ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಯಕ್ಷಗಾನ ತರಗತಿ ಮತ್ತು ಮಕ್ಕಳಿಂದ ಯಕ್ಷಗಾನ ಪ್ರದರ್ಶನ ನಿರಂತರವಾಗಿ ಜರಗುತ್ತಿದ್ದು ಇದೀಗ ಇಪ್ಪತ್ತು ವರ್ಷಗಳನ್ನು ಪೂರೈಸಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಪ್ರತೀ ವರ್ಷ ಮಕ್ಕಳಿಗೆ ಯಕ್ಷಗಾನ ನಾಟ್ಯ ಕಲಿಸಿ, ಪ್ರಸಂಗವನ್ನು ಅಭ್ಯಸಿಸಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸೊಗಸಾದ ಯಕ್ಷಗಾನ ಬಯಲಾಟದ ಪ್ರದರ್ಶನವನ್ನು ಮಾಡಿಸಲಾಗುತ್ತಿದೆ.
ಈ ಶಾಲೆಯ ಆರಂಭದ ಮುಖ್ಯೋಪಾಧ್ಯಾಯರಾದ ಶ್ರೀಧರ ರಾಯರು ಮಕ್ಕಳಿಗೆ ಯಕ್ಷಗಾನ ಕಲಿಸಿ ರಂಗಪ್ರವೇಶ ಮಾಡಿಸುತ್ತಿದ್ದರು. ಇದೀಗ 2001ರಿಂದ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಮಕೃಷ್ಣ ಭಟ್ ಚೊಕ್ಕಾಡಿಯವರ ನೇತೃತ್ವದಲ್ಲಿ ನಿರಂತರವಾಗಿ ಯಕ್ಷಗಾನ ಕಲೆಗೆ ಪ್ರೋತ್ಸಾಹ, ಪೋಷಣೆ ಮಕ್ಕಳ ಮೂಲಕ ನೀಡಲ್ಪಡುತ್ತಿದೆ. ಆರಂಭದ ವರ್ಷಗಳಲ್ಲಿ ಬೆಳಾಲು ಸಾಂತಪ್ಪ ನಾಯ್ಕರವರು ಯಕ್ಷಗಾನ ಗುರುಗಳಾಗಿದ್ದರು. ನಂತರದ ವರ್ಷಗಳಲ್ಲಿ ರಮೇಶ್ ಕೂಡಿಗೆ, ದಿನೇಶ್ ಮಾರ್ಪಾಲು, ರವಿ ಪೂಜಾರಿ ಬೆಳಾಲು ಇವರೆಲ್ಲರೂ ಯಕ್ಷಗಾನ ಗುರುಗಳಾಗಿ ಮಕ್ಕಳಲ್ಲಿ ಯಕ್ಷಗಾನ ಕಲೆಯನ್ನು ಪೋಷಿಸಿ ಬೆಳೆಸಿರುತ್ತಾರೆ. ಇದೀಗ ಕಳೆದ ಆರೇಳು ವರ್ಷಗಳಿಂದ, ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದ ಕಲಾವಿದರಾಗಿದ್ದ ಖ್ಯಾತ ವೇಷಧಾರಿಗಳಾದ ಬೆಳಾಲು ಲಕ್ಷ್ಮಣ ಗೌಡರು ಗುರುಗಳಾಗಿ ವಿದ್ಯಾರ್ಥಿಗಳನ್ನು ಯಕ್ಷಗಾನ ಕಲಾವಿದರಾಗಿ ಬೆಳೆಸುತ್ತಿದ್ದಾರೆ. ಇವರು ವರ್ಷಾರಂಭದಿಂದಲೆ ಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಗತಿಯನ್ನು ಆರಂಭಿಸಿ ವಾರ್ಷಿಕೋತ್ಸವಕ್ಕೆ ಮಕ್ಕಳನ್ನು ತಯಾರು ಮಾಡಿ ಮಕ್ಕಳ ಯಕ್ಷಗಾನ ತಂಡವನ್ನು ರಂಗಕ್ಕೆ ಪ್ರವೇಶ ಮಾಡಿಸುತ್ತಿದ್ದಾರೆ.
ಪಂಚವಟಿ, ಬಕಾಸುರ ಸಂಹಾರ, ಶಶಿಪ್ರಭಾ ಪರಿಣಯ, ಯಜ್ಞ ಸಂರಕ್ಷಣೆ, ಬಿಲ್ಲ ಹಬ್ಬ ಕಂಸ ವಧೆ, ಯಜ್ಞ ಸಂರಕ್ಷಣೆಯೇ ಮೊದಲಾದ ಪ್ರಸಂಗಗಳನ್ನು ಆಯ್ದುಕೊಂಡು ಯಕ್ಷಗಾನದ ಮೂಲಕ ಜೀವನ ಮೌಲ್ಯಗಳನ್ನು ಪಾಠದ ಜೊತೆಗೆ ಮಕ್ಕಳಿಗೆ ಕಲಿಸಲಾಗುತ್ತಿದೆ. ಈ ವರ್ಷ “ಶ್ರೀಕೃಷ್ಣ ಕಾರುಣ್ಯ” (ಜಾಂಬವತಿ ಕಲ್ಯಾಣ) ಪ್ರಸಂಗವನ್ನು ಆಯ್ದುಕೊಂಡು ವಿದ್ಯಾರ್ಥಿಗಳನ್ನು ರಂಗಕ್ಕೆ ಸಿದ್ಧಗೊಳಿಸಲಾಗಿತ್ತು. ಮಕ್ಕಳ ಜೊತೆ ಸ್ವತಃ ಯಕ್ಷಗಾನ ಕಲಾವಿದರಾಗಿರೂ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ರವಿಚಂದ್ರ ಜೈನ್ ರವರು ತಾಳ ಹಾಕಿ, ವೇಷಹಾಕಿ ಕುಣಿಯುತ್ತಿದ್ದರು. ಈ ಮೂಲಕ ಯಕ್ಷಗಾನ ಕಲೆಯನ್ನು ಮಕ್ಕಳ ಮೂಲಕ ಬೆಳೆಸುವಲ್ಲಿ ಶಾಲಾ ಮುಖ್ಯೋಪಾಧ್ಯಾಯರ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ.
ಶಾಲಾ ಮಕ್ಕಳ ಯಕ್ಷಗಾನ ತಂಡವು ಹೊರಗೆಲ್ಲೂ ಪ್ರದರ್ಶನ ನೀಡದಿದ್ದರೂ ಬೆಳಾಲು ಗ್ರಾಮದಲ್ಲಿ ಯಕ್ಷಗಾನದ ಕಲೆಯ ಸೊಗಡನ್ನು, ಮೌಲ್ಯವನ್ನು ಜೀವಂತವಾಗಿ ಉಳಿಸಿ ಬೆಳೆಸುವಲ್ಲಿ ಪಸರಿಸುವಲ್ಲಿ ಬೆಳಾಲು ಪ್ರೌಢಶಾಲೆಯ ಮಕ್ಕಳು ಬಹಳ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಈ ರೀತಿಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಬೆಳಾಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಕಲಾ ಪೋಷಣೆ ಸದ್ದಿಲ್ಲದ ನಡೆಯುತ್ತಿದೆ. ಪೋಷಕರ ಮತ್ತು ಹಳೆ ವಿದ್ಯಾರ್ಥಿಗಳ ಪ್ರೋತ್ಸಾಹ ಈ ನಿಟ್ಟಿನಲ್ಲಿ ಶ್ಲಾಘನೀಯವಾಗಿದೆ.
ಉಜಿರೆ ಶ್ರೀ ಧ ಮಂ ಎಜ್ಯುಕೇಶನಲ್ ಸೊಸೈಟಿಯ ಆಡಳಿತಕ್ಕೊಳಪಟ್ಟ ಸಂಸ್ಥೆಯಾದ ಬೆಳಾಲು ಪ್ರೌಢಶಾಲೆಯ ಈ ಕಲಾ ಪೋಷಣೆ ತರಬೇತಿ, ಪ್ರದರ್ಶನಗಳು ಸಂಪೂರ್ಣ ಉಚಿತವಾಗಿದ್ದು ಅದರ ಪೂರ್ಣ ವೆಚ್ಚವನ್ನು ಆಡಳಿತ ಮಂಡಳಿಯೇ ಭರಿಸುತ್ತಿದೆ. ಆಡಳಿತ ಮಂಡಳಿಯ ಕಲಾಪೋಷಣೆಯ ಕಾರಣದಿಂದ ಮಕ್ಕಳಿಗೆ ಯಕ್ಷಗಾನ ಕಲೆಯ ತರಬೇತಿ ಸಾಧ್ಯವಾಗಿದೆ. ಇಲ್ಲಿ ಓದುವ ವಿದ್ಯಾರ್ಥಿಗಳು ಭಾಗ್ಯವಂತರು.
ಈ ಶಾಲೆಯಲ್ಲಿ ಪಾಠದೊಂದಿಗೆ ಯಕ್ಷಗಾನದಂತಹ ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದು ಗುಣಾತ್ಮಕ ಶಿಕ್ಷಣದ ಬಹಳ ದೊಡ್ಡ ಕಾರ್ಯವಾಗಿದೆ. ಶಿಕ್ಷಣವೆಂದರೆ ಕೇವಲ ಪಾಠ, ಪಾಸು, ಅಂಕವಷ್ಟೇ ಅಲ್ಲ ಗುಣಾಂಕವನ್ನು ವರ್ಧಿಸುವ ಚಟುವಟಿಕೆಗಳೂ ಮುಖ್ಯವೆಂಬುದನ್ನು ಬೆಳಾಲು ಪ್ರೌಢಶಾಲೆಯು ನಿತ್ಯ ಸತ್ಯವಾಗಿಸಿದೆ. ಈ ನೆಲೆಯಲ್ಲಿ ಶಾಲೆಯ ಶಿಕ್ಷಕ ಸಿಬ್ಬಂದಿಗಳೆಲ್ಲರ ದುಡಿಮೆ ಅಭಿನಂದನೀಯ. ಈ ಕಾರ್ಯವು ನಿರಂತರ ನಡೆಯಲೆಂಬುದು ಎಲ್ಲರ ಹಾರೈಕೆ.