ಬೆಳ್ತಂಗಡಿ: ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯದ ಉಜಿರೆಯಲ್ಲಿ ವಿಶೇಷ ಕರ್ತವ್ಯ ನಿರ್ವಹಿಸುತ್ತಿರುವ ಉಪ ವಲಯ ಅರಣ್ಯಾಧಿಕಾರಿ ಕಮಲಾ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಅರಣ್ಯ ಸಂರಕ್ಷಣೆ, ಅಕ್ರಮ ಕಡಿತಲೆ, ವನ್ಯಜೀವಿ ಸಂರಕ್ಷಣೆ, ಒತ್ತುವರಿ ತೆರವು, ಕ್ರೀಡಾಕೂಟಗಳಲ್ಲಿ ಸಾಧನೆ ಇತ್ಯಾದಿ ಕೆಲಸ ಕಾರ್ಯಗಳು ಹಾಗೂ ಶೌರ್ಯ, ದಿಟ್ಟತನ ತೋರಿಸಿರುವ ಮೂಲಕ ಅರಣ್ಯ ಇಲಾಖೆಯಲ್ಲಿ ಗಣನೀಯ ಸಾಧನೆ ಮಾಡಿರುವ ಅಧಿಕಾರಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಿಆರ್‌ಎಫ್‌ಓ ಕಮಲಾ 2022ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಜು. 31ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಉಜಿರೆಯ ಪೆರ್ಲ ನಿವಾಸಿ ಕಮಲಾ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ವಿದ್ಯಾಭ್ಯಾಸ ಮಾಡಿದ್ದು, 2005ರಲ್ಲಿ ಅರಣ್ಯ ವೀಕ್ಷಕಿಯಾಗಿ ನೇರ ನೇಮಕಾತಿ ಹೊಂದಿದ್ದರು. ಬೆಳ್ತಂಗಡಿ ವಲಯದ ಚಿಬಿದ್ರೆ, ತೋಟತ್ತಾಡಿಯಲ್ಲಿ ಕಾರ್ಯ ನಿರ್ವಹಿಸಿದ ನಂತರ 2010ರಲ್ಲಿ ಅರಣ್ಯ ರಕ್ಷಕಿಯಾಗಿ ಪದೋನ್ನತಿ ಪಡೆದು ಚಿಬಿದ್ರೆ, ತೋಟತ್ತಾಡಿ, ನೆರಿಯ, ಪುದುವೆಟ್ಟಿನಲ್ಲಿ ಕಾರ್ಯ ನಿರ್ವಹಿಸಿದ್ದರು. 2021ರಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಬಡ್ತಿ ಪಡೆದು, ಉಪ್ಪಿನಂಗಡಿ ವಲಯದ ಶಿಬಾಜೆಯಲ್ಲಿ ಸೇವೆ ಸಲ್ಲಿಸಿದ್ದರು. 2024ರಲ್ಲಿ ಮಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದ್ದು, ಪ್ರಸಕ್ತ ಉಜಿರೆಯಲ್ಲಿ ವಿಶೇಷ ಕರ್ತವ್ಯ ನಿರ್ವಹಿಸುತ್ತಿದ್ದಾರೆ.