
ಬೆಳ್ತಂಗಡಿ; ಉಜಿರೆ ಅನುಗ್ರಹ ಶಾಲೆಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನ.25 ರಂದು ರಾತ್ರಿ ಬೈಕ್ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತಕ್ಕೆ ಕಾರಣವಾದ ಕಾರು ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿದ್ದು ಸಿಸಿ ಟಿ.ವಿ ದೃಷ್ಯಾವಳಿಯಲ್ಲಿ ದಾಖಲಾಗಿದೆ.
ಬೈಕ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಕಾಜೂರು ನಿವಾಸಿಗಳಾದ ಉನೈಸ್ ಮತ್ತು ಝುಬೈದಾ(46) ಅವರು ಗಾಯಗೊಂಡವರು. ಈ ಪೈಕಿ ಝುಬೈದಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳು ಝುಬೈದಾ ಅವರು ಕಾಜೂರು ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಅವರ ಪತ್ನಿ. ಬೆಳಾಲಿನಲ್ಲಿ ನಡೆದ ಸಂಬಂಧಿಕರ ಮರಣಕ್ಕೆ ಹೋಗಿ, ಇಬ್ರಾಹಿಂ ಅವರ ಸಹೋದರನ ಪುತ್ರ ಉನೈಸ್ ಅವರ ಜೊತೆ ವಾಪಾಸಾಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಿನಿಂದ ಹೋಗುತ್ತಿದ್ದ ಬಿಳಿ ಬಣ್ಣದ ಶಿಫ್ಟ್ ಅನ್ನು ಹೋಲುವ ಕಾರು ಒಮ್ಮೆಲೇ ರಸ್ತೆ ಎಡ ಭಾಗಕ್ಕೆ ನಿಧಾನವಾಗಿ ಸರಿದು ಏಕಾಏಕಿ ಬಲಕ್ಕೆ ತಿರುಗಿದಾಗ ಹಿಂಭಾಗದಿಂದ ಬರುತ್ತಿದ್ದ ಉನೈಸ್ ಅವರ ಬೈಕ್ ನಿಯಂತ್ರಣಕ್ಕೆ ಬಾರದೆ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕಿನಲ್ಲಿದ್ದ ಇಬ್ಬರೂ ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ದೃಷ್ಯವನ್ನು ನೋಡಿದ ಕಾರಿನ ಚಾಲಕ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಪಘಾತದ ವೇಳೆ ಬೈಕ್ ಸವಾರರಾಗಿದ್ದ ಇಬ್ಬರೂ ರಸ್ತೆಯ ಸಂಪೂರ್ಣ ಬಲಭಾಗಕ್ಕೆ ಬಂದು ರಸ್ತೆಯ ಮೇಲೆಯೇ ಬಿದ್ದಿದ್ದ ವೇಳೆ ಮುಂಭಾಗದಿಂದ ಬೇರೆ ಯಾವುದೇ ವಾಹನ ಇಲ್ಲದಿದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಆಘಾತದಿಂದ ಉನೈಸ್ ಮತ್ತು ಝುಬೈದಾ ಅವರು ಕೆಲ ಕಾಲ ರಸ್ತೆಯಲ್ಲೇ ಬಿದ್ದು ಹೊರಳಾಡುತ್ತಿರುವುದುವ ದೃಷ್ಯದಲ್ಲಿ ಕಂಡು ಬರುತ್ತದೆ. ಬಳಿಕ ಬಂದ ವಾಹನದವರು ಗಾಯಾಳುಗಳನ್ನು ಉಪಚರಿಸಿ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಝುಬೈದಾ ಅವರಿಗೆ ತಲೆಗೆ ಗಂಭೀರ ಗಾಯವಾಗಿದ್ದು ಕಿವಿಯ ಮೂಲಕ ರಕ್ತ ವಸರಿದೆ. ಕಾಲಿನ ಮೂಳೆ ಮುರಿತವಾಗಿದ್ದು ಶಸ್ತ್ರ ಚಿಕಿತ್ಸೆ ಆವಶ್ಯಕವಿದೆ. ಹಾಗೂ ಪಕ್ಕೆಲುಬುಗಳಿಗೆ ಗಾಯವಾಗಿದೆ. ಇನ್ನೂ ಕೆಲವಾರು ದಿನಗಳ ವರೆಗೆ ತೀವ್ರ ನಿಗಾ ಘಟಕದಲ್ಲೇ ಚಿಕಿತ್ಸೆ ಮುಂದುವರಿಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಾಪತ್ತೆಯಾಗಿರುವ ಕಾರಿನ ಪತ್ತೆಗೆ ಪೊಲೀಸರು ಪ್ರಯತ್ನ ಮುಂದುವರಿಸಿದ್ದಾರೆ.













