದು ಬಿವೋಕ್ ಕೋರ್ಸ್ ನ ವಿದ್ಯಾರ್ಥಿಗಳು ತಾವೇ ಉದ್ಯೋಗದಾತರಾಗಿ ಬೆಳೆದು ನಿಂತಿರುವುದು ಕೋರ್ಸ್ ಆರಂಭದ ಆಶಯವನ್ನು ಈಡೇರಿಸಿದಂತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ 05 ಉತ್ಪನ್ನಗಳನ್ನು ವೇದಿಕೆಯಲ್ಲಿ ಅತಿಥಿಗಳ ಸಮ್ಮುಖದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು. ಎಲ್ಲಾ ಉತ್ಪನ್ನಗಳನ್ನು ಕಾನೂನಿನ ವ್ಯಾಪ್ತಿಯಲ್ಲಿ ಸ್ವತಃ ವಿದ್ಯಾರ್ಥಿಗಳೇ ಪರವಣಿಗೆ ಪಡೆದು ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು. ಉತ್ಪನ್ನ ಮತ್ತು ಉದ್ದಿಮೆಗೆ ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿಭಾಗ ಮುಖ್ಯಸ್ಥ ಆಶ್ವಿತ್ ಎಚ್.ಆರ್. ಮಾರ್ಗದರ್ಶನ ನೀಡಿರುತ್ತಾರೆ.
ಕಾರ್ಯಕ್ರಮದಲ್ಲಿ ಉದ್ಯಮಿ ಮೋನಿಕಾ ನೀಲೋಫರ್ ಡಿಸೋಜಾ ರವರನ್ನು ಎಸ್.ಡಿ.ಎಂ ಕಾಲೇಜಿನ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ, ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿಭಾಗ ಮುಖ್ಯಸ್ಥ ಆಶ್ವಿತ್ ಎಚ್.ಆರ್. ಗೌರವ ಉಪಸ್ಥಿತಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಪಿಯುಸಿ, ಸ್ನಾತಕೋತ್ತರ ಹಾಗು ಬಿವೋಕ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ವಿಭಾಗದ ಸಹ ಪ್ರಾಧ್ಯಾಪಕರುಗಳಾದ ಪ್ರವೀಣ ಡಿ, ಡಾ. ಶಶಾಂಕ್ ಬಿ.ಎಸ್ ಮತ್ತು ಮಾಧುರಿ ಗೌಡ ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿಭಾಗ ಮುಖ್ಯಸ್ಥ ಆಶ್ವಿತ್ ಎಚ್.ಆರ್. ಕಾರ್ಯಕ್ರಮವನ್ನು ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸುಪ್ರಿತಾ ಮತ್ತು ತಂಡದವರು ಪ್ರಾರ್ಥನೆಯನ್ನು ಹಾಡಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ನಾಗೇಶ್ ಮತ್ತು ವೀಕ್ಷಿತಾ ನಿರೂಪಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಡಿ ವಂದಿಸಿದರು.
ವಿದ್ಯಾರ್ಥಿಗಳ 5 ಸ್ಟಾರ್ಟ್‌ಅಪ್‌ಗಳಿಗೆ ಅಧಿಕೃತ ಚಾಲನೆ :
ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿಭಾಗದ ವಿದ್ಯಾರ್ಥಿಗಳಾದ ವೀಕ್ಷಿತಾ ಮತ್ತು ಸುಪ್ರೀತಾ ಅವರ ‘Swadish’ ಉಪ್ಪಿನಕಾಯಿ ಉದ್ಯಮ, ಕ್ಯಾರೋಲಿನ್ ಮೆನೆಜಸ್ ಅವರ ‘Rice Pearl Delight’ ರೈಸ್ ಲಡ್ಡು ಉದ್ಯಮ, ಕಿಶೋರ್ ಕುಮಾರ್ ಅವರ ‘Prakruthi Power’ ಸಿರಿಧಾನ್ಯ ಆರೋಗ್ಯ ಮಿಶ್ರಣ ಪುಡಿ ಉದ್ಯಮ, ಸಾನ್ವಿ ಮತ್ತು ಯಶ್ವಿನಿ ಅವರ ‘Twinkle Petals’ ಕರಕುಶಲ ಉತ್ಪನ್ನಗಳ ಉದ್ಯಮ ಹಾಗೂ ಸೌರವ್ ಗೌಡ ಡಿ.ಎನ್. ಅವರ ‘Design Post.14’ ಗ್ರಾಫಿಕ್ ಡಿಸೈನ್, ಆಕಾಶ್ ಆರ್ ಮತ್ತು ಆದಿತ್ಯ ರವರ ಕಬ್ಬಿನ ತ್ಯಾಜ್ಯದಿಂದ ಸುಸ್ಥಿರ ಜೀವನಕ್ಕೆ ನೂತನ ಪರಿಹಾರ ಎಂಬ ಎಸ್.ಜಿ.ಕೆ ಇಕೋವನ ಸೇವಾ ಉದ್ಯಮಗಳಿಗೆ ಚಾಲನೆ ನೀಡಲಾಯಿತು. ಆಹಾರ ಉತ್ಪನ್ನಗಳ ಉದ್ಯಮಗಳಿಗೆ FSSAI ಪರವಾನಗಿ ಪಡೆಯುವ ಮೂಲಕ ವಿದ್ಯಾರ್ಥಿಗಳು ತಮ್ಮ ಉದ್ಯಮಗಳನ್ನು ವೃತ್ತಿಪರವಾಗಿ ಆರಂಭಿಸಿರುವುದು ವಿಶೇಷವಾಗಿತ್ತು.













