ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ವಾರ್ಷಿಕ ಕ್ರೀಡೋತ್ಸವವನ್ನು ನ. 28 ರಂದು ಉದ್ಘಾಟಿಸಲಾಯಿತು.

ಶಾಲಾ ವಾದ್ಯತಂಡದೊಂದಿಗೆ ಅಭ್ಯಾಗತರನ್ನು ವೇದಿಕೆಗೆ ಸ್ವಾಗತಿಸಲಾಯಿತು. ಶಾಲಾ ವಿವಿಧ ತಂಡಗಳ ನಾಮಫಲಕವನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಯಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನಿತಿನ್ ಪೂಜಾರಿಯವರು ಶಾಲಾ ಧ್ವಜಾರೋಹಣಗೈದು ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ಛಲದಿಂದ ತಮ್ಮ ಗುರಿಯನ್ನು ಸಾಕಾರಗೊಳಿಸಬೇಕು ಎಂದು ತಮ್ಮ ಜೀವನಾನುಭವವನ್ನು ಹಂಚಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿ ಕ್ರೀಡೋತ್ಸವಕ್ಕೆ ಶುಭ ಹಾರೈಸಿದರು.

ಶಾಲಾ ಸಂಚಾಲಕರಾದ ಅತೀ ವಂ ಫಾ ವಾಲ್ಟರ್ ಡಿಮೆಲ್ಲೋ ರವರು ವಿದ್ಯಾರ್ಥಿಗಳಿಗೆ ಕನಸು ಕಾಣಿರಿ ಮತ್ತು ಛಲದಿಂದ ಕನಸನ್ನು ನನಸು ಮಾಡಿ ಎಂದು ನುಡಿದು ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿವಿಧ ತಂಡಗಳ ವಿದ್ಯಾರ್ಥಿಗಳು ಭವ್ಯ ಪಥ ಸಂಚಲನದ ಮೂಲಕ ಶಾಲಾ ದ್ವಜಕ್ಕೆ ಗೌರವ ಸಲ್ಲಿಸಿದರು. ಕ್ರೀಡಾ ನಾಯಕರಾದ ಕರಣ್ ಮತ್ತು ವೀವನ್ ಪಿಂಟೋ ಕ್ರೀಡಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿಗಳು ಕವಾಯತು ನೃತ್ಯದ ಮೂಲಕ ಕ್ರೀಡಾಸಕ್ತಿ ಮತ್ತು ಶಿಸ್ತನ್ನು ಪ್ರದರ್ಶಿಸಿದರು. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕ್ರೀಡಾ ಸಾಧನೆಗೈದ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು.

ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ರಮೇಶ್, ಚರ್ಚ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೆನ್ನಿವಾಸ್ ಮತ್ತು ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕ ಪ್ರಜ್ವಲ್ ಉಪಸ್ಥಿತರಿದ್ದರು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ವಂದಿಸಿದರು. ವಿದ್ಯಾರ್ಥಿನಿಯರಾದ ವೆಲೋನ ಪಿಂಟೋ ಮತ್ತು ಅಫ್ರತ್ ಕಾರ್ಯಕ್ರಮ ನಿರ್ವಹಿಸಿದರು.