ಬೆಳ್ತಂಗಡಿ:ಉಜಿರೆಯ ಜನಾರ್ದನ ಸ್ವಾಮಿ ದೇವಾಲಯದಿಂದ ಪಾದಯಾತ್ರೆಯ ಮೂಲಕ ಹೊರಟ ಧರ್ಮ ಸಂರಕ್ಷಣಾ ಯಾತ್ರೆ ನಾಡಿನ ಪ್ರಸಿದ್ಧ ಶ್ರದ್ಧಾ ಕೇಂದ್ರವಾದ ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಗೆ ಆಗಮಿಸುವಾಗ ಧರ್ಮಸ್ಥಳದ ಮುಖ್ಯ ದ್ವಾರದಲ್ಲಿ ಧರ್ಮ ಸಂರಕ್ಷಣಾ ಯಾತ್ರೆಗೆ ಪುಷ್ಪಾರ್ಚಣೆ ಮೂಲಕ ಕ್ಷೇತ್ರಕ್ಕೆ ಅದ್ದೂರಿ ಸ್ವಾಗತ ನೀಡಲಾಯಿತು.
ಧರ್ಮ ಸಂರಕ್ಷಣಾ ಯಾತ್ರೆಯ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಆಶೀರ್ವಚನ ನೀಡಿ ನಾವೆಲ್ಲರೂ ಸಮಾಜದ ಸ್ವಾಸ್ಥ್ಯವನ್ನು ರಕ್ಷಿಸುವ ಸಂಕಲ್ಪ ಮಾಡಬೇಕೆಂದರು. ಪಾದಯಾತ್ರೆ ಮೂಲಕ ಸಾಗಿದ ಎಲ್ಲರಿಗೂ ದೇವರು ಸದಾ ಸನ್ಮಾಂಗಳವನ್ನುಂಡು ಮಾಡಲಿ ಎಂದರು.ರಾಜ್ಯದ ನಾನಾ ಕಡೆಯಿಂದ ಆಗಮಿಸಿದ ಸುಮಾರು 50 ಸಾವಿರಕ್ಕೂ ಹೆಚ್ಚಿನ ಭಕ್ತರು ಪಾದಯಾತ್ರೆಯಲ್ಲಿ ಭಾಗಿಯಾದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಪಳಿಮಾರು ಮಠದ ಸ್ವಾಮೀಜಿ, ಸೋಲೂರು ಮಠದ ವಿಖ್ಯಾತನಂದ ಸ್ವಾಮೀಜಿ, ವಜ್ರದೇಹಿ ಮಠದ ರಾಜಶೇಖಾರನಂದ ಸ್ವಾಮೀಜಿ,ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನ ಸ್ವಾಮೀಜಿ,ಮಂಗಳೂರು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ಹರೀಶ್ ಪೂಂಜ,ವಿಧಾನ ಪರಿಷತ್ ಶಾಸಕ ಕೆ.ಪ್ರತಾಪ ಸಿಂಹ ನಾಯಕ್,ಧರ್ಮ ಜಾಗೃತಿ ಸಮಿತಿ ಸಂಚಾಲಕ ಶಶಿಧರ ಬಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಧರ್ಮ ಸಂರಕ್ಷಣಾ ಯಾತ್ರ ಸಮಿತಿ ಸಂಚಾಲಕ ಶರತ್ ಕೃಷ್ಣ ಪಡ್ವೆಟ್ನಾಯ,ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ,ಬಿಜೆಪಿ ಮುಖಂಡ ಹರೀಕೃಷ್ಣ ಬಂಟ್ವಾಳ್ ಹಾಗೂ ವಿವಿಧ ಧರ್ಮ ಕ್ಷೇತ್ರದ ಮಠಾಧೀಶರು, ಭಕ್ತಾದಿಗಳು ಉಪಸ್ಥಿತರಿದ್ದರು.
ಈ ಯಾತ್ರೆಯುದ್ದಕ್ಕೂ“ಹರ ಹರ ಮಹಾದೇವ” ಎಂಬ ಉದ್ಘೋಷಣೆಯೊಂದಿಗೆ ಪಾದಯಾತ್ರೆ ಸಾಗಿತು. ಉಜಿರೆಯಿಂದ ಧರ್ಮಸ್ಥಳದ ಮುಖ್ಯ ರಸ್ತೆಯ ನ್ಯಾಚುರೋಪತಿ ಕಾಲೇಜು, ರುಡ್ ಸೆಟ್, ನೀರಚಿಲುಮೆ, ಸೇವಾಶ್ರಮ,ಕನ್ಯಾಡಿ, ನೇತ್ರಾವತಿ, ಧರ್ಮಸ್ಥಳದ ಹಲವು ಕಡೆಗಳಲ್ಲಿ ಭಕ್ತಾದಿಗಳಿಗೆ ಬೆಲ್ಲ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಶೇಷವಾಗಿ ಕನ್ಯಾಡಿಯಲ್ಲಿ ಮುಸ್ಲೀ ಬಾಂಧವರು ಶರಬತ್ ವ್ಯವಸ್ಥೆ ಮಾಡಿದ್ದು ಎಲ್ಲರ ಗಮನ ಸೆಳೆಯಿತು.ಕೊಲ್ಲೂರಿನಿಂದ ಹೊರಟ ಯಾತ್ರೆಯನ್ನು ಮಾರ್ಗದುದ್ದಕ್ಕೂ ಸ್ವಾಗತಿಸಿಲಾಯಿತು. ಪಾದಯಾತ್ರೆಯಲ್ಲಿ ಭಾಗವಹಿಸುವ ಯಾತ್ರಾರ್ಥಿಗಳೆಲ್ಲರಿಗೂ ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಮಧ್ಯಾಹ್ನದ ಭೋಜನವ್ಯವಸ್ಥೆ ಕಲ್ಪಿಸಲಾಗಿತಗತು.ತುರ್ತು ಪರಿಸ್ಥಿತಿಗೆ ಬೇಕಾದ ವೈದ್ಯಕೀಯ ವ್ಯವಸ್ಥೆಗಳಿತ್ತು.ಧರ್ಮಸ್ಥಳದಲ್ಲಿ ಸರ್ವ ಭಕ್ತಾಧಿಗಳ ಪ್ರಾರ್ಥನೆಯೊಂದಿಗೆ ಧರ್ಮ ಸಂರಕ್ಷಣಯಾತ್ರೆ ಸಂಪನ್ನಗೊಂಡಿತ್ತು.