ಶಿರ್ಲಾಲು: ಕರಂಬಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಭರತನಾಟ್ಯ ತರಗತಿಯ ಉದ್ಘಾಟನಾ ಕಾರ್ಯಕ್ರಮ ಎ.5ರಂದು ಜರಗಿತು.
ಹಿರಿಯ ಭರತನಾಟ್ಯ ಶಿಕ್ಷಕಿ ಉಮಾ ಮಾಧವಿ ಕೊಳಲಗಿರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಠ್ಯದೊಂದಿಗೆ ಭರತನಾಟ್ಯ, ಸಂಗೀತ ನಾಟಕ, ಯಕ್ಷಗಾನ ಮೊದಲಾದ ಕಲೆಗಳನ್ನು ಕಲಿಯುವುದರಿಂದ ಜ್ಞಾನದ ಅಭಿವೃದ್ಧಿ ಉಂಟಾಗುತ್ತದೆ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಊರಿನ ಹಿರಿಯರಾದ ನಾರಾಯಣ ಹೆಬ್ಬಾರ್ ಮತ್ತು ಕುಟುಂಬಸ್ಥರ ಶ್ರಮದ ಫಲವಾಗಿ ಈ ಶಾಲೆ ನಿರ್ಮಾಣವಾಗಿದ್ದು ಸ್ಥಳೀಯರ ಶಿಕ್ಷಣ ವ್ಯವಸ್ಥೆಗೆ ಪೂರಕ ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುಷ್ಪರಾಜ ಎಂ.ಕೆ., ಉಪಾಧ್ಯಕ್ಷೆ ವಿಜಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿವೇಕ ಕೇಳ್ಕರ್, ಶಿಕ್ಷಕಿಯರಾದ ಚೈತ್ರಾ ಕುಮಾರಿ, ಸೌಜನ್ಯಾ, ಲತಾ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ರಮೇಶ್ ಚೌಹಾನ್ ಸ್ವಾಗತಿಸಿದರು. ತಸ್ಮಿಯಾ ಪರ್ವಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾಶಿವ ಕುಮಾರ್ ನಿರೂಪಿಸಿ,ಸಾವಿತ್ರಿ ಎಂ. ವಂದಿಸಿದರು.
ಒಂದರಿಂದ ಏಳು ತರಗತಿಗಳನ್ನು ಹೊಂದಿರುವ ಈ ಶಾಲೆಯಲ್ಲಿ ಸಂಗೀತ, ಯೋಗ ತರಗತಿಗಳು ನಡೆಯುತ್ತಿದ್ದು ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡಲಾಗುತ್ತಿದೆ. ಈ ಶೈಕ್ಷಣಿಕ ವರ್ಷದಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ಭರತನಾಟ್ಯ ತರಗತಿಗಳು ನಡೆಯಲಿವೆ.