ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಜರಗಿದ ಪೋಷಕರ ಸಮಾವೇಶದಲ್ಲಿ ಮೂರು ತರಗತಿಗಳು ಮತ್ತು ಕ್ರೀಡಾ ಭಿತ್ತಿಪತ್ರಿಕೆಗಳ ಅನಾವರಣ ಕಾರ್ಯಕ್ರಮ ಜರಗಿತು. ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಉಜಿರೆ ಶ್ರೀಧ ಮಂ ಎಜ್ಯುಕೇಶನಲ್ ಸೊಸೈಟಿಯ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಧನ್ಯಕುಮಾರ್ ರವರು ಮಾತನಾಡುತ್ತಾ, ಹದಿಹರೆಯದ ಅವಧಿಯಲ್ಲಿ ಮಕ್ಕಳ ಬಗ್ಗೆ ವಿಶೇಷ ಗಮನ ಮತ್ತು ಕಾಳಜಿಯ ಅಗತ್ಯವಿರುತ್ತದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪೋಷಕರು ಮತ್ತು ಶಿಕ್ಷಕರು ಪೂರಕವಾಗಿ ಕಾರ್ಯ ನಿರ್ವಹಣೆ ಮಾಡಬೇಕಾದ ಅಗತ್ಯವಿರುತ್ತದೆ. ಅದಕ್ಕೆ ಪೋಷಕರ ಸಂಘವು ಉತ್ತಮ ವೇದಿಕೆಯಾಗಿದೆಯೆಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಅತಿಥಿಗಳು ಭಿತ್ತಿಪತ್ರಿಕೆಗಳನ್ನು ಅನಾವರಣಗೊಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರು ಪ್ರಸ್ತಾವನೆಯೊಂದಿಗೆ ವಾರ್ಷಿಕ ಚಟುವಟಿಕೆಗಳ ವಿವರವನ್ನು ನೀಡಿದರು. ಶಿಕ್ಷಕರಾದ ಸುಮನ್ ರವರು ವರದಿ ವಾಚಿಸಿದರು. ರವಿಚಂದ್ರರವರು ಶೈಕ್ಷಣಿಕ ವರ್ಷದ ನೂತನ ಶಿಕ್ಷಕ ರಕ್ಷಕ ಸಂಘದ ರಚನೆಯ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಭವಾನಿ ಮಾರ್ಪಾಲು ಮತ್ತು ನಿಕಟಪೂರ್ವ ಅಧ್ಯಕ್ಷರಾದ ಶೇಖರ ಗೌಡ ಕೊಲ್ಲಿಮಾರುರವರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ರಾಜೇಶ್ ಕುರ್ಕಿಲು, ಶಿಕ್ಷಕರಾದ ಗಣೇಶ್ವರ್, ಕೃಷ್ಣಾನಂದ ಮತ್ತು ಚಿತ್ರಾರವರು ಉಪಸ್ಥಿತರಿದ್ದರು. ಶಿಕ್ಷಕರಾದ ಜಗದೀಶ್ ರವರು ಸ್ವಾಗತಿಸಿ, ರಾಜಶ್ರಿಯವರು ವಂದಿಸಿದರು, ಶ್ರೀಮತಿ ಕೋಕಿಲಾರು ಕಾರ್ಯಕ್ರಮ ನಿರೂಪಿಸಿದರು.