25.1 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್.ಡಿ.ಎಂ ಸ್ವಾಯತ್ತ ಕಾಲೇಜು : ವಿದ್ಯಾರ್ಥಿಗಳಿಂದ ಪ್ರಾಯೋಗಿಕ ‘ಮಾದರಿ ಸಂಸತ್ತು 2025 -26’

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳೇ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಾಯೋಗಿಕ ‘ ಮಾದರಿ ಸಂಸತ್ತು 2025 -26’ ವಿಶೇಷ ಕಾರ್ಯಕ್ರಮವು ಕಾಲೇಜಿನ ಸಮ್ಯಕ್ ದರ್ಶನ ಸಭಾಭವನದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ಸುದ್ದಿ ಬಿಡುಗಡೆ ವರದಿಗಾರ ರಾಘವ ಶರ್ಮಾ ನಿಡ್ಲೆ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜ್ಞಾನ‌ ಸೇರಿದಂತೆ ಪ್ರಸ್ತುತ ವಿದ್ಯಮಾನಗಳ ಕುರಿತಾದ ಚರ್ಚೆ, ಅರಿವು ಹಾಗು ಅಭಿಪ್ರಾಯಗಳು ಬಹು ಮುಖ್ಯ. ಇಂತಹ ಚರ್ಚೆಗಳು ವಿದ್ಯಾರ್ಥಿ ಜೀವನದಿಂದಲೇ ಆರಂಭವಾದಾಗ ಯುವ ಸಮುದಾಯ ವೈಚಾರಿಕ ಪ್ರಬುದ್ಧತೆಯನ್ನು ಹೊಂದುವುದರ ಜೊತೆಗೆ ದೇಶ ನಿರ್ಮಾಣ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ. ದೇಶವನ್ನು ಸುಭದ್ರತೆ ಮತ್ತು ಸುವ್ಯವಸ್ಥೆ ಯಿಂದ ನೋಡಿಕೊಳ್ಳುವ ಜವಾಬ್ದಾರಿಯುತ ಜನ ನಾಯಕರನ್ನು ಆಯ್ಕೆಮಾಡಲು ಹಾಗು ನಾಡಿನಾದ್ಯಂತ ಯುವ ನಾಯಕರು ತಯಾರಾಗಲು ಇಂತಹ ವೇದಿಕೆಗಳು ಪ್ರೇರಣೆಯಾಗುತ್ತದೆ.

ಪ್ರತಿಯೊಬ್ಬ ವಿದ್ಯಾರ್ಥಿಯೂ ರಾಜಕೀಯ ಮತ್ತು ಕಾನೂನಿನ ಅರಿವಿನೊಂದಿಗೆ ನಡೆದರೆ ಮಾತ್ರ ಹೊಸ ಯೋಜನೆ , ನಾಡಿನ ಜ್ವಲಂತ ಸಮಸ್ಯೆ, ಮೂಲ ಭೂತ ಸೌಕರ್ಯ, ಶಿಕ್ಷಣ, ಉದ್ಯೋಗ ಇತ್ಯಾದಿ ವಿಷಯಗಳನ್ನು ಚರ್ಚಿಸಿ ಪರಿಹಾರೋಪಾಯ ಮಾರ್ಗಗಳನ್ನು ಕಂಡುಕೊಳ್ಳಲು ಸಾಧ್ಯ ವಾಗುತ್ತದೆ. ವಿದ್ಯಾರ್ಥಿಗಳು ಸದಾ ದಿನಪತ್ರಿಕೆ ಹಾಗು ನಿಯತಕಾಲಿಕೆಗಳನ್ನು ಓದುವ ಜೊತೆಗೆ ಸಮಾಜದ ಆಗುಹೋಗುಗಳ ಕಡೆ ಗಮನ ನೀಡಬೇಕು ಎಂದು ವಿದ್ಯಾರ್ಥಿಗಳು ಸದನದಲ್ಲಿ ಅನೇಕ ಪ್ರಸ್ತುತ ವಿಚಾರಗಳ ಮಂಡನೆ ಮತ್ತು ಚರ್ಚೆಯನ್ನು ಆಲಿಸಿ ಅಪಾರ ಮೆಚ್ಚುಗೆಯನ್ನು ‌ವ್ಯಕ್ತಪಡಿಸಿದರು. ಬಳಿಕ ತನ್ನ ಮಾಧ್ಯಮ ವೃತ್ತಿಯ ದಶಕಗಳಿಗೂ ಅಧಿಕ ಸಮಯವನ್ನು ದೆಹಲಿಯಲ್ಲಿ ಕಳೆದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡುವಲ್ಲಿ ಕಾಲೇಜು ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಮಾದರಿ ಸಂಸತ್ತು ವಿದ್ಯಾರ್ಥಿಗಳಿಗೆ ಶಾಸಕಾಂಗ ವ್ಯವಸ್ಥೆಯ ಕಾರ್ಯಚಟುವಟಿಕೆಗಳ ಅರಿವನ್ನು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಹಾಗು ವಿದ್ಯಾರ್ಥಿಗಳು ಶಾಸಕಾಂಗ ವ್ಯವಸ್ಥೆಹೊಳ ಪ್ರವೇಶಿಸಲು ಅಡಿಪಾಯವನ್ನು ರೂಪಿಸುತ್ತದೆ. ಜವಾಬ್ದಾರಿಯುತ ನಾಯಕರಿಂದ ಉತ್ತಮ ಆಡಳಿತ ಈ ದೇಶದಲ್ಲಿ ನಿರಂತರವಾಗಿ ನಡೆದಾಗ ಮಾತ್ರ ಸುಭದ್ರ ಮತ್ತು ಸುಸ್ಥಿರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕಾರ್ಯಕ್ರಮ ಆಯೋಜಿಸಿದ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗಕ್ಕೆ ಅಭಿನಂದಿಸಿದರು.

ಮಾದರಿ ಸಂಸತ್ತು ಪ್ರಾಯೋಗಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಸ್ಪೀಕರ್, ಮಾರ್ಷಲ್ಸ್, ವಿರೋಧ ಪಕ್ಷದ ನಾಯಕ, ಸಚಿವರು, ಆಡಳಿತ ಪಕ್ಷದ ನಾಯಕ ಇತ್ಯಾದಿ ಪಾತ್ರಗಳನ್ನು ನಿರ್ವಹಿಸಿದರು. ಸದನದಲ್ಲಿ ವಿದ್ಯಾರ್ಥಿಗಳು ವಿಶೇಷ ಉಡುಗೆ ತೊಟ್ಟು ಕಲಾಪ ವೀಕ್ಷಿಸಲು ಬಂದಿದ್ದ ಅಂತಾರಾಷ್ಟ್ರೀಯ ಮೂರು ಜನ ಗಣ್ಯರು ಎಲ್ಲರ ಗಮನ ಸೆಳೆದರು. ಕಾಲೇಜಿನ ಸಭಾಂಗಣವನ್ನು ಸದನದ ಮಾದರಿಯಲ್ಲೇ ಆಸನಗಳ ವ್ಯವಸ್ಥೆ ಮಾಡಿ ಅಲಂಕರಿಸಲಾಗಿತ್ತು.

ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ನಂದ ಕುಮಾರಿ ಸೇರಿದಂತೆ ವಿಭಾಗದ ಮುಖ್ಯಸ್ಥ ನಟರಾಜ್, ಉಪನ್ಯಾಸಕರಾದ ಡಾ. ಶಿವಕುಮಾರ್ ಮತ್ತು ಭಾಗ್ಯಶ್ರೀ ಉಪಸ್ಥಿತರಿದ್ದರು. ಸದನ ವೀಕ್ಷಣೆಯಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಸಭಾ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ನಿಶ್ಮಿತಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಭವ್ಯ ವಂದಿಸಿ, ಕುಮಾರಿ ವೀಕ್ಷಾ ನಿರೂಪಿಸಿದರು. ಮಾದರಿ ಸಂಸತ್ತು ವಿಶೇಷ ಕಾರ್ಯಕ್ರಮವನ್ನು ವಿಭಾಗದ ಮುಖ್ಯಸ್ಥ ನಟರಾಜ್ ಸಂಯೋಜಿಸಿದರು.

‘ಕಾಲೇಜಿನಲ್ಲಿ ರಾಜ್ಯ ಶಾಸ್ತ್ರ ವಿಭಾಗದ ವತಿಯಿಂದ ಪ್ರತಿ ವರ್ಷವೂ ಮಾದರಿ ಸಂಸತ್ತಿನಂತಹ ವಿಶೇಷ ಪ್ರಾಯೋಗಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇತ್ತೀಚೆಗೆ ಶಿಶಿಲ ಗ್ರಾಮದಲ್ಲಿ ಗ್ರಾಮ ಸ್ವರಾಜ್ ಹಾಗು ಪಂಚಾಯತ್, ಆರಕ್ಷಕ ಠಾಣೆ, ನ್ಯಾಯಾಲಯ ಇತ್ಯಾದಿ ಸರ್ಕಾರಿ ಕಛೇರಿಗಳಿಗೆ ವಿದ್ಯಾರ್ಥಿ ಸಮೂಹದೊಂದಿಗೆ ಭೇಟಿ ಕೊಟ್ಟು ಪ್ರಾಯೋಗಿಕ ಅನುಭವವನ್ನು ನೀಡಲು ಅನುವು ಮಾಡಿಕೊಡಲಾಗಿದೆ. ಇಂತಹ ಕಾರ್ಯಕ್ರಮಗಳು ಶೈಕ್ಷಣಿಕ ಚಟುವಟಿಕೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನದ ಜೊತೆಗೆ ಪ್ರಸ್ತುತ ವಿದ್ಯಮಾನಗಳನ್ನು ಅರಿತುಕೊಳ್ಳಲು ಸಹಕಾರಿಯಾಗಲಿದೆ.’
– ನಟರಾಜ್, ಮುಖ್ಯಸ್ಥರು
ರಾಜ್ಯ ಶಾಸ್ತ್ರ ವಿಭಾಗ, ಎಸ್.ಡಿ.ಎಂ ಕಾಲೇಜು

ರಾಜ್ಯ, ದೇಶ ,ಅಂತಾರಾಷ್ಟ್ರೀಯ ವಿಷಯಗಳ ಚರ್ಚೆ :

ಮಾದರಿ ಸಂಸತ್ತಿನ ಕಲಾಪದಲ್ಲಿ ವಿದ್ಯಾರ್ಥಿಗಳು ರಾಜ್ಯ, ದೇಶ ,ಅಂತಾರಾಷ್ಟ್ರೀಯ ವಿಷಯಗಳನ್ನು ಪ್ರಸ್ತಾಪಿಸಿ,
ಮನರೇಗಾ ಹೆಸರು ಬದಲಾವಣೆ ವಿ ಬಿ ರಾಮ್ ಜೀ, ಉನ್ನತ ಶಿಕ್ಷಣದಲ್ಲಿ UGC ಯ ಜಾತಿ ತಾರತಮ್ಯದ ನಿರ್ಧಾರ, ಮಾನವ ಮತ್ತು ವನ್ಯ ಜೀವಿಗಳ ಸಂಘರ್ಷ , ಬಾಂಗ್ಲಾ ದೇಶದ ಅಕ್ರಮ ನುಸುಳುವಿಕೆ, ಕುಕಿ ಮತ್ತು ಮೈಥಿಲಿ ಬುಡಕ್ಕಟ್ಟು ಜನಾಂಗದ ಮೇಲಿನ ದೌರ್ಜನ್ಯ, ದೊಡ್ಡ ದೊಡ್ಡ ವ್ಯಕ್ತಿಗಳಿಗೆ ತೆರಿಗೆ ವಿನಾಯಿತಿ, ಸಿಲಿಗುರಿ ಕಾರಿಡೋರ್ ಮತ್ತು ಈಶಾನ್ಯ ರಾಜ್ಯಗಳ ರಕ್ಷಣೆ , ಸಬ್ ಕಾ ಭೀಮ್ ಸಬ್ ಕಾ ರಕ್ಷನ್ , ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನೆಡೆದ ಮಾನವ ಹಕ್ಕುಗಳ ದೌರ್ಜನ್ಯ ಇತ್ಯಾದಿ ವಿಷಯಗಳನ್ನು ಸದನದ ಮಾದರಿಯಲ್ಲೇ ವಿದ್ಯಾರ್ಥಿಗಳು ವಿಷಯನ್ನು ಸಂಪೂರ್ಣವಾಗಿ ಅರಿತುಕೊಂಡು ಚರ್ಚಿಸಿದರು.

Related posts

ಪಟ್ರಮೆಯ ದೀಪಕ್ ಎ.ಎಸ್ ರವರು ಸಲ್ಲಿಸಿದ ಆರ್ ಟಿಐ ಅರ್ಜಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಾಲಯಾದಿಂದ ಪ್ರತಿಕ್ರಿಯೆ

Suddi Udaya

ಜೂ.18: ಆರಂಬೋಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ವೈದ್ಯಕೀಯ ಶಿಬಿರ ಹಾಗೂ ಉಚಿತ ದಂತ ವೈದ್ಯಕೀಯ ಶಿಬಿರ

Suddi Udaya

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ

Suddi Udaya

ಲಾಯಿಲ: ಪಡ್ಲಾಡಿ ನಿವಾಸಿ ರೋಹಿತ್ ರಾಯನ್ ಡಿಸೋಜ ನಿಧನ

Suddi Udaya

ಕಾರಿನಲ್ಲಿ ಬಂದು ಭಾಸ್ಕರ ನಾಯ್ಕ ಹಾಗೂ ಅವರ ಪತ್ನಿಗೆ ಹಲ್ಲೆ ನಡೆಸಿದ ಆರೋಪ: ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯ ಮೇಲೆ ಪ್ರಕರಣ ದಾಖಲು

Suddi Udaya

ಪೌರ ಕಾರ್ಮಿಕರಿಗೆ ನ್ಯಾಯಯುತ ವೇತನ, ಪಿ.ಎಫ್., ಇಎಸ್ ಐ ,ಹೆಲ್ತ್ ಕಾರ್ಡ್ ಒದಗಿಸಬೇಕು :ಪೌರ ಕಾರ್ಮಿಕ ಮುಖಂಡ ಎಸ್ .ಪಿ. ಆನಂದ್ ಒತ್ತಾಯ

Suddi Udaya
error: Content is protected !!