ಕಾಶಿಪಟ್ಣ : ಇನ್ಸ್ಟ್ರಾಗ್ರಾಮ್ ನಲ್ಲಿ ಪರಿಚಯವಾಗಿ ಬೈಕ್ ಖರೀದಿಗೆಂದು ಬಂದು ‘ಜಸ್ಟ್ ರೈಡ್’ ಎಂದು ಬೈಕ್ ಟ್ರಯಲ್ ನೋಡಲೆಂದು ಬೈಕ್ ಕೊಂಡು ಹೋದಾತ ವಾಪಸ್ ಬಾರದೆ ವಂಚಿಸಿದ ಪ್ರಕರಣವೊಂದು ಶಿರ್ತಾಡಿಯಲ್ಲಿ ಕಳೆದ ಆದಿತ್ಯವಾರ ನಡೆದಿದೆ.
ಕಾಶಿಪಟ್ಟ ಸಮೀಪದ ಯುವಕ ಇಶಾನ್ ಪೂಜಾರಿಯವರಿಗೆ ಇನ್ಸ್ಟ್ರಾಗ್ರಾಮ್ ನಲ್ಲಿ ಯುವಕನೋರ್ವನ ಪರಿಚಯವಾಗಿತ್ತು. ಇಬ್ಬರ ನಡುವೆ ಇನ್ಸ್ಟ್ರಾಗ್ರಾಮ್ ನಲ್ಲೇ ದಿನಂಪ್ರತಿ ಕುಶಲ ಸಮಾಚಾರ ನಡೆಯುತ್ತಿತ್ತು.
ಹೆಚ್ಚು ಹತ್ತಿರವಾಗುತ್ತಿದ್ದಂತೇ ಕಾಶಿಪಟ್ಣದ ಯುವಕ ಇಶಾನ್ ಪೂಜಾರಿಯವರಿಗೆ ಡ್ಯೂಕ್ ಬೈಕ್ ಇರುವುದನ್ನು ವಂಚಕ ಯುವಕ ಇಶಾನ್ ಶೆಟ್ಟಿ ಉಚ್ಚಿಲ್ ತಿಳಿದುಕೊಳ್ಳುತ್ತಾನೆ. ಸೇಲ್, ರೇಟ್ ಎಂಬೆಲ್ಲಾ ಮಾತು ಕತೆಯೂ ನಡೆಯುತ್ತದೆ.
ನಾನು ಖರೀದಿಸುತ್ತೇನೆ ಎಂದು ವಿಳಾಸ ಕೇಳಿದ್ದಾನೆ. ಕಾಶಿಪಟ್ಣದ ಯುವಕ ಶಿರ್ತಾಡಿಗೆ ಬರಲು ಹೇಳಿದ್ದಾನೆ. ಅದರಂತೆ ಸೋಮವಾರ ಶಿರ್ತಾಡಿಗೆ ಬಂದ ಯುವಕ ‘ಜಸ್ಟ್ ರೈಡ್’ ಎಂದು ಟ್ರಯಲ್ ಗೆ ಕೊಂಡೋಗಿದ್ದಾನೆ. ಬೈಕ್ ಕೊಟ್ಟವ ಇತ್ತೆ ಬರುವೆ, ಇತ್ತೆ ಬರುವೆ ಎಂದು ಕಾದದ್ದೇಬಂತು. ಬೈಕೂ ವಾಪಸ್ ಬರಲಿಲ್ಲ, ಕೊಂಡುಹೋದವನೂ ಬರಲಿಲ್ಲ.
ಕಾಶಿಪಟ್ಣದ ಯುವಕನಲ್ಲಿ ವಂಚಕನ ವಿಳಾಸವಾಗಲೀ, ಮೊಬೈಲ್ ನಂಬ್ರವಾಗಲೀ ಯಾವುದೂ ಇರಲಿಲ್ಲ. ಕೇವಲ ಇನ್ಸ್ಟ್ರಾಗ್ರಾಮ್ ನಲ್ಲಿ ಆದ ಪರಿಚಯ ಮಾತ್ರ.
ಎಷ್ಟು ಕಾದರೂ ವಾಪಸ್ ಬಾರದನ್ನು ಕಂಡು ತಾನು ಮೋಸಹೋದ ಬಗ್ಗೆ ಅರಿತುಕೊಂಡ ಕಾಶಿಪಟ್ಣದ ಯುವಕ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇಂದು ಬುಧವಾರ ಬೆಳಿಗ್ಗೆ ಬೈಕ್ ಪತ್ತೆ:
ಇಶಾನ್ ಶೆಟ್ಟಿ ಉಚ್ಚಿಲ ಕಡೆಯವನಾಗಿದ್ದು ಮೂಡಬಿದ್ರೆ ಪೊಲೀಸರು ತನಿಖೆ ನಡೆಸಿ ಬೈಕ್ ಪತ್ತೆ ಮಾಡಿ ಕಾಶಿಪಟ್ಣದ ಯುವಕ ಇಶಾನ್ ಪೂಜಾರಿಯವರಿಗೆ ಹಸ್ತಾಂತರಿಸಿದ್ದಾರೆ. ಅಂತೂ ‘ಜಸ್ಟ್ ರೈಡ್’ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾ ಗುತ್ತಿದೆ.