ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಹಲವೆಡೆ ಮೇ 27 ರಂದು ರಾತ್ರಿ ಒಂಟಿ ಸಲಗನ ಸಂಚಾರ ಮುಂದುವರಿದಿದೆ.
ಇಲ್ಲಿನ ಮಿತ್ತಕಟ್ಟಾಜೆ ಮೋಹನ ನಾಯ್ಕ ಎಂಬವರ ಮನೆಯಂಗಳಕ್ಕೆ ಬಂದು ಬಾಳೆ ಗಿಡ ತಿಂದು ಹಾಕಿದ ಬಳಿಕ ಸಲಗ ಫಣಿಕಲ್ಲು ಕಡೆ ಮುಂದುವರೆದಿದೆ. ಅಲ್ಲಿ ರಾಘವೇಂದ್ರ ಪಟವರ್ಧನ್ ರವರ ತೋಟಕ್ಕೆ ಕಾಡಾನೆ ಬರುತ್ತಿದ್ದಂತೆ ಮನೆಯವರಿಗೆ ತಿಳಿದು ಬಂದ ಕಾರಣ ಸ್ಥಳೀಯರು ಸೇರಿ ಆನೆಯನ್ನು ಓಡಿಸಿ, ಬೆಳಗಿನವರೆಗೆ ಗಸ್ತು ತಿರುಗಿದ ಕಾರಣ ಯಾವುದೇ ಕೃಷಿಹಾನಿ ಸಂಭವಿಸಿಲ್ಲ. ಸಲಗ ಇಲ್ಲಿಗೆ ಸಮೀಪದ ಅರಣ್ಯದಲ್ಲಿ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮೇ 26 ರಂದು ರಾತ್ರಿ ಕಾಡಾನೆ ಇದೇ ಗ್ರಾಮದ ಬಸವದಡ್ಡು ಪರಿಸರದ ತೋಟಗಳಲ್ಲಿ ಕೃಷಿಹಾನಿ ಉಂಟು ಮಾಡಿತ್ತು. ಬಸವದಡ್ಡು, ಮಿತ್ತಕಟ್ಟಾಜೆ, ಫಣಿಕಲ್ಲು, ಮುಂಡಾಜೆ, ದುಂಬೆಟ್ಟು ಪರಿಸರ ಹತ್ತಿರ ಹತ್ತಿರವಿದ್ದು ಕಾಡಾನೆ ಉಪಟಳ ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.