34.1 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್‌.ಡಿ.ಎಂ ಕಾಲೇಜು : ‘ChemSyn-2026’ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟನಾ ಸಮಾರಂಭ

ಉಜಿರೆ: ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಗತಿಯ ನಡುವೆಯೂ ಮಾನವೀಯತೆ ಹಾಗೂ ಪರಿಸರ ಸುಸ್ಥಿರತೆಯ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಂದರ್ಭದಲ್ಲಿ, ವೈಜ್ಞಾನಿಕ ಚಿಂತನೆ ಮತ್ತು ಜವಾಬ್ದಾರಿಯುತ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಮಾಜಿ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಬಿ. ಶಿವರಾಮ ಹೊಳ್ಳ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ (ಸ್ವಾಯತ್ತ), ರಸಾಯನಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಲಾದ “Chemical Synergies: Innovations for Health, Environmental Sustainability and Industrial Transformation (ChemSyn-2026)” ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ತಂತ್ರಜ್ಞಾನದಲ್ಲಿ ಅಪಾರ ಪ್ರಗತಿಯನ್ನು ಸಾಧಿಸಿರುವ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ತಂತ್ರಜ್ಞಾನಗಳು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಅವು ಮಾನವನ ಸಾಮರ್ಥ್ಯವನ್ನು ವಿಸ್ತರಿಸುವ ಶಕ್ತಿಶಾಲಿ ಸಾಧನಗಳಾಗಿವೆ. ಆದರೆ ತಂತ್ರಜ್ಞಾನದ ಬಳಕೆಯ ಜೊತೆಗೆ ವೈಜ್ಞಾನಿಕ ಚಿಂತನೆ, ವಿವೇಚನೆ ಮತ್ತು ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಯು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ಭವಿಷ್ಯದ ಪೀಳಿಗೆಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪರಿಸರ ಸುಸ್ಥಿರತೆ ಮತ್ತು ಸುಸ್ಥಿರ ಉತ್ಪಾದನಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ರಸಾಯನಶಾಸ್ತ್ರದ ಜ್ಞಾನವು ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗದೆ, ಪ್ರಸ್ತುತ ಜಗತ್ತು ಎದುರಿಸುತ್ತಿರುವ ಆರೋಗ್ಯ, ಪರಿಸರ ಮತ್ತು ಕೈಗಾರಿಕಾ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗಬೇಕು ಎಂದರು.

ಪುಣೆಯ ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ (CSIR-NCL)ಯ ಫಿಸಿಕಲ್/ಮೆಟೀರಿಯಲ್ ಕೆಮಿಸ್ಟ್ರಿ ವಿಭಾಗದ ಮುಖ್ಯ ವಿಜ್ಞಾನಿ ಡಾ. ಭಗವತುಲ ಎಲ್.ವಿ. ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿ ಸದಾ ಕುತೂಹಲ ಹಾಗೂ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಪ್ರಶ್ನಿಸುವ ಮನೋಭಾವದಿಂದಲೇ ಹುಟ್ಟಿಕೊಳ್ಳುತ್ತವೆ. ಸಾಮಾನ್ಯವಾಗಿ ಕಾಣುವ ಸಂಗತಿಗಳಲ್ಲಿಯೂ ವೈಜ್ಞಾನಿಕ ವಿಚಾರಗಳನ್ನು ಗುರುತಿಸುವ ದೃಷ್ಟಿಕೋನವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ವಿಭಿನ್ನವಾಗಿ ಯೋಚಿಸುವುದು, ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸುವುದು ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅರಿತುಕೊಳ್ಳುವುದು ವಿದ್ಯಾರ್ಥಿಗಳ ಜ್ಞಾನವನ್ನು ವಿಸ್ತರಿಸುತ್ತದೆ. ತರಗತಿಯಲ್ಲಿ ಕಲಿಯುವ ಜ್ಞಾನವನ್ನು ಕ್ಷೇತ್ರದಲ್ಲಿನ ನೈಜ ಬೆಳವಣಿಗೆಗಳೊಂದಿಗೆ ಸಂಪರ್ಕಿಸಿಕೊಂಡು ತಮ್ಮ ಭವಿಷ್ಯದ ವೃತ್ತಿಜೀವನಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ರಸಾಯನಶಾಸ್ತ್ರ ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗ: ಪ್ರೊ. ವಿಶ್ವನಾಥ ಪಿ.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಮಾತನಾಡಿ, ರಸಾಯನಶಾಸ್ತ್ರವು ಕೇವಲ ಪ್ರಯೋಗಾಲಯ ಅಥವಾ ಪಠ್ಯಪುಸ್ತಕಕ್ಕೆ ಸೀಮಿತವಾದ ವಿಷಯವಲ್ಲ; ಅದು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿದೆ. ನಾವು ದಿನನಿತ್ಯ ಬಳಸುವ ಅನೇಕ ಉತ್ಪನ್ನಗಳ ಹಿಂದೆ ರಸಾಯನಶಾಸ್ತ್ರದ ಕೊಡುಗೆ ಇದೆ. ಆಹಾರ, ಔಷಧ, ಸೌಂದರ್ಯವರ್ಧಕ ಉತ್ಪನ್ನಗಳು, ಕೃಷಿ, ಕೈಗಾರಿಕೆ ಸೇರಿದಂತೆ ಜೀವನದ ವಿವಿಧ ಕ್ಷೇತ್ರಗಳಲ್ಲಿ ರಸಾಯನಶಾಸ್ತ್ರ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ರಸಾಯನಶಾಸ್ತ್ರವನ್ನು ವಿಜ್ಞಾನ ಕ್ಷೇತ್ರದ ಕೇಂದ್ರಬಿಂದುಗಳಲ್ಲಿ ಒಂದು.

ಕೈಗಾರಿಕಾ ಬೆಳವಣಿಗೆಯೊಂದಿಗೆ ಜವಾಬ್ದಾರಿಯುತ ಮತ್ತು ಪರಿಸರ ಸ್ನೇಹಿ ಕೈಗಾರಿಕಾ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯುವಂತಹ ವೈಜ್ಞಾನಿಕ ಚಿಂತನೆ ಹಾಗೂ ಸಂಶೋಧನೆ ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು. ಜ್ಞಾನವನ್ನು ಹಂಚಿಕೊಳ್ಳುವುದು, ವಿಭಿನ್ನ ಆಲೋಚನೆಗಳನ್ನು ಒಗ್ಗೂಡಿಸುವುದು ಮತ್ತು ಸಂಶೋಧನೆಯನ್ನು ಸಮಾಜದ ಅಗತ್ಯಗಳೊಂದಿಗೆ ಸಂಪರ್ಕಿಸುವುದು ಇಂತಹ ರಾಷ್ಟ್ರೀಯ ಸಮ್ಮೇಳನಗಳ ಪ್ರಮುಖ ಉದ್ದೇಶವಾಗಿದೆ ಎಂದು ಪ್ರೊ. ವಿಶ್ವನಾಥ ಪಿ. ಅಭಿಪ್ರಾಯಪಟ್ಟರು.

ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ChemSyn-2026 ರಾಷ್ಟ್ರೀಯ ಸಮ್ಮೇಳನಕ್ಕೆ ಸಂಬಂಧಿಸಿದ “Chemical Synergies: Innovations for Health, Environmental Sustainability and Industrial Transformation ಪುಸ್ತಕವನ್ನು ಅತಿಥಿಗಳು ಬಿಡುಗಡೆ ಮಾಡಿದರು. ಬಳಿಕ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು.

ಉದ್ಘಾಟನಾ ವೇದಿಕೆಯಲ್ಲಿ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ., ಸಮ್ಮೇಳನದ ಉದ್ಘಾಟಕರಾದ ಪ್ರೊ. ಬಿ. ಶಿವರಾಮ ಹೊಳ್ಳ, ಮುಖ್ಯ ಅತಿಥಿ ಡಾ. ಭಗವತುಲ ಎಲ್.ವಿ. ಪ್ರಸಾದ್, ಕನ್ವೀನರ್ ನಂದಾ ಕುಮಾರಿ ಕೆ.ಪಿ., ಕೋ-ಕನ್ವೀನರ್ ದಿವ್ಯಾ ಹಾಗೂ ಡಾ. ಗಾನವಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಕುಲಸಚಿವ ಪ್ರೊ ಶ್ರೀಧರ್ ಎನ್ ಭಟ್ಟ, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು,
ವಿವಿಧ ಕಾಲೇಜುಗಳು ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು ಹಾಗೂ ಪ್ರಬಂಧ ಮಂಡನಕಾರರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಸಮ್ಮೇಳನದ ಕನ್ವೀನರ್ ನಂದಾ ಕುಮಾರಿ ಕೆ.ಪಿ. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ಸಂಗೀತಾ ಬಿ. ಹಾಗೂ ವಿದ್ಯಾರ್ಥಿನಿ ಅನ್ವಿತಾ ಸೆರಾವೊ ಕಾರ್ಯಕ್ರಮವನ್ನು ನಿರೂಪಿಸಿದರು. ಕೋ-ಕನ್ವೀನರ್ ದಿವ್ಯಾ ವಂದನಾರ್ಪಣೆ ಸಲ್ಲಿಸಿದರು.

Related posts

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್: ವಸಂತ ಗಿಳಿಯಾರ್ ವಿರುದ್ದ ಕಾನೂನು ಕ್ರಮಕ್ಕೆ ವಸಂತ ಬಂಗೇರ ಅಭಿಮಾನಿ ಬಳಗದಿಂದ ಒತ್ತಾಯ: ಸೌಜನ್ಯ ಆತ್ಯಚಾರ ಮತ್ತು ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬೇಕೆಂಬುದು ವಸಂತ ಬಂಗೇರ ಅಭಿಮಾನಿ ಬಳಗದ ನಿಲುವು

Suddi Udaya

ಬೆಳಾಲು: ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಾಗರಪಂಚಮಿಯ ಪ್ರಯುಕ್ತ ನಾಗತಂಬಿಲ ಸೇವೆ

Suddi Udaya

ಧರ್ಮಸ್ಥಳ: ಮುಳಿಕ್ಕಾರ್ ಭಾರಿ ಗಾಳಿ ಮಳೆಗೆ ಹಾನಿಯಾದ ಮನೆಗೆ ಧರ್ಮಸ್ಥಳ ಗ್ರಾ.ಪಂ. ನಿಂದ ಆರ್ಥಿಕ ನೆರವು

Suddi Udaya

ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಕಡಮ್ಮಾಜೆ ಫಾರ್ಮ್ಸ್ ನ ದೇವಿಪ್ರಸಾದ್ ಕೆ. ಗೌಡರಿಗೆ ಕನ್ನಡಿಗ-2026 ಪ್ರಶಸ್ತಿ

Suddi Udaya

ನಾಳೆ(ಅ.31) ಬೆಳ್ತಂಗಡಿಯಲ್ಲಿ ಬಿಜೆಪಿ ಯುವಮೋರ್ಚಾದಿಂದ ದೀಪಾವಳಿ ದೋಸೆ ಹಬ್ಬ: ಗೋರಕ್ಷಕ ಪುನೀತ್ ಕೆರೆಹಳ್ಳಿ ಭಾಗಿ

Suddi Udaya

ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ

Suddi Udaya
error: Content is protected !!