ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸರಿಸುಮಾರು ಸಾವಿರಕ್ಕೂ ಹೆಚ್ಚಿನ ಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಗಳ ಶೌಚಾಲಯಗಳನ್ನು ಸ್ವಚ್ಛಾಲಯಗಳನ್ನಾಗಿ ಪರಿವರ್ತಿಸುವ ಮೂಲಕ ಬಡ ಮಕ್ಕಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ನೆರವಾಗುವ ವಿನೂತನ ಪರಿಕಲ್ಪನೆಯೊಂದಿಗೆ ರಾಜಕೇಸರಿ ಸ್ವಚ್ಛಾಲಯ ಅಭಿಯಾನದಡಿ ನ.19 ರಂದು “ವಿಶ್ವ ಶೌಚಾಲಯ ದಿನಾಚರಣೆ” ಯ ಪ್ರಯುಕ್ತ ಮಂಗಳೂರು ನಗರದ ಕೂಳೂರು ಬಳಿಯಿರುವ ಪರಪಾದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಶಮಾನೋತ್ಸವದ ಸಂಭ್ರಮದಲ್ಲಿರುವ ಟಿ.ಟಿ ಗೈಸ್ ಮಂಗಳೂರು ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ದಕ್ಷಿಣಕನ್ನಡ ಜಿಲ್ಲೆ ಇದರ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವು ಶಾಲೆಯ ಪುಟಾಣಿ ಮಕ್ಕಳು ದೀಪ ಪ್ರಜ್ವಲಿಸುವ ಮೂಲಕ ಶುಭಾರಂಭಗೊಂಡಿತು. ರಾಜ ಕೇಸರಿ ಟ್ರಸ್ಟಿನ ಜಿಲ್ಲಾಧ್ಯಕ್ಷ ಸಂತೋಷ್ ಕೊಲ್ಯ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಸದುದ್ದೇಶ ಮತ್ತು ಕಾರ್ಯಯೋಜನೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿಘ್ನೇಶ್ ರಾಜ್ ರವರು ವಿಶ್ವ ಶೌಚಾಲಯ ದಿನಾಚರಣೆಯ ಮಹತ್ವ ಮತ್ತು ಔಚಿತ್ಯದ ಬಗ್ಗೆ ಮಾಹಿತಿ ನೀಡಿದರು. ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಗ್ರಾಮೀಣ ಸ್ವಚ್ಛಭಾರತ ಮಿಷನ್ ನ ಡೊಂಬಯ್ಯ ಇಡ್ಕಿದು ಮಾತನಾಡಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆ ಯ ಪ್ರಧಾನ ಕಾರ್ಯದರ್ಶಿ ನಟರಾಜ್ ಪಚ್ಚನಾಡಿ, ಯುವವಾಹಿನಿ ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿ ಹಾಗೂ ಸಮಾಜ ಸೇವಕಿ ಶ್ರೀಮತಿ ರೇಖಾ ಗೋಪಾಲ್, ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷೆ ಶ್ರೀಮತಿ ಮೈಮುನ , ದಕ್ಷಿಣ ಕನ್ನಡ ಜಿಲ್ಲಾ ಟೆಂಪೋ ಚಾಲಕರ ಉಪಾಧ್ಯಕ್ಷ ರೂಪೇಶ್ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಶಮಾನೋತ್ಸವದ ಸಂಭ್ರಮದಲ್ಲಿರುವ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿರುವ ಟಿ.ಟಿ ಗೈಸ್ ಮಂಗಳೂರು ಇವರ ವತಿಯಿಂದ ರಾಜಕೇಸರಿ ಸ್ವಚ್ಛಾಲಯ ಅಭಿಯಾನಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸ್ವಚ್ಛತಾ ಸೇವೆಗೆ ಅಗತ್ಯವಿರುವ ಸುಮಾರು 15,000 ರೂಪಾಯಿ ಮೌಲ್ಯದ ಸ್ವಚ್ಛತಾ ಸಲಕರಣೆಗಳನ್ನು ರಾಜಕೇಸರಿ ಟ್ರಸ್ಟ್ ಗೆ ಕೊಡುಗೆಯಾಗಿ ಹಸ್ತಾಂತರಿಸಲಾಯಿತು. ಮತ್ತು ಹಿರಿಯ ನಿವೃತ್ತ ಟೆಂಪೋ ಟ್ರಾವೆಲರ್ ಚಾಲಕ ರವೀಂದ್ರ .ಕೆ ರವರನ್ನು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸ್ವಯಂ ಪ್ರೇರಿತರಾಗಿ ಸ್ವಇಚ್ಛೆಯಿಂದ ಶ್ರಮದಾನದ ಮೂಲಕ ಸರಕಾರಿ ಶಾಲೆಗಳ ಶೌಚಾಲಯಗಳನ್ನು ಸ್ವಚ್ಛಗೊಳಿಸಿ ಸ್ವಚ್ಛಾಲಯಗಳನ್ನಾಗಿ ಪರಿವರ್ತಿಸುತ್ತಿರುವ ರಾಜಕೇಸರಿ ಟ್ರಸ್ಟ್ ನ ಶ್ರಮಜೀವಿ ಸ್ವಯಂಸೇವಕರನ್ನು ಈ ಸಂದರ್ಭದಲ್ಲಿ ಟಿ.ಟಿ ಗೈಸ್ ಮಂಗಳೂರು ವತಿಯಿಂದ ಗೌರವಾದರಗಳಿಂದ ಅಭಿನಂದಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಖಾ, ರಾಜಕೇಸರಿ ಟ್ರಸ್ಟ್ ಮತ್ತು ಟಿ.ಟಿ ಗೈಸ್ ಮಂಗಳೂರು ಇದರ ಪದಾಧಿಕಾರಿಗಳು ಮತ್ತು ಸದಸ್ಯರು, ಶಾಲೆಯ ಹಳೆ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕ ಪೋಷಕರ ಸಂಘದ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕ ವೃಂದದವರು ಮತ್ತು ಶಾಲೆಯ ಮಕ್ಕಳು ಉಪಸ್ಥಿತರಿದ್ದರು.
ಸ್ವಚ್ಛತಾ ಅಭಿಯಾನಕ್ಕೆ ಕೊಡುಗೆ ನೀಡಿದ ಟಿ.ಟಿ ಗೈಸ್ ಮಂಗಳೂರು ಸದಸ್ಯರನ್ನು ರಾಜ ಕೇಸರಿ ಟ್ರಸ್ಟ್ ನ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ರಾಜಕೇಸರಿ ಟ್ರಸ್ಟ್ ನ ಜಿಲ್ಲಾಧ್ಯಕ್ಷ ಸಂತೋಷ್ ಕೊಲ್ಯ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು.