ಉಜಿರೆ : ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ 1811 ಸದಸ್ಯರನ್ನು ಹೊಂದಿದ್ದು, 76.57 ಕೋಟಿ ರೂ. ವ್ಯವಹಾರ ನಡೆಸಿದೆ. ಸದ್ರಿ ವಾರ್ಷಿಕ ಸಾಲಿನಲ್ಲಿ 39 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.8 ಡಿವಿಡೆಂಟ್ ಘೋಷಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ರಂಜನ್ ಜಿ.ಗೌಡ ತಿಳಿಸಿದರು.
ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭನದಲ್ಲಿ ಸೆ.3 ರಂದು ನಡೆದ ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದಲ್ಲಿ ಜನರು ವಿಶ್ವಾಸ ಇರಿಸಿ ವ್ಯವಹಾರಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಸಂಘವು ಒಟ್ಟು 11.87 ಕೋ.ರೂ. ವಿವಿಧ ಠೇವಣಿ ಹೊಂದಿದೆ. ಸಂಘದ ಅರಸಿನಮಕ್ಕಿ ಶಾಖೆ ಸೆ.29ರಂದು ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಅವರು ವಿನಂತಿಸಿಕೊಂಡರು .
ಸಂಘದ ಉಪಾಧ್ಯ ಕ್ಷ ಸುಂದರ ಗೌಡ ಇಚ್ಚಿಲ, ನಿರ್ದೇಶಕರಾದ ಕೆ.ಗಂಗಾಧರ ಗೌಡ, ಬಾಲಕೃಷ್ಣ ಗೌಡ ಕೇರಿಮಾರು, ಎನ್.ಲಕ್ಷಣ ಗೌಡ, ಶಿವಕಾಂತ ಗೌಡ, ದಾಮೋದರ ಗೌಡ ಸುರುಳಿ, ಜಯಂತ ಗೌಡ ಗುರಿಪಳ್ಳ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ ವಾರ್ಷಿಕ ವರದಿ ಮಂಡಿಸಿ ಅನುಮೋದಿಸಲಾಯಿತು . ನಿರ್ದೇಶಕಿ ಚೇತನಾ ಚಂದ್ರಶೇಖರ್ ಧರ್ಮದಕಳ ಸ್ವಾಗತಿಸಿ, ನಿರ್ದೇಶಕಿ ಸರೋಜಿನಿ ವಿಜಯ ಕುಮಾರ್ ಗೌಡ ವಂದಿಸಿದರು. ಸಿಬಂದಿ ನಿತಿನ್ ಗೌಡ ಸುರುಳಿ ಕಾರ್ಯಕ್ರಮ ನಿರೂಪಿಸಿದರು.