ಬೆಳ್ತಂಗಡಿ : ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ವತಿಯಿಂದ ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕರಂಬಾರು ಗುತ್ತು ಮನೆಯಲ್ಲಿ ಕರಾವಳಿ ಭತ್ತದ ಬೆಳೆಯ ಬೆಳವಣಿಗೆ ಹಾಗೂ ಇಳುವರಿಯ ಮೇಲೆ ಮೆಗ್ನೀಶಿಯಂ ಸಲ್ಫೇಟ್ ನ ಪ್ರಭಾವದ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನಿ ಡಾ. ಮಲ್ಲಿಕಾರ್ಜುನ ಎಲ್. ಮಾತನಾಡಿ, ಭತ್ತದ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಹಾಗೂ ಮೆಗ್ನೀಶಿಯಂ ಬಳಕೆಯಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ತಂತ್ರಜ್ಞಾನದ ಪರಿಶೀಲನೆಗಾಗಿ ಆಯ್ದ ಐದು ಜನ ರೈತರಿಗೆ ರಸಗೊಬ್ಬರಗಳ ಪರಿಕರಗಳನ್ನು ವಿತರಿಸಲಾಯಿತು.
ನಂತರ ಮಾತನಾಡಿದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಕೇದಾರನಾಥ, ಭತ್ತದ ಬೆಳೆಯಲ್ಲಿ ಕಂಡು ಬರುವ ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಕೃಷಿ ಪರಿಕರ ಮಾರಟಗಾರರಾದ ಚೇತನಾ, ಸುಕೇಶ ಪೂಜಾರಿ, ಕರಂಬಾರು ಗುತ್ತು ಮನೆಯ ಸುಮಿತ್ರಾ ಹೆಗಡೆ, ಲ್ಯಾನ್ಸಿ ಡಿಸೋಜಾ, ಸದಾನಂದ ಹೆಗಡೆ, ಪ್ರಕಾಶ ಹೆಗಡೆ, ಸಂಜೀವ ದೆವಾಡಿಗ ಮುಂತಾದವರು ಭಾಗವಹಿಸಿದ್ದರು.