ಬೆಳ್ತಂಗಡಿ: ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಕಾರದೊಂದಿಗೆ ಅ.29ರಂದು ಬೆಳ್ತಂಗಡಿಯ ಸಮಾಜ ಮಂದಿರದ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಆಯೋಜಿಸಲಾಗಿದ್ದ ‘ಯಕ್ಷೋತ್ಸವ’ ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ರದ್ದುಗೊಳಿಸಿದೆ.
ಕಾರ್ಯಕ್ರಮದ ಆಯೋಜಕರು ನಿಗದಿತ ಶಿಷ್ಟಾಚಾರವನ್ನು ಪಾಲಿಸದಿರುವುದರಿಂದ ಅಕಾಡೆಮಿಯ ಗೌರವಕ್ಕೆ ಚ್ಯುತಿ ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಅವರು ಅಧಿಕೃತ ಆದೇಶದಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಈ ಆದೇಶವನ್ನು ಉಲ್ಲಂಘಿಸಿ ಕಾರ್ಯಕ್ರಮವನ್ನು ಆಯೋಜಿಸಿದಲ್ಲಿ ಅಕಾಡೆಮಿಯ ವತಿಯಿಂದ ಯಾವುದೇ ರೀತಿಯ ಅನುದಾನವನ್ನು ನೀಡಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
ಅಕ್ಟೋಬರ್ 29ರಂದು ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ನಡೆಯಬೇಕಿದ್ದ ಯಕ್ಷೋತ್ಸವದಲ್ಲಿ ಉದ್ಘಾಟನಾ ಸಮಾರಂಭ, ಮಕ್ಕಳ ಯಕ್ಷಗಾನ, ತಾಳಮದ್ದಳೆ ಹಾಗೂ ಯಕ್ಷಗಾನ ಬಯಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದೀಗ ಅಕಾಡೆಮಿಯ ಆದೇಶದ ಹಿನ್ನೆಲೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ರದ್ದಾಗಿವೆ.













