28.3 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳದ ನೆರವಿನಿಂದ ರುದ್ರಭೂಮಿಗಳಿಗೆ ಕಾಯಕಲ್ಪ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪ್ರಾರಂಭಿಸಲಾಗಿರುವ ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾರ್ಯಕ್ರಮದನ್ವಯ ಇದುವರೆಗೆ ರಾಜ್ಯಾದ್ಯಂತ 667 ಹಿಂದೂ ರುದ್ರಭೂಮಿಗಳನ್ನು ಪುನಶ್ಚೇತನಗೊಳಿಸಲಾಗಿದೆ.


ಕ್ಷೇತ್ರ ಧರ್ಮಸ್ಥಳದ ಅಧಿಪತಿ ವಿಷಕಂಠ ಶಿವ ಲಯಕಾರಕ. ಹಿಂದೂ ಧರ್ಮದಲ್ಲಿ ಮೃತರ ಸದ್ಗತಿಗಾಗಿ ಅನೇಕ ವೈದಿಕ ಆಚರಣೆಗಳು ಇದ್ದರೂ, ಮೃತದೇಹವನ್ನು ವಿಲೇ ಮಾಡುವಲ್ಲಿ ಧಾರ್ಮಿಕ ಸಂಸ್ಥೆಗಳು ಕೈಜೋಡಿಸುವ ಪರಿಪಾಠವಿಲ್ಲ. ಕ್ರಿಶ್ಚಿಯನ್ ಮತ್ತು ಇಸ್ಲಾಮ್ ಧರ್ಮದಲ್ಲಿ ಮೃತದೇಹಗಳ ವ್ಯವಸ್ಥೆಯ ಜವಾಬ್ದಾರಿಯನ್ನು ಆಯಾ ಚರ್ಚುಗಳು ಮತ್ತು ಮಸೀದಿಗಳು ತೆಗೆದುಕೊಳ್ಳುತ್ತವೆ. ಹಿಂದೂ ದೇವಳಗಳಲ್ಲಿ ಮೃತದೇಹಗಳನ್ನು ವಿಲೇ ಮಾಡುವ ವ್ಯವಸ್ಥೆ ಇರುವುದಿಲ್ಲ. ಗ್ರಾಮಗಳಲ್ಲಿ ಶವ ಸಂಸ್ಕಾರಕ್ಕಾಗಿ ಪ್ರತ್ಯೇಕ ರುದ್ರಭೂಮಿ ಸ್ಥಳವನ್ನು ಸರಕಾರದ ವತಿಯಿಂದ ಕಾಪಿಟ್ಟರೂ, ರುದ್ರಭೂಮಿಗಳು ಅವಗಣನೆಗೆ ತುತ್ತಾಗಿ, ಶವ ಸಂಸ್ಕಾರದ ವ್ಯವಸ್ಥೆ ಇಲ್ಲದ ಅನೇಕ ಗ್ರಾಮಗಳು ನಮ್ಮ ರಾಜ್ಯದಲ್ಲಿವೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಹಿಂದೂ ಧರ್ಮೀಯರ ಶವ ಸಂಸ್ಕಾರವನ್ನು ವ್ಯವಸ್ಥಿತವಾಗಿ ನಡೆಸುವಂತೆ ಪ್ರತಿ ಗ್ರಾಮದಲ್ಲಿಯೂ ಸೂಕ್ತ ಪರಿಕರಗಳನ್ನು ಕಲ್ಪಿಸುವ ದೃಷ್ಟಿಯಿಂದ ಹಿಂದೂ ರುದ್ರಭೂಮಿ ಯೋಜನೆಯನ್ನು ಪ್ರಾರಂಭಿಸಿದರು.


ಸ್ಥಳೀಯವಾಗಿ ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿಯನ್ನು ಪ್ರಾರಂಭಿಸಿ, ನಿಗದಿತವಾಗಿರುವ ರುದ್ರಭೂಮಿಯಲ್ಲಿ ಶವ ದಹನಕ್ಕೆ ಬೇಕಾಗುವ ಸೌಲಭ್ಯವನ್ನು ಸಮಿತಿಯ ವತಿಯಿಂದ ಮಾಡಿಸುವ ಮತ್ತು ನಿರಂತರ ನಿರ್ವಹಣೆ ಮಾಡುವ ಆಶಯವನ್ನು ಈ ಕಾರ್ಯಕ್ರಮದಲ್ಲಿ ಹೊಂದಲಾಗಿದೆ.
1992ರಲ್ಲಿ ಪ್ರಾರಂಭಗೊಂಡ ಈ ಕಾರ್ಯಕ್ರಮವು ಕ್ರಮೇಣ ಜನಪ್ರಿಯವಾಗಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ಸ್ಥಳೀಯರನ್ನು ಸಂಘಟಿಸಿಕೊಂಡು ತಮ್ಮೂರಿನ ರುದ್ರಭೂಮಿಯನ್ನು ಪುನಶ್ಚೇತನಗೊಳಿಸುವ ಮಹಾತ್ಕಾರ್ಯ ಇದೀಗ ಬಲಗೊಂಡಿರುತ್ತದೆ. ಸ್ಥಳೀಯರು ಶ್ರಮದಾನ, ಆರ್ಥಿಕ ನೆರವು, ಸಮಯ ದಾನದಿಂದ ರುದ್ರಭೂಮಿ ನಿರ್ವಹಣೆಯಲ್ಲಿ ತೊಡಗಿಕೊಂಡಿರುತ್ತಾರೆ. ಕ್ಷೇತ್ರದಿಂದ ಅಗತ್ಯ ಪರಿಕರಗಳಾದ ಶವದಹನ ಛೇಂಬರ್ ಮತ್ತು ಇತರ ಉಪಕರಣಗಳನ್ನು ಅಳವಡಿಸಿಕೊಳ್ಳಲು ರೂ. 2.50 ಲಕ್ಷದವರೆಗೆ ನೆರವನ್ನು ನೀಡಲಾಗುತ್ತದೆ.
ಕ್ಷೇತ್ರದ ನೆರವಿನಿಂದ ಖರೀದಿಸಲಾಗುವ ದಹನ ಚೌಕಿಯನ್ನು ವಿಶೇಷ ಕಬ್ಬಿಣದಿಂದ ಮಾಡಲಾಗಿದ್ದು, ೧.೨ ಟನ್ ಭಾರ ಇರುತ್ತದೆ. ಈ ಛೇಂಬರನ್ನು ಒಳಬದಿಯಿಂದ ವಿಶೇಷವಾಗಿ ತಯಾರಿಸಿದ ಅಲಾಯ್ ಕಾಸ್ಟ್ ಅಯರ್‍ನ್ ಪ್ಲೇಟ್‌ಗಳಿಂದ ಮುಚ್ಚಲಾಗಿದೆ. ಇದು 1200 ಕೆ.ಜಿ. ಭಾರವಾಗಿದ್ದು, 74 ಇಂಚು ಉದ್ದ, 39 ಇಂಚು ಅಗಲ ಹಾಗೂ 31 ಇಂಚು ಎತ್ತವಾಗಿದೆ. ಅಡಿ ಭಾಗದ ಗ್ರೇಟಿಂಗ್ಸ್ ಮೇಲೆ 2 ಸಾಲು ಸೌದೆ, ಅದರ ಮೇಲೆ ಶವ, ಅದರ ಮೇಲೆ ಮೂರು ಸಾಲು ಸೌದೆ ಇಡಲು ಹೆಚ್ಚೆಂದರೆ ೨೫೦ ರಿಂದ ೩೦೦ ಕೆ.ಜಿ. ಕಟ್ಟಿಗೆ ಸಾಕು. (ಸ್ಥಳೀಯ ಕ್ರಮದಲ್ಲಿ ೮೦೦ ರಿಂದ ೧,೦೦೦ ಕೆ.ಜಿ. ಕಟ್ಟಿಗೆ ಬೇಕಾಗುತ್ತದೆ). ಸೌದೆಯ ಉಳಿತಾಯ ಮತ್ತು ಸ್ವಚ್ಛತೆಯನ್ನು ಕಾಪಾಡಲು ಇದು ಸಹಕಾರಿಯಾಗಿದೆ.
ಈ ದಹನ ಚೌಕಿಯನ್ನು ಮಳೆ, ಬಿಸಿಲು, ಗಾಳಿಯಿಂದ ರಕ್ಷಿಸಲು ಸೂಕ್ತ ಮಾಡು ನಿರ್ಮಿಸಿ, ಕಟ್ಟಿಗೆ ದಾಸ್ತಾನು, ಸ್ನಾನ, ಶೌಚದ ವ್ಯವಸ್ಥೆ, ಪೂಜಾ ಕೊಠಡಿಯ ವ್ಯವಸ್ಥೆ ಮುಂತಾದವುಗಳನ್ನು ಕೂಡಾ ಈ ಯೋಜನೆಯಲ್ಲಿ ಅಳವಡಿಸಲಾಗುತ್ತದೆ.


ಕ್ಷೇತ್ರದಿಂದ ಪ್ರೇರಣೆ ಪಡೆದ ಅನೇಕ ಸ್ಥಳೀಯ ಸಂಸ್ಥೆಗಳು ತಮ್ಮೂರಿನಲ್ಲಿ ಉತ್ತಮ ಗುಣಮಟ್ಟದ ರುದ್ರಭೂಮಿಯನ್ನು ನಿರ್ಮಿಸಿದ್ದು, ಮಾದರಿಯಾಗಿವೆ. ಇದರಿಂದಾಗಿ ಶವ ಸಂಸ್ಕಾರವು ವ್ಯವಸ್ಥಿತವಾಗಿ ಕಡಿಮೆ ಖರ್ಚಿನಲ್ಲಿ ಪರಿಸರಕ್ಕೆ ಹಾನಿಯಾಗದಂತೆ ನಿರ್ವಹಣೆ ಮಾಡಲು ಸಾಧ್ಯವಾಗಿದೆ.

ಇದುವರೆಗೆ ಈ ಕಾರ್ಯಕ್ರಮದನ್ವಯ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರಾಜ್ಯದಾದ್ಯಂತ ೬೬೭ ರುದ್ರಭೂಮಿಗಳಿಗೆ ರೂ. ೮.೯೧ ಕೋಟಿ ಮೊತ್ತವನ್ನು ವಿನಿಯೋಗಿಸಿರುತ್ತಾರೆ. ಸ್ಥಳೀಯ ಸಹಭಾಗಿತ್ವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಸುಮಾರು ರೂ. 59.29 ಕೋಟಿ ಮೊತ್ತದ ಆರ್ಥಿಕ ವಿನಿಯೋಗವನ್ನು ಈ ಕಾರ್ಯಕ್ರಮದಲ್ಲಿ ಮಾಡಲಾಗಿದೆ ಎಂದು ಹೇಳಬಹುದು.


ಎಲ್ಲಕ್ಕಿಂತ ಮುಖ್ಯವಾಗಿ ಹಿಂದೂ ರುದ್ರಭೂಮಿಗಳ ಬಗ್ಗೆ ಸ್ಥಳೀಯರಲ್ಲಿ ಜವಾಬ್ದಾರಿಯನ್ನು ಮೂಡಿಸುವ ಬಗ್ಗೆ ಈ ಕಾರ್ಯಕ್ರಮವು ಯಶಸ್ವಿಯಾಗಿದೆ. ಅಲ್ಲದೇ, ಶಿವನ ಆವಾಸಸ್ಥಾನವಾದ ರುದ್ರಭೂಮಿಗೆ ತಕ್ಕುದಾದ ಗೌರವವೂ ಈ ಕಾರ್ಯಕ್ರಮಕ್ಕೆ ಪ್ರಾಪ್ತಿಯಾಗಿದೆ. ಶವ ಸಂಸ್ಕಾರವನ್ನು ಭಯರಹಿತವಾಗಿ, ಪ್ರೀತಿಯಿಂದ ಗೌರವಯುತವಾಗಿ ಮಾಡಲು ಇದರಿಂದ ಸಾಧ್ಯವಾಗಿದೆ.


ಪ್ರಸ್ತುತ ಸಾಲಿನಲ್ಲಿಯೂ ಸುಮಾರು 45 ರುದ್ರಭೂಮಿಗಳ ಪುನಶ್ಚೇತನ ಕಾರ್ಯಕ್ಕೆ ಪೂರಕ ನೆರವನ್ನು ನೀಡಲಾಗಿದೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್.ಮಂಜುನಾಥ್‌ರವರು ತಿಳಿಸಿರುತ್ತಾರೆ.

Related posts

ಖ್ಯಾತ ಚಲನಚಿತ್ರ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿಧನಕ್ಕೆ ಡಾ| ಡಿ. ಹೆಗ್ಗಡೆಯವರಿಂದ ಸಂತಾಪ

Suddi Udaya

ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ (ರಿ )ಬೆಳ್ತಂಗಡಿ ತಾಲೂಕು ಇವರ ವತಿಯಿಂದ ಆಟಿ ಅಮಾವಾಸ್ಯೆ ಪ್ರಯುಕ್ತ ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿಆಟಿದ ಕಷಾಯ.. ವಿತರಣಾ ಕಾರ್ಯಕ್ರಮ

Suddi Udaya

ಪ್ರೋ. ಕೆ.ಯಸ್ ಭಗವಾನ್ ಅವರ ಹೇಳಿಕೆಗೆ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಖಂಡನೆ

Suddi Udaya

ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ವೇಣೂರಿನಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಉಜಿರೆ: ಮುಂಡತ್ತೋಡಿ ನಿವಾಸಿ ಸಿ. ಗೋಪಾಲ್ ಕೃಷ್ಣ ಮೆನನ್ ನಿಧನ

Suddi Udaya
error: Content is protected !!