ಉಜಿರೆಯ ಕಲ್ಲೆಯಲ್ಲಿ ಹಾಡುಗಲೇ ಲಕ್ಷಾಂತರ ಮೌಲ್ಯದ ನಗದು ಸಹಿತ ಚಿನ್ನಾಭರಣ ಕಳವು ಪ್ರಕರಣ: ಮೈಸೂರು ಜಿಲ್ಲೆಯ ಝೂ ಪಾರ್ಕ್‌ನಲ್ಲಿ ಆರೋಪಿಯನ್ನು ಸೆರೆ ಹಿಡಿದ ಪೊಲೀಸರು: ಮೈಸೂರು ಗೋಲ್ಡ್ ಕಂಪನಿಯಲ್ಲಿ ಮಾರಾಟ ಮಾಡಿದ್ದ ಚಿನ್ನಭರಣ ವಶ: ಬೆಳ್ತಂಗಡಿ ಪೊಲೀಸರ ಯಶಸ್ವಿ ಕಾರ್ಯಾಚರಣೆ

Suddi Udaya

ಬೆಳ್ತಂಗಡಿ: ಉಜಿರೆಯ ಕಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಹಾಡು ಹಗಲೇ ಕಳ್ಳತನ ನಡೆಸಿದ್ದ ಕುಖ್ಯಾತ ಅಂತರ್ ರಾಜ್ಯ ಕಳ್ಳನೋರ್ವನನ್ನು ಬೆಳ್ತಂಗಡಿ ಪೊಲೀಸರು ಒಂದು ತಿಂಗಳು ಶ್ರಮಪಟ್ಟು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಈತನನ್ನು ಬಂಧಿಸಲು ನಾಲ್ಕು ರಾಜ್ಯದ ವಿವಿಧ ಪೊಲೀಸ್ ಠಾಣೆಯ ಪೊಲೀಸರು ಹಲವು ವರ್ಷಗಳಿಂದ ರಾತ್ರಿ ಹಗಲು ಹುಡುಕಾಟ ನಡೆಸುತ್ತಿದ್ದರು. ಈತ ತನ್ನ ಕೃತ್ಯ ನಡೆಸಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪಲಾಯನ ಮಾಡುತ್ತಿದ್ದು, ಕೊನೆಗೂ ಪೊಲೀಸರ ವಶವಾಗಿದ್ದಾನೆ. ತಮಿಳುನಾಡು ಜಿಲ್ಲೆಯ ಕನ್ಯಾಕುಮಾರಿ ನಿವಾಸಿ ಉಮೇಶ್ ಬಳೆಗಾರ(46ವ) ಎಂಬತನನ್ನು ಮೈಸೂರು ಜಿಲ್ಲೆಯ ಝೂ ಪಾರ್ಕ್ ನಲ್ಲಿ ಸೆ.26 ರಂದು ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸರು, ಆರೋಪಿಯನ್ನು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿ ಎರಡು ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.

ಆತ ಕದ್ದ ಚಿನ್ನಾಭರಣವನ್ನು ಮೈಸೂರು ಎಸ್.ಡಿ.ಜೆ ಗೋಲ್ಡ್ ಕಂಪನಿಯಲ್ಲಿ ಮಾರಾಟ ಮಾಡಿದ್ದು ,ಆ ಚಿನ್ನಾಭರಣವನ್ನು. ಶಪಡಿಸಿಕೊಳ್ಳಲಾಗಿದೆ. ಸೆ.೨೮ ರಂದು(ಇಂದು) ಕಳ್ಳತನ ನಡೆಸಿದ ಉಜಿರೆ ಮನೆಗೆ ಬೆಳ್ತಂಗಡಿ ಪೊಲೀಸರು ಕರೆದುಕೊಂಡು ಹೋಗಿ ಮಹಜರು ನಡೆಸಿದ್ದಾರೆ.

ಉಜಿರೆ ಗ್ರಾಮದ ಕಲ್ಲೆ ನಿವಾಸಿ ಫೆಲಿಕ್ಸ್ ಎಂಬವರ ಮನೆಗೆ ಅಗಸ್ಟ್ 12 ರಂದು ಹಗಲು ಹೊತ್ತಿನಲ್ಲಿ ಯಾರು ಇಲ್ಲದ ವೇಳೆ ಹಿಂಬಾಗಿಲಿನ ಮೂಲಕ ನುಗ್ಗಿ ಆರೋಪಿ ಕಪಾಟಿನಲ್ಲಿ ದ್ದ15 ಪವನ್ ಚಿನ್ನಾಭರಣ ಮತ್ತು ರೂ.20 ಸಾವಿರ ನಗದು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿತ್ತು. ಆರೋಪಿ ಉಮೇಶ್ ಬಳೆಗಾರ ಮೂಲತಃ ಆಂದ್ರಪ್ರದೇಶದವನಾಗಿದ್ದಾನೆ. ಈತನ ಪತ್ನಿಗೆ ಮೂವರು ಮಕ್ಕಳಿದ್ದು ಮಕ್ಕಳು ಕೂಡ ಕಳ್ಳತನದಲ್ಲಿ ಪರಿಣತಿ ಹೊಂದಿದ್ದಾರೆ. ಮೊದಲ ಪತ್ನಿ ಸಾವನ್ನಪ್ಪಿದ ಬಳಿಕ ತಮಿಳುನಾಡಿನ ಕನ್ಯಾಕುಮಾರಿಯ ಮಹಿಳೆಯನ್ನು ಎರಡನೇ ಮದುವೆಯಾಗಿ ಎರಡು ಮಕ್ಕಳನ್ನು ಪಡೆದಿದ್ದ. ಅಂದಿನಿಂದ ಎರಡನೇ ಪತ್ನಿ ಊರಿನಲ್ಲಿ ವಾಸವಾಗುತ್ತಿದ್ದ. ತನ್ನ 14ನೇ ವಯಸ್ಸಿನಲ್ಲಿ ಅಂದರೆ 1994 ರಿಂದ ಕಳ್ಳತನಕ್ಕೆ ಇಳಿದಿದ್ದ ನಟೋರಿಯಸ್ ಉಮೇಶ್ ಬಳೆಗಾರನಿಗೆ ೯ ಭಾಷೆಗಳು ಬರುತ್ತದೆ ಎಂದು ತಿಳಿದು ಬಂದಿದೆ. ತಮಿಳುನಾಡು ರಾಜ್ಯದಲ್ಲಿ 14 ಪ್ರಕರಣ, ಕೇರಳ ರಾಜ್ಯದಲ್ಲಿ 10 ಪ್ರಕರಣ , ಆಂದ್ರ ಪ್ರದೇಶ ರಾಜ್ಯದಲ್ಲಿ 5 ಕೇಸ್ ಹಾಗೂ ಕರ್ನಾಟಕ ರಾಜ್ಯದ ಬೆಂಗಳೂರು, ಮೈಸೂರು, ಉಡುಪಿ ,ಚಿಕ್ಕಮಗಳೂರು ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಪುತ್ತೂರು , ಬಂಟ್ವಾಳ,ಮೂಡಬಿದಿರೆ, ಬೆಳ್ತಂಗಡಿಯಲ್ಲಿ ಪ್ರಕರಣ ಇದೆ. ಸದ್ಯ ಇತ್ತಿಚೀನ ಕೇಸ್‌ನಲ್ಲಿ ಆರೋಪಿ ಉಮೇಶ್ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿ ಮತ್ತು ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣ ತನಿಖೆ ಬಾಕಿ ಇದೆ ಎನ್ನಲಾಗಿದೆ.

ಕಳ್ಳತನಕ್ಕೆ ಹೋಗುವಾಗ ಪತ್ನಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ: ತನ್ನ ಕಳ್ಳತನ ಕೃತ್ಯಕ್ಕೆ ಹೋಗುವಾಗ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ಸ್ಥಳೀಯ ವಸತಿ ಗೃಹ ಅಥವಾ ಲಾಡ್ಜ್ ಪಡೆದುಕೊಂಡು ಎರಡು ಮೂರು ದಿನ ಉಳಿದುಕೊಳ್ಳುತ್ತಿದ್ದರು . ಅವರನ್ನು ಬಿಟ್ಟು ಈತ ಹಗಲಿನಲ್ಲಿ ಒಂಬಟ್ಟಿಯಾಗಿ ಹೋಗಿ ಕಳ್ಳತನ ಮಾಡಿ ಬಂದು ನಂತರ ಬೇರೆ ಜಿಲ್ಲೆಗೆ ಹೋಗಿ ರೂಂ ಮಾಡಿಕೊಂಡು ಇರುತ್ತಿದ್ದ.

ಕಾರ್ಯಾಚರಣೆ: ಕಳ್ಳತನ ನಡೆದ ದಿನ ಮನೆಯಲ್ಲಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ನಂತರ ಸಿಸಿಕ್ಯಾಮರ ಮತ್ತು ಟೆಕ್ನಿಕಲ್ ಸಾಕ್ಷಾಧಾರದಲ್ಲಿ ತನಿಖೆಗಿಳಿದ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಮತ್ತು ತಂಡದ ಸಿಬ್ಬಂದಿಗಳು ಬೆಂಗಳೂರು ,ಮೈಸೂರು ಸೇರಿ ವಿವಿಧೆಡೆ ರಾತ್ರಿ ಹಗಲು ಸಂಚಾರಿಸಿ ಆರೋಪಿಗಾಗಿ ಶೋಧ ಕಾರ್ಯ ನಡೆಸಿತ್ತು ಕೊನೆಗೂ ಒಂದು ತಿಂಗಳ ಕಾರ್ಯಾಚರಣೆ ಬಳಿಕ ಆರೋಪಿ ಕುಖ್ಯಾತ ಕಳ್ಳ ಉಮೇಶ್ ಬಳೆಗಾರನನ್ನು ಮೈಸೂರು ಝೂ ಪಾರ್ಕ್‌ನಲ್ಲಿ ಬಲೆಗೆ ಕೆಡವಿದ್ದಾರೆ. ಆರೋಪಿ ಉಮೇಶ್ ಬಳೆಗಾರ ಉಜಿರೆಯ ಒಂದು ದೊಡ್ಡ ಮನೆಯನ್ನು ಗುರುತಿಸಿ ದರೋಡೆಗೆ ಸಂಚು ರೂಪಿಸಿದ್ದ ಬಳಿಕ ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶವನ್ನು ಗುರುತಿಸಿ ಕಳ್ಳತನ ಮಾಡಲು ರೂಪುರೇಷೆ ಸಿದ್ದಪಡಿಸಿದ್ದ ಅಘಾತಕಾರಿ ಮಾಹಿತಿ ಬಾಯಿಬಿಟ್ಟಿದ್ದ ಎನ್ನಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಧನರಾಜ್ , ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್ ,ಎಎಸ್‌ಐ ತಿಲಕ್ ರಾಜ್ ಹಾಗೂ ಸಿಬ್ಬಂದಿಗಳು ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Leave a Comment

error: Content is protected !!