ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಸೌಜನ್ಯ ಭೀಕರ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಮರುತನಿಖೆ ಪ್ರಕ್ರಿಯೆಯನ್ನು ವಿಶೇಷ ತನಿಖಾ ತಂಡ (SIT) ಚುರುಕುಗೊಳಿಸಿದ್ದು, ಈ ಮಹತ್ವದ ತನಿಖೆಯ ಭಾಗವಾಗಿ ಪ್ರಕರಣ ನಡೆದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಬೆಳ್ತಂಗಡಿಯ ಅಂದಿನ ಡಿವೈಎಸ್‌ಪಿ, ಸಿಪಿಐ ಹಾಗೂ ಪಿಎಸ್‌ಐ ಸೇರಿದಂತೆ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಇಂದು ಮಂಗಳೂರಿನ ಎಸ್‌ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ತನಿಖಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಘಟನೆಗೆ ಸಂಬಂಧಿಸಿದ ಮಹತ್ವದ ಕಡತಗಳು ಹಾಗೂ ಮೂಲ ದಾಖಲೆಗಳೊಂದಿಗೆ ಅಧಿಕಾರಿಗಳು ಹಾಜರಾಗಿದ್ದಾರೆ. ಧರ್ಮಸ್ಥಳ ಮತ್ತು ಉಜಿರೆ ಭಾಗದಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣದ ಆರಂಭಿಕ ತನಿಖೆಯಲ್ಲಿ ಲೋಪಗಳು ನಡೆದಿವೆ ಹಾಗೂ ಸಾಕ್ಷ್ಯ ನಾಶಪಡಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಮರುತನಿಖೆಗೆ ಸೂಚಿಸಲಾಗಿದ್ದು, ಅಂದಿನ ತನಿಖಾ ತಂಡದಲ್ಲಿದ್ದ ಅಧಿಕಾರಿಗಳನ್ನು ಎಸ್ ಐಟಿ ಮುಖ್ಯಸ್ಥರು ಮತ್ತು ಸಿಬ್ಬಂದಿ ಮುಖಾಮುಖಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.ಬೆಳ್ತಂಗಡಿಯ ಅಂದಿನ ಡಿವೈಎಸ್‌ಪಿ (DySP), ವೃತ್ತ ನಿರೀಕ್ಷಕರು (CPI) ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಎಸ್ಐಟಿ ಉನ್ನತಾಧಿಕಾರಿಗಳ ಮುಂದೆ ವಿಚಾರಣೆಗೆ ಕುಳಿತಿದ್ದಾರೆ.
ಕೇಸ್ ಡೈರಿ (Case Diary), ಪ್ರಥಮ ವರ್ತಮಾನ ವರದಿ (FIR), ಮಹಜರ್ ಪ್ರತಿಗಳು ಹಾಗೂ ವಶಪಡಿಸಿಕೊಂಡಿದ್ದ ಸಾಕ್ಷಾಧಾರಗಳ ಕುರಿತು ಎಸ್‌ಐಟಿ ಅಧಿಕಾರಿಗಳು ಸುದೀರ್ಘ ಪ್ರಶ್ನಾವಳಿಗಳನ್ನು ನಡೆಸಿ ಮಾಹಿತಿ ಕಲೆಹಾಕುತ್ತಿದ್ದಾರೆ.











