ಬೆಳ್ತಂಗಡಿ: ನ್ಯಾಯಾಂಗ ನಿಂದನೆ ಆರೋಪದಡಿ ಬೆಳ್ತಂಗಡಿಯ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಪತ್ನಿ ಸರೋಜಾರವರಿಗೆ ಜ.11ರಂದು ಪುನಃ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಲು ಹೈಕೋರ್ಟ್ ನಿರ್ದೇಶನ ನೀಡಿದೆ.
ಬಬ್ಬುಕಟ್ಟೆ ಉಜಿರೆ ನಿವಾಸಿ ಜಯಪ್ರಕಾಶ ಶೆಟ್ಟಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ಹಿರಿಯ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಹಾಗೂ ನ್ಯಾ.ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತು. ಆಗ ಹಿಂದಿನ ನಿರ್ದೇಶನದಂತೆ ತಿಮರೋಡಿ ದಂಪತಿ ಹಾಜರಾಗಿದ್ದರು. ನ್ಯಾಯಾಲಯ ಇಬ್ಬರ ಹಾಜರಾತಿ ದಾಖಲಿಸಿಕೊಂಡು, ಸಮಯದ ಅಭಾವದ ಕಾರಣ ವಿಚಾರಣೆ ನಡೆಸದೆ ಮುಂದಿನ ಗುರುವಾರ ಪುನಃ ಹಾಜರಾಗಲು ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಮಹೇಶ್ ಶೆಟ್ಟಿ ತಿಮರೋಡಿ ಜಮೀನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್‌ಲ್ಲಿ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಅದರ ವಿಚಾರಣೆ ನಡೆಸಿದ್ದ ಹೈಕೋರ್ಟ್ ಒತ್ತುವರಿ ಜಾಗ ತೆರವುಗೊಳಿಸಲು 2019ರ ಜು.18ರಂದು ಆದೇಶಿಸಿತ್ತು. ಅದರಂತೆ ಉಜಿರೆ ಪಿಡಿಒ ಸ್ಥಳಕ್ಕೆ ಭೇಟಿ ನೀಡಿದ್ದಾಗ ಹೈಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ನಿಂದನಾತ್ಮಕವಾಗಿ ಮಾತನಾಡಿದ್ದರು. ನ್ಯಾಯಾಲಯದ ಆದೇಶ ಪಾಲಿಸದ ಹಾಗೂ ನ್ಯಾಯಮೂರ್ತಿಗಳ ಕುರಿತು ನಿಂದನೆ ಮಾಡಿದ ಆರೋಪದಲ್ಲಿ ತಿಮರೋಡಿ ವಿರುದ್ದ ನ್ಯಾಯಾಂಗ ನಿಂದನೆ ದಾವೆ ಹೂಡಲಾಗಿದೆ.