ಪದ್ಮುಂಜ ಸ.ಪ್ರೌ. ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯ ವೇದಿಕೆಯ ಸಮಾಲೋಚನಾ ಸಭೆ

Suddi Udaya

ಬೆಳ್ತಂಗಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಸಮಾಜ ವಿಜ್ಞಾನ ವಿಷಯ ವೇದಿಕೆಯ ಸಮಾಲೋಚನಾ ಸಭೆಯು ನ.16 ರಂದು ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಜರಗಿತು.

ಸಭೆಯನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ತಾರಾಕೇಸರಿಯವರು ಮಾತನಾಡಿ, ಗುಣಮಟ್ಟದ ಶಿಕ್ಷಣದಲ್ಲಿ ಬೆಳ್ತಂಗಡಿ ತಾಲೂಕು ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಇದಕ್ಕೆ ಸವಾಲುಗಳನ್ನು ಎದುರಿಸಿ ಪ್ರಾಮಾಣಿಕವಾಗಿ ದುಡಿಯುವ ಶಿಕ್ಷಕರು ಕಾರಣ. ಈ ನಿಟ್ಟಿನಲ್ಲಿ ಇಲಾಖೆಯು ಆಯೋಜಿಸುವ ತರಬೇತಿಗಳು ಉತ್ತಮ ಪ್ರೇರಣೆ ನೀಡಬಲ್ಲದು ಎಂಬ ಅಭಿಪ್ರಾಯದೊಂದಿಗೆ ಇದೇ ರೀತಿಯ ಸಭೆಯು ತಾಲೂಕಿನ ಬೇರೆಬೇರೆ ಶಾಲೆಗಳಲ್ಲಿ ಎಲ್ಲ ವಿಷಯಗಳಲ್ಲೂ ಜರಗಲಿದೆ ಎಂದು ತಿಳಿಸಿದರು.

ಉದ್ಘಾಟನಾ ಸಮಾರಂಭವು ವೇದಿಕೆಯ ಸಂಚಾಲಕರಾದ ರಾಮಕೃಷ್ಣ ಭಟ್ ಬೆಳಾಲುರವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರಾದ ಸಿದ್ಧಲಿಂಗ ಸ್ವಾಮಿ, ವಲಯ ಸಂಪನ್ಮೂಲ ಅಧಿಕಾರಿ ಶ್ರೀಮತಿ ಸಂಧ್ಯಾ, ಸಂಪನ್ಮೂಲ ವ್ಯಕ್ತಿಗಳಾದ ದ ಕ ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಮ್ಮದ್ ರಿಯಾಜ್, ವಸಂತ ನಾಯ್ಕ್ ಪುತ್ತಿಲ, ಪೂರ್ಣಿಮಾ ಬೆಳ್ತಂಗಡಿ, ಚೈತ್ರ ಸವಣಾಲು, ಶಿಕ್ಷಕ ಸಂಘದ ತಾಲೂಕಿನ ಕಾರ್ಯದರ್ಶಿಗಳಾದ ಶಿವಪುತ್ರ ನಡ ಹಾಗೂ ಶಾಲೆಯ ಎಸ್ ಡಿ ಎಂ ಸಿ ಸದಸ್ಯರುಗಳು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಶ್ರೀಮತಿ ಸುಮತಿಯವರು ಸ್ವಾಗತಿಸಿ, ವಸಂತ ನಾಯ್ಕ್ ಪುತ್ತಿಲರು ಸ್ವಾಗತಿಸಿದರು.

ಗುಣಮಟ್ಟದ ಶಿಕ್ಷಣದ ಕುರಿತಾದ ಕಾರ್ಯಾಗಾರವು ವಿವಿಧ ಚಟುವಟಿಕೆಗಳು ಮತ್ತು ಗುಂಪು ಚರ್ಚೆಯ ಮೂಲಕ ಸಂಜೆಯವರೆಗೆ ನಡೆಯಿತು.

Leave a Comment

error: Content is protected !!