ಬೆಳ್ತಂಗಡಿ: ವೇಣೂರು ಕುಂಡದಬೆಟ್ಟು ಜುಮಾ ಮಸೀದಿಯ ಅಂಗಣದಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಮಹಾ ವ್ಯಕ್ತಿತ್ವ ವಲಿಯುಲಾಹಿ ಇಬ್ರಾಹಿಂ ಉಸ್ತಾದ್ (ನ.ಮ) ಕುಂಡದಬೆಟ್ಟು ಉಸ್ತಾದ್ ಎಂದೇ ಪ್ರಸಿದ್ದಿ ಪಡೆದವರು. 1974ರಲ್ಲಿ ವಿಧಿವಶರಾದ ಅವರು ಅದಕ್ಕಿಂತ ಮುಂಚೆ ನಾಲ್ಕೈದು ದಶಕಗಳ ಕಾಲ ಕುಂಡದಬೆಟ್ಟು ಮಸೀದಿಯಲ್ಲಿ ಇಮಾಮರಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ ಪಣಕಜೆ ಬಳ್ಳಮಂಜ ಮೊದಲಾದ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲಿ ಹೋಗಿ ಬಂದು ಸುಜ್ಞಾನದ ಬೆಳಕನ್ನು ನೀಡಿದರು. ಅಪಾರ ಪಾಂಡಿತ್ಯ, ಆಧ್ಯಾತ್ಮಿಕ ಅನುಭೂತಿಯ ಪವಾಡ ಪುರುಷನಾಗಿ ಬಾಳಿ ಬದುಕಿದ ಉಸ್ತಾದರ ಮಹಿಮೆ ಅಪಾರ ಆ ಉಸ್ತಾದರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ 51 ನೇ ವರ್ಷದ ಉರೂಸ್ ಮುಬಾರಕ್ ಮೇ 1, 2, 3 ರಂದು ದರ್ಗಾ ವಠಾರ ಕುಂಡದಬೆಟ್ಟು ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಮುತ್ತಲೀಬ್ ಹೇಳಿದರು.
ಅವರು ಎ. 29 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಮೂರು ದಿನಗಳಲ್ಲಿ ಧಾರ್ಮಿಕ ಉಪನ್ಯಾಸ, ಜಲಾಲಿಯಾ ಆಧ್ಯಾತ್ಮಿಕ ಝಿಕ್ರ್ ಮಜ್ಲಿಸ್, ಸೌಹಾರ್ದ ಭಾವೈಕ್ಯತಾ ಸಂಗಮ ಸಮಾರೋಪ ಸಮಾರಂಭ ಹೀಗೆ ವೈವಿದ್ಯಮಯ ಕಾರ್ಯಕ್ರಮಗಳು ನಡೆಯಲಿದೆ. ಉರೂಸಿನ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಝೈನುಲ್ ಆಬೀದೀನ್ ತಂಙಳ್ ಕಾಜೂರು, ಅಸ್ಸಯ್ಯಿದ್ ಅಬ್ದುರ್ರಹ್ಯಾನ್ ಸಾದಾತ್ ತಂಙಳ್ , ಡಾ. ಹಝ್ರತ್ , ಮಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಹಂಝ ವಿಸ್ಬಾಹಿ ಓಟ್ಯಪದವು ಕೇರಳ, ಮಸ್ ಊದ್ ಸಅದಿ ಗಂಡಿಬಾಗಿಲು, ಹನೀಫ್ ಸಖಾಫಿ ಕುಂಡದಬೆಟ್ಟು ಮುಂತಾದ ಧಾರ್ಮಿಕ ನೇತಾರರು ಭಾಗವಹಿಸಲಿರುವರು.
ಸೌಹಾರ್ದ ಭಾವೈಕ್ಯತಾ ಸಂಗಮದಲ್ಲಿ ಶಾಫಿ ಸಅದಿ ಬೆಂಗಳೂರು, ಶ್ರೀ ಈಶವಿಠಲದಾಸ ಸ್ವಾಮೀಜಿ ಸಾಂದೀಪನಿ ಸಾಧನಾಶ್ರಮ, ಶ್ರೀ ಕ್ಷೇತ್ರ ಕೇಮಾರು, ಫಾದರ್ ಜೋಸೆಫ್ ವಲಿಯಪರಂಬಿಲ್ ಧರ್ಮಗುರುಗಳು ಸೈ0ಟ್ ಜಾನ್ ಪಾಲ್ ಚರ್ಚ್ ಕುಂಡದಬೆಟ್ಟು, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಕುಕ್ಕೇಡಿ-ನಿಟ್ಟಡೆ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಮೊದಲಾದ ರಾಜಕೀಯ, ಸಾಮಾಜಿಕ ಗಣ್ಯರು ಭಾಗವಹಿಸಲಿರುವರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ ವೈ ಇಸ್ಮಾಯಿಲ್, ಧರ್ಮಗುರು ಕೆ ಎಂ ಹನೀಫ್ ಸಖಾಫಿ, ಉಪಸ್ಥಿತರಿದ್ದರು.