ಉಜಿರೆ: ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳ ಪಾತ್ರದ ಕುರಿತು ಸಂಶೋಧನೆ ನಡೆಸಿದ ಉಜಿರೆಯ ಎಸ್‌ಡಿಎಂ ಕಾಲೇಜಿನ (ಸ್ವಾಯತ್ತ) ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಫಾತಿಮಾ ಸಫೀರಾ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ.
‘ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳ ಪಾತ್ರ: ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಮಹಿಳೆಯರನ್ನು ಕುರಿತ ಅಧ್ಯಯನ’ ಎಂಬ ವಿಷಯದ ಕುರಿತು ಅವರು ಸಂಶೋಧನೆ ಕೈಗೊಂಡಿದ್ದರು. ಸ್ವಸಹಾಯ ಸಂಘಗಳು ಮುಸ್ಲಿಂ ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ಸ್ಥಾನಮಾನ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಸಬಲೀಕರಣದ ಪ್ರಕ್ರಿಯೆಯಲ್ಲಿ ವಹಿಸುವ ಪಾತ್ರವನ್ನು ಈ ಅಧ್ಯಯನವು ವಿಶ್ಲೇಷಿಸಿದೆ. ಮಹಿಳೆಯರ ಬದುಕಿನಲ್ಲಿ ಸ್ವಸಹಾಯ ಸಂಘಗಳು ಉಂಟುಮಾಡುವ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಕುರಿತೂ ಸಂಶೋಧನೆ ಬೆಳಕು ಚೆಲ್ಲಿದೆ.
ಡಾ. ವೇದವ ಪಿ. ಅವರ ಮಾರ್ಗದರ್ಶನದಲ್ಲಿ ಫಾತಿಮಾ ಸಫೀರಾ ಅವರು ಈ ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ.
ಇವರು ಕೆ. ಹಂಝಾ ಆದಂ ಮತ್ತು ದಿವಂಗತ ಜಮೀಲಾ ದಂಪತಿಯ ಪುತ್ರಿ ಹಾಗೂ ಬಿ. ಎ. ಶಮೀವುಲ್ಲಾ ಅವರ ಪತ್ನಿ.
ಅವರ ಈ ಶೈಕ್ಷಣಿಕ ಸಾಧನೆಗೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.











