ಹೊಸ್ಮಾರು ಸಿದ್ಧರವನ ಕ್ಷೇತ್ರದಲ್ಲಿ ಪೂಜ್ಯ ಮುಕ್ತಿಮತಿ ಮಾತಾಜಿ ಚಾತುರ್ಮಾಸ್ಯ

Suddi Udaya

ಉಜಿರೆ: ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕನ್ನು ನೀಡುವವನೆ ಗುರು. ಗುರುವಿನ ಮಹಿಮೆ ಅಪಾರವಾಗಿದ್ದು,  ಗುರುವಿಗೆ ವಿಶೇಷ ಮಾನ್ಯತೆ, ಗೌರವ ಇದೆ.  ಗುರು ಇಲ್ಲದಿದ್ದರೆ ಜೀವನವೇ ಶೂನ್ಯವಾಗುತ್ತದೆ ಎಂದು ಪೂಜ್ಯ ಆರ್ಯಿಕಾ ಮುಕ್ತಿಮತಿ ಮಾತಾಜಿ ಹೇಳಿದರು.


ಬೆಳ್ತಂಗಡಿ ತಾಲ್ಲೂಕಿನ ನಾರಾವಿ ಬಳಿ ಹೊಸ್ಮಾರು ಸಿದ್ಧರವನ ಕ್ಷೇತ್ರದಲ್ಲಿ ಮಹಾವೀರ ಸ್ವಾಮಿ ಬಸದಿಯಲ್ಲಿ ತಮ್ಮ ಚಾತುರ್ಮಾಸ್ಯ ವೃತಾಚರಣೆಯ ಅಂಗವಾಗಿ ಗುರುಪೂರ್ಣಿಮೆಯ ದಿನ ಜು.21 ರಂದು ಮಂಗಳಕಲಶ ಸ್ಥಾಪನೆ ಸಮಾರಂಭದಲ್ಲಿ ಅವರು ಮಂಗಳಪ್ರವಚನ ನೀಡಿದರು.


ಗುರುಗಳ ಮೂಲಕ ಆತ್ಮನ ನಿಜಸ್ವರೂಪವನ್ನು ತಿಳಿದು ವೃತ-ನಿಯಮಗಳ ಪಾಲನೆ, ಸ್ವಾಧ್ಯಾಯ, ಜಪ, ತಪ, ಧಾನ್ಯ, ಸತ್ಯ, ಅಹಿಂಸೆ, ಅಪರಿಗ್ರಹ ಮೊದಲಾದ ಪಂಚಾಣುವೃತಗಳ ಪಾಲನೆಯೊಂದಿಗೆ, ರತ್ನತ್ರಯ ಧರ್ಮದ ಅನುಷ್ಠಾನದಿಂದ ಅಕ್ಷಯ ಸುಖವನ್ನೀಯುವ ಮೋಕ್ಷಪ್ರಾಪ್ತಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.


ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಕಾಲ್ನಡಿಗೆಯಲ್ಲೆ ಸಂಚರಿಸಿ ಧರ್ಮಪ್ರಭಾವನೆ ಮಾಡುವ ಮುನಿಗಳು, ಸಾಧು-ಸಂತರು, ಮಾತಾಜಿಯವರು ನಲಿದಾಡುವ ದೇವರು. ಅವರ ವಾಸ್ತವ್ಯ, ದರ್ಶನ ಮತ್ತು ಸೇವೆಯಿಂದ ಸಾನ್ನಿಧ್ಯ ವೃದ್ಧಿಯಾಗುತ್ತದೆ. ಬದುಕಿನಲ್ಲಿ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ.


ಧರ್ಮದ ಮರ್ಮವನ್ನರಿತು ಬದುಕಿನಲ್ಲಿ ಅನುಷ್ಠಾನಗೊಳಿಸಬೇಕು. ಹಿಂದಿನ ಪರಂಪರೆಯನ್ನು ಮುಂದುವರಿಸಿಕೊAಡು ಹೋಗಬೇಕು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಭಕ್ತಿಯೇ ಮುಕ್ತಿಗೆ ಸಾಧನ, ಸರ್ವಶ್ರೇಷ್ಠ ಎಂದು ಅವರು ತಿಳಿಸಿದರು.


ಹಿರಿಯ ವಿದ್ವಾಂಸ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಮಾತನಾಡಿ, ಚಾತುರ್ಮಾಸ್ಯವು ಜ್ಞಾನಸಂಪಾದಿಸುವ ಜ್ಞಾನಯಜ್ಞವಾಗಿದ್ದು, ಆತ್ಮಕಲ್ಯಾಣಕ್ಕೆ ಪ್ರೇರಕವಾಗಿದೆ. ಮಾತಾಜಿಯವರ ಶ್ರದ್ಧಾ-ಭಕ್ತಿಯ ಸೇವೆಯಿಂದ ಮಾನಸಿಕ ಶಾಂತಿ, ನೆಮ್ಮದಿ ದೊರಕಿ ಜಿವನ ಪಾವನವಾಗುತ್ತದೆ ಎಂದರು.


ಅಂಡಾರು ಗುಣಪಾಲ ಹೆಗ್ಡೆ ಶುಭಾಶಂಸನೆ ಮಾಡಿದರು. ಅಧ್ಯಕ್ಷತೆ ವಹಿಸಿದ ಸುದರ್ಶನಜೈನ್, ಬಂಟ್ವಾಳ ಮಾತನಾಡಿ ಯುವಜನತೆ ಹೃದಯಶ್ರೀಮಂತಿಕೆಯೊಂದಿಗೆ ಧಾರ್ಮಿಕ ಸಭೆ-ಸಮಾರಂಭಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಮೊದಲ ಮಂಗಳಕಲಶಗಳನ್ನು ಚಾತುರ್ಮಾಸ ಸಮಿತಿ ಅಧ್ಯಕ್ಷ ಪ್ರೇಮ್ ಕುಮಾರ್ ಹೊಸ್ಮಾರು ಸ್ಥಾಪನೆ ಮಾಡಿದರು.
ನಿರೀಕ್ಷಾ ಹೊಸ್ಮಾರು ಅವರ ಸುಶ್ರಾವ್ಯ ಜಿನಭಕ್ತಿಗೀತೆಗಳ ಗಾಯನ ಸಮಾರಂಭಕ್ಕೆ ವಿಶೇಷ ಮೆರುಗನ್ನು  ನೀಡಿತು.
ಪ್ರೇಮ್‌ಕುಮಾರ್ ಸ್ವಾಗತಿಸಿದರು. ಶಿಶುಪಾಲ ಜೈನ್ ನಾರಾವಿ ಧನ್ಯವಾದವಿತ್ತರು.
ನಿರಂಜನ ಜೈನ್ ಕಾರ್ಯಕ್ರಮ ನಿರ್ವಹಿಸಿದರು.


ಚಾತುರ್ಮಾಸದ ಅವಧಿಯಲ್ಲಿ ವಿಶೇಷಪೂಜೆ, ಆರಾಧನೆ, ಸಾಮೂಹಿಕ ವೃತೋಪದೇಶ, ಮಾತಾಜಿಯವರಿಂದ ಮಂಗಳ ಪ್ರವಚನ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Leave a Comment

error: Content is protected !!