
ನಾವೂರು : ಇಲ್ಲಿಯ ಇತಿಹಾಸ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗ್ರಾಮದ ಮನೆ ಮನೆಗೆ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಿಂದ ತಂದಂತಹ ಗಂಗಾಜಲವನ್ನು ವಿತರಣೆ ಮಾಡುವ ಕಾರ್ಯಕ್ರಮವು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ನಡೆಸಲಾಯಿತು.

ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ 144 ವರ್ಷ ಗಳಿಗೊಮ್ಮೆ ನಡೆಯುವ ಮಹಾ ಪೂರ್ಣ ಕುಂಭಮೇಳದಲ್ಲಿ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಭಕ್ತರು ತ್ರಿವೇಣಿ ಸಂಗಮದಲ್ಲಿ ವಿಷ್ಣು ಸಹಸ್ರನಾಮ ಪಠಣ ಮಾಡಿ ಪವಿತ್ರ ತೀರ್ಥ ಸ್ನಾನ ಮಾಡಿ ತಂದಂತಹ ಪವಿತ್ರ ಗಂಗಾಜಲವನ್ನು ಫೆ.28 ರಂದು ದೇವಸ್ಥಾನದ ಪ್ರಧಾನ ಅರ್ಚಕ ದಿನೇಶ್ ಭಟ್ ಇವರ ಪೌರೋಹಿತ್ಯದಲ್ಲಿ ಶ್ರೀ ಗೋಪಾಲಕೃಷ್ಣ ದೇವರಿಗೆ ರಂಗಪೂಜೆ ನೆರವೇರಿಸಿ ಗಂಗಾಜಲಕ್ಕೆ ಪೂಜೆ ಹಾಗೂ ಆರತಿಯನ್ನು ಮಾಡಿ ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಿ ಭಕ್ತರಿಗೆ ಗಂಗಾಜಲ ತೀರ್ಥವನ್ನು ವಿತರಿಸಿದರು.


ಈ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ನ ಅಧ್ಯಕ್ಷ ಹರೀಶ್ ಸಾಲ್ಯಾನ್, ಪೂರ್ವಧ್ಯಕ್ಷ ಎ. ಬಿ ಉಮೇಶ್ ಅತ್ಯಡ್ಕ, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ, ದೇವಸ್ಥಾನದ ಜಾತ್ರಾ ಮಹೋತ್ಸವದ ಅಧ್ಯಕ್ಷ ಡಾ| ಪ್ರದೀಪ್, ಎಸ್ ಎನ್ ಭಟ್ ಹಾಗೂ ಟ್ರಸ್ಟ್ ನ ಸರ್ವ ಸದಸ್ಯರು, ಪಾಲ್ಗೊಂಡರು.

ಈ ಸಂದರ್ಭದಲ್ಲಿ ಕುಂಭಮೇಳದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತರು ಉಪಸ್ಥಿತರಿದ್ದರು. ನಾವೂರು ಗ್ರಾಮದ ಪ್ರತಿ ಮನೆಯ ಭಕ್ತರು ಹಾಗೂ ನೆರೆಕರೆಯ ಗ್ರಾಮದ ಭಕ್ತರು ಪಾಲ್ಗೊಂಡು ಗಂಗಾಜಲವನ್ನು ಪಡೆದುಕೊಂಡರು.