ಬೆಳಾಲು: ಇಲ್ಲಿನ ಶ್ರೀ ಸುಬ್ರಹ್ಮಣ್ಯೇಶ್ವರ ಮಂಡಳಿ(ರಿ) ಕೊಲ್ಪಾಡಿ ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಗೆಳೆಯರ ಬಳಗದ ವತಿಯಿಂದ ಮಕ್ಕಳ ಹುಣ್ಣಿಮೆಯ ಪ್ರಯುಕ್ತ 31ನೇ ವರ್ಷದ ಆಟೋಟ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ ಮತ್ತು ಗೆಳೆಯರ ಬಳಗದ ವತಿಯಿಂದ ನಿರ್ಮಿಸಿದ ನೂತನ ಗೋದಾಮು ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಭಜನಾ ಮಂಡಳಿಯ ಅರ್ಚಕರಾದ ಧರ್ಣಪ್ಪಗೌಡ ಹುಣ್ಸೆದಡಿ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷರಾದ ಸದಾಶಿವ ಗೌಡ ಮೈರಾಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿಯ ಮುಖ್ಯೋಪಾಧ್ಯಾಯರಾದ ಸುರೇಶ್ ಮಾಚಾರ್ ,ಗೋದಾಮು ಕಟ್ಟಡ ಉದ್ಘಾಟಿಸಿ ಮಾತನಾಡಿ,’ ಊರಿನ ಜೀವಂತಿಕೆಯಲ್ಲಿ ಸಂಘಟನೆಗಳ ಪಾತ್ರ ಮಹತ್ವದ್ದು, ಈ ನಿಟ್ಟಿನಲ್ಲಿ ಊರಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಗೆಳೆಯರ ಬಳಗದಂತಹ ಸಂಘಟನೆಗಳಲ್ಲಿ ತೊಡಗಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಜೊತೆಗೆ ಊರಿನ ಅಭಿವೃದ್ಧಿಗೆ,ಶಾಲಾಭಿವೃದ್ಧಿಗೆ ಸಹಕರಿಸಬೇಕು’ ಎಂದರು.
ವೇದಿಕೆಯಲ್ಲಿ ಗೆಳೆಯರ ಬಳಗದ ಗೌರವಾಧ್ಯಕ್ಷರಾದ ಆನಂದ ಗೌಡ,ಅಧ್ಯಕ್ಷರಾದ ರಾಜೇಶ್ ಕುರ್ಕಿಲು,ಭಜನಾ ಮಂಡಳಿ ಕಾರ್ಯದರ್ಶಿ ಧರ್ಣಪ್ಪ ಗೌಡ ಕೊಡಂಗೆ,ತೀರ್ಪುಗಾರರಾದ ಮೋಹನ್ ಗೌಡ ಮಾಚಾರ್,ಶಶಿಧರ ಒಡಿಪ್ರೊಟ್ಟು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಾದ ತನಿಷ್ಕ ಮತ್ತು ವರ್ಷಾ ಪ್ರಾರ್ಥನೆ ನೆರವೇರಿಸಿದರು.ರಮೇಶ್ ಗೌಡ ಮರಕಡ ಕಾರ್ಯಕ್ರಮ ನಿರೂಪಿಸಿ, ಗೆಳೆಯರ ಬಳಗದ ಅಧ್ಯಕ್ಷ ರಾಜೇಶ್ ಗೌಡ ಸ್ವಾಗತಿಸಿದರು.ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರು, ಗೆಳೆಯರ ಬಳಗದ ಕಾರ್ಯದರ್ಶಿ ಮಾಧವ ಗೌಡ ಓಣಾಜೆ ವಂದಿಸಿದರು.