ಬೆಳ್ತಂಗಡಿ : ‘ ಭಾರತದ ಆತ್ಮ, ಜೀವ ಮತ್ತು ಉಸಿರು ಅದು ಧರ್ಮ. ಧರ್ಮ ಬಿಟ್ಟು ದೇಶ ಇಲ್ಲ. ಧರ್ಮವನ್ನು ಜನ ಮಾನಸದಲ್ಲಿ ಮೂಡಿಸುವ ಒಂದು ಪ್ರಯತ್ನ ಸಂಸ್ಕೃತಿಯಿಂದ ನಡೆಯುತ್ತಿದೆ ‘ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ಅವರು ಸೋಮವಾರ ರಾತ್ರಿ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸುವರ್ಣ ಆರ್ಕೇಡ್ ಆವರಣದಲ್ಲಿ ನಡೆದ 13 ನೇ ವರ್ಷದ ಸುವರ್ಣ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಹಿರಿಯ ಕಲಾ ಸಾಧಕರಿಗೆ ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ ನೀಡಿ ಮಾತನಾಡಿದರು.
‘ ಜಗತ್ತಿನ ಜ್ಞಾನದ ಭಂಡಾರ ಅದು ಭಾರತ. ಜಗತ್ತಿನ ಹಿತಕ್ಕಾಗಿ ನಮ್ಮ ಸಂಸ್ಕೃತಿ ಉಳಿಸಬೇಕಾಗಿದೆ. ಎಲ್ಲರಿಗೂ, ಎಲ್ಲದಕ್ಕೂ ಒಳ್ಳೆಯದಾಗಲಿ ಎಂದು ಬಯಸುವ ಸಮಾಜ ಭಾರತೀಯ ಸಮಾಜ. ದೈವತ್ವದ ನೆಲೆಯಿಂದ ಸಂಸ್ಕಾರವನ್ನು ಬೆಳೆಸಿಕೊಂಡ ದೇಶ ನಮ್ಮದು ‘ ಎಂದರು.
‘ಒಂದು ಭಾಷೆಗೆ ಅದರದ್ದೇ ಆದ ಸಂಸ್ಕೃತಿ ಇದೆ. ಹಾಗಾಗಿ ಮನೆಯ ಭಾಷೆಯನ್ನು ಬಿಟ್ಟು ಬದುಕು ಇರಬಾರದು. ಧರ್ಮಕ್ಕೆ ಸಂಬಂಧ ಪಟ್ಟ, ಸಂಸ್ಕಾರಯುತ ಕೆಲಸ ಕಾರ್ಯಗಳು ನಮ್ಮ ಮನೆಯಲ್ಲಿ ಆಗಬೇಕು. ಕೇವಲ ಪದವಿ, ಹಣ ಗಳಿಕೆಗೆ ಸೀಮಿತವಾಗಿ ಬದುಕು ಇರಬಾರದು’ ಎಂದರು.
ಯಕ್ಷಗಾನವು ಭಾಷೆಯ ಸ್ಪಷ್ಟತೆ ಜೊತೆಗೆ ವಿಚಾರವನ್ನು ಸಮರ್ಪಕವಾಗಿ ತಿಳಿಸುವ ಶ್ರೇಷ್ಠ ಕಲೆ. ಸಾವಿರಾರು ಜನರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವಂತಹುದು. ಯಕ್ಷಗಾನವನ್ನು ನೋಡುವ ಮತ್ತು ಪ್ರೀತಿಸುವ ಮನಸ್ಸು ಹೆಚ್ಚಾಗಬೇಕು. ಪಾಶ್ಚಾತ್ಯ ನೃತ್ಯಕ್ಕೆ ಮಾರು ಹೋಗುವ ಬದಲು ಭಾವನೆಗಳು ಬೆರೆಯುವ ನಮ್ಮ ಭಾರತೀಯ ನೃತ್ಯವನ್ನು ಪ್ರೀತಿಸಬೇಕು ಎಂದು ಅವರು ಹೇಳಿದರು
ಸಮಾರಂಭದಲ್ಲಿ ಸಾಂಸ್ಕೃತಿಕ ಸಂಘಟಕ ಬಿ.ಭುಜಬಲಿ ಧರ್ಮಸ್ಥಳ, ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಹರ್ಷ ಸಂಪಿಗೆತ್ತಾಯ, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ಡಕ್ಕ, ಬೆಳ್ತಂಗಡಿ ಠಾಣಾ ವೃತ್ತ ನಿರೀಕ್ಷಕ ಕೆ. ಸತ್ಯನಾರಾಯಣ, ಸುವರ್ಣ ಆರ್ಕೇಡ್ ನ ಮಾಲಿಕ ವೈ ನಾಣ್ಯಪ್ಪ ಪೂಜಾರಿ ಇದ್ದರು.
ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ನೃತ್ಯ ಗುರು ಕಮಲಾಕ್ಷ ಆಚಾರ್, ಸ್ಯಾಕ್ಷಫೋನ್ ಮಾಂತ್ರಿಕ ಪ್ರಕಾಶ್ ದೇವಾಡಿಗ ಇವರಿಗೆ ಸುವರ್ಣ ರಂಗ ಸಮ್ಮಾನ್ – 2023 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಸ್ವಾಗತಿಸಿದರು. ಪ್ರಜ್ಞಾ ಓಡಿಳ್ನಾಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಮೂಲ್ಕಿ ನವ ವೈಭವ ಕಲಾವಿದರಿಂದ ತುಳು ನಾಡಿನ ಸತ್ಯದ ಕಥೆಯನ್ನು ಸಾರುವ ತುಳುನಾಡ ತುಡರ್ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಕಲಾರಾಧನೆಯ ಜೊತೆ ಕಲಾವಿದರನ್ನು ಸನ್ಮಾನಿಸಿ, ಗೌರವಿಸುವುದು ಶ್ರೇಷ್ಠ ಗುಣವಂತನ ಲಕ್ಷಣ. ಕಲಾವಿದರನ್ನು ಗುರುತಿಸುವ ಕಾರ್ಯವೇ ಅವರಿಗೆ ಸಂತೋಷ ನೀಡುವ ಸನ್ಮಾನ. ಸಂಪತ್ ಸುವರ್ಣರ ಈ ಮನಸ್ಸು ಅವರ ಶ್ರೇಷ್ಠ ವ್ಯಕ್ತಿತ್ವದ ಪ್ರತೀಕ. ರಾಜಕೀಯದಲ್ಲೂ ಆಸಕ್ತಿ ಬೆಳೆಸಿಕೊಂಡ ಅವರಿಗೆ ಉನ್ನತ ಸ್ಥಾನ ಮಾನಗಳು ಲಭಿಸಲಿ ಎಂದು ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ ಪಡೆದ ಅರುವ ಕೊರಗಪ್ಪ ಶೆಟ್ಟಿ ಹೇಳಿದರು.