ಪುತ್ತೂರು: ಬೆಳ್ತಂಗಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಪುರಸ್ಕೃತಗೊಂಡಿರುವ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ೨೭ನೇ ಆಲಂಕಾರು ಶಾಖೆ ಮಾ.8ರಂದು ಕಡಬ ತಾಲೂಕಿನ ಆಲಂಕಾರು ಜಿ.ಎಲ್.ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಂಡಿತು.
ಆಲಂಕಾರಿನಲ್ಲಿ ಉತ್ತಮ ಕೃಷಿಕ ಗ್ರಾಹಕರಿದ್ದಾರೆ: ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ ಮಾತನಾಡಿ, ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು ಅತೀ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಈ ವಿವಿಧೋದ್ದೇಶ ಸಹಕಾರ ಸಂಘವು ೨೭ ಶಾಖೆಗಳನ್ನು ಪ್ರಾರಂಭಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ. ದ.ಕ.ಹಾಗೂ ಉಡುಪಿ ಜಿಲ್ಲೆಗೆ ವ್ಯಾಪಿಸಿರುವ ಈ ಸಂಘವು ಗ್ರಾಹಕ ಸ್ನೇಹಿಯಾಗಿದೆ. ಆಲಂಕಾರಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಜೊತೆಗೆ ಸಾಕಷ್ಟು ಸಹಕಾರ ಸಂಘಗಳಿವೆ. ಇಲ್ಲಿ ಉತ್ತಮ ಕೃಷಿಕ ಗ್ರಾಹಕರಿದ್ದು ಉತ್ತಮ ವ್ಯವಹಾರಗಳು ನಡೆಯುತ್ತಿದೆ ಎಂದು ಹೇಳಿದರು.

ಸಂಘ ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಲಿ:ಕಚೇರಿ ಉದ್ಘಾಟಿಸಿದ ಆಲಂಕಾರು ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷೆ ಸುಶೀಲ ಅವರು ಮಾತನಾಡಿ, ಪಂಚಾಯತ್‌ನಲ್ಲಿ ನನ್ನ ಎರಡೂವರೇ ವರ್ಷಗಳ ಅವಧಿಯಲ್ಲಿ ಆಲಂಕಾರಿನಲ್ಲಿ ಕುಲಾಲ ಸಹಕಾರ ಸಂಘ, ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಶಾಖೆ ಪ್ರಾರಂಭಗೊಂಡಿದೆ. ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಸದಸ್ಯರು ಉತ್ತಮ ರೀತಿಯಲ್ಲಿ ಸಹಕರಿಸಿದಾಗ ಸಂಘವು ಉತ್ತಮವಾಗಿ ಬೆಳೆಯಲು ಸಾಧ್ಯ ಎನ್ನುವುದಕ್ಕೆ ಶ್ರೀ ಗುರುದೇವ ಸಹಕಾರ ಸಂಘವೇ ಉದಾಹರಣೆಯಾಗಿದೆ. ಸಂಘವು ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಹಾರೈಸಿದರು.
ಸಂಘದ ಬೆಳವಣಿಗೆಯಲ್ಲಿ ಸಿಬ್ಬಂದಿಗಳ ಶ್ರಮವಿದೆ: ಗಣಕ ಯಂತ್ರ ಉದ್ಘಾಟಿಸಿದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ ಮಾತನಾಡಿ, ಆಲಂಕಾರಿನಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಶಾಖೆ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ಗ್ರಾಹಕರು ಪ್ರಾಮಾಣಿಕರಾಗಿದ್ದು ನಮ್ಮ ಸಂಘವು ಶೇ.೧೦೦ ಸಾಲ ವಸೂಲಾತಿ ಸಾಧನೆ ಮಾಡಿದೆ. ನಮ್ಮ ಸಂಘದ ಬೆಳವಣಿಗೆಯಲ್ಲಿ ಸಿಬ್ಬಂದಿಗಳ ಅವಿರತ ಶ್ರಮವಿದೆ. ಸಮಾಜದಲ್ಲಿರುವ ಪ್ರಸ್ತುತ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಎಲ್ಲಾ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಽಕಾರಿಗಳ ಸಮ್ಮೇಳನ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ನ್ಯಾಯೋಚಿತ ವ್ಯವಹಾರವಿದ್ದಾಗ ಗ್ರಾಹಕರೂ ಬರುತ್ತಾರೆ:ನಿರಖು ಠೇವಣಿ ಸರ್ಟಿಫಿಕೇಟ್ ವಿತರಿಸಿದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ ಮಾತನಾಡಿ, ಸಹಕಾರ ಸಂಘಗಳಲ್ಲಿ ಜನರು ನ್ಯಾಯೋಚಿತ ವ್ಯವಹಾರಗಳನ್ನು ಬಯಸುತ್ತಾರೆ. ಸಹಕಾರ ಸಂಘಗಳಲ್ಲಿ ಉತ್ತಮ ಹಾಗೂ ನ್ಯಾಯೋಚಿತ ವ್ಯವಹಾರ ಅಗತ್ಯ. ಆಗ ಹೆಚ್ಚು ಗ್ರಾಹಕರೂ ಬರುತ್ತಾರೆ. ಸಹಕಾರಿ ಸಂಘವು ಆಲಂಕಾರಿನ ಜನತೆಯ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದರು.

ನಂಬರ್ ವನ್ ಶಾಖೆಯಾಗಲಿ:ಉಳಿತಾಯ ಖಾತೆ ಪುಸ್ತಕ ವಿತರಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಆಲಂಕಾರು ವಲಯ ಸಂಚಾಲಕ ದಿನೇಶ್ ಕೇಪುಳು ಮಾತನಾಡಿ, ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಶಾಖೆಯು ಈಗಾಗಲೇ ಕಡಬದಲ್ಲಿ ವ್ಯವಹರಿಸುತ್ತಿದೆ. ಇದೀಗ ಸಂಘದ ೨೭ನೇ ಶಾಖೆ ಆಲಂಕಾರಿನಲ್ಲಿ ಪ್ರಾರಂಭಗೊಂಡಿದ್ದು ಈ ಶಾಖೆಯು ಉತ್ತಮ ವ್ಯವಹಾರದ ಮೂಲಕ ನಂಬರ್ ವನ್ ಶಾಖೆಯಾಗಿ ಮೂಡಿಬರಲಿ ಎಂದು ಹೇಳಿದರು.
ಉತ್ತಮ ಸಿಬ್ಬಂದಿ ವರ್ಗವಿದೆ:ಮುಖ್ಯ ಅತಿಥಿಯಾಗಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್‌ಕುಮಾರ್ ಪಾಲೇರಿ ಮಾತನಾಡಿ, ನಾನು ಒಬ್ಬ ಈ ಸಹಕಾರ ಸಂಘದ ಗ್ರಾಹಕ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ನೀಡದ ಸಾಲವನ್ನು ನನಗೆ ಕೇವಲ ಎರಡು ದಿನದಲ್ಲಿ ಈ ಸಹಕಾರ ಸಂಘವು ಮಂಜೂರುಗೊಳಿಸುವ ಮೂಲಕ ನನ್ನ ಅವಶ್ಯಕತೆ ಪೂರೈಸಲು ಸಹಕಾರಿಯಾಗಿದೆ. ಇಲ್ಲಿ ಇರುವಷ್ಟು ಉತ್ತಮ ಸಿಬ್ಬಂದಿಗಳನ್ನು ಬೇರೆ ಯಾವ ಸಂಘದಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದರು.
ಸಂಘದಿಂದ ಶಿಕ್ಷಣಕ್ಕೆ ನೆರವು:ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಭಗೀರಥ ಜಿ.ಮಾತನಾಡಿ, ಸಂಘವು ವ್ಯವಹಾರಕ್ಕೆ ಸೀಮಿತವಾಗಿರದೆ ಸಾಮಾಜಿಕ ಬದ್ದತೆ ಹೊಂದಿದೆ. ಬಡವರ ಮಕ್ಕಳಿಗೆ ಶೈಕ್ಷಣಿಕ ಸಹಕಾರ ನೀಡಲು ೨೦೦೫ರಲ್ಲಿ ಗುರುದೇವ ಎಜ್ಯುಕೇಶನ್ ಟ್ರಸ್ಟ್ ಸ್ಥಾಪಿಸಿ ಬೆಳ್ತಂಗಡಿಯಲ್ಲಿ ಪಿಯು ಕಾಲೇಜು ಆರಂಭಿಸಲಾಗಿದೆ. ಬಡ ಮಕ್ಕಳಿಗೆ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣಕ್ಕೆ ಟ್ರಸ್ಟ್‌ನಿಂದ ನೆರವು ನೀಡಲಾಗುತ್ತಿದೆ. ೨೦೦೮ರಲ್ಲಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು ಪ್ರಾರಂಭಗೊಂಡು ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿದ್ದು ೨೭ ಶಾಖೆ ತೆರೆದಿದೆ. ಪ್ರತಿ ವರ್ಷ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಶುಲ್ಕ ಪಾವತಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷ ರೂ.೭೫ ಸಾವಿರ ಧನ ಸಹಾಯ ನೀಡಲಾಗುತ್ತಿದೆ. ಶ್ರೀ ಗುರು ಮರಣ ದತ್ತಿನಿಽಯ ಮೂಲಕ ಮರಣ ಹೊಂದಿದ ಸಾಲಗಾರ ಸದಸ್ಯರ ರೂ.೫ಲಕ್ಷ ಸಾಲ ಮನ್ನಾ ಮಾಡಲಾಗುತ್ತಿದ್ದು ಈ ತನಕ ೧೨೦ ಮಂದಿ ಸಾಲಗಾರರ ರೂ.೧.೫ಕೋಟಿ ಸಾಲ ಮನ್ನಾ ಮಾಡಲಾಗಿದೆ. ಇದನ್ನು ಸದಸ್ಯರ ಬೇಡಿಕೆಯಂತೆ ರೂ.೧೦ ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದರು.
ಆಲಂಕಾರು ಕೋಟಿ ಚೆನ್ನಯ ಮಿತ್ರ ವೃಂದದ ಅಧ್ಯಕ್ಷ ರಮೇಶ್ ಕೇಪುಳು, ಕಟ್ಟಡ ಮಾಲಕ ಗೋಪಣ್ಣ ಗೌಡ, ಆಲಂಕಾರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಟ್ಟೆಮಜಲು, ಯುವವಾಹಿನಿ ಕಡಬ ಘಟಕದ ಸವಿತಾ, ಆಲಂಕಾರು ವರ್ತಕ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ: ಆಲಂಕಾರಿನಲ್ಲಿ ಸಂಘದ ಶಾಖೆ ಆರಂಭಿಸುವ ನಿಟ್ಟಿನಲ್ಲಿ ಮನೆ ಭೇಟಿಗೆ ಸಹಕರಿಸಿದ ಉದಯ ಸಾಲ್ಯಾನ್ ಮಾಯಿಲ್ಗ, ರವಿಚಂದ್ರ ಮಾಯಿಲ್ಗ, ಶ್ರೇಯಸ್ ಎಚ್.ಕೆ ಬಾರಡ್ಕ, ರವಿ ಗುಲ್ಗೋಡಿ, ಹರ್ಷಿತ್ ಮಾಯಿಲ್ಗ, ಚಂದ್ರಶೇಖರ ಪಟ್ಟೆಮಜಲು, ದಿನೇಶ್ ಕೇಪುಳು, ನವೀನ್ ಚಂದಳಿಕೆ, ವಿಶೇಷ ಆಹ್ವಾನಿತರಾಗಿ ಆಗಮಿಸಿದ ಉದಯಕುಮಾರ್, ಸಂಜೀವ ಪೂಜಾರಿ ಮಾರಂಗ, ತಿಮ್ಮಪ್ಪ ಪೂಜಾರಿ ಕಿನ್ನಿಗೋಳಿ, ಮಹೇಶ್ ಪಾಟಾಳಿ, ಮಲ್ಲಿಕಾ ಜಯಕರ, ನವೀನ್ ಕುಮಾರ್ ಪಟ್ಲ, ಮಾಧವ ಕಯ್ಯಪೆ, ರಮೇಶ್ ಕೇಪುಳು ಅವರನ್ನು ಗೌರವಿಸಲಾಯಿತು
ಉಳಿತಾಯ ಖಾತೆ ಪುಸ್ತಕ, ನಿರಖು ಠೇವಣಿ ಸರ್ಟಿಫಿಕೇಟ್ ವಿತರಣೆ: ಉದ್ಘಾಟನಾ ಕಾರ್ಯಕ್ರಮದಲ್ಲಿ ಜಾನಕಿ ಮಾಯಿಲ್ಗ, ವಿಜಯ ಕುಮಾರ್ ಕೆದಿಲ ಪೆರಾಬೆ ಅವರಿಗೆ ಉಳಿತಾಯ ಖಾತೆ ಪುಸ್ತಕ, ಅಶೋಕ ಕುಮಾರ್ ಕೊಯಿಲ, ತಿಮ್ಮಪ್ಪ ಪೂಜಾರಿ ಕಿನ್ನಿಗೊಳಿ ಅವರಿಗೆ ನಿರಖು ಠೇವಣಿ ಸರ್ಟಿಫಿಕೇಟ್ ವಿತರಿಸಲಾಯಿತು.
ವಿಶೇಷಾಧಿಕಾರಿ ಮೋನಪ್ಪ ಪೂಜಾರಿ ಕಂಡೆತ್ಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ ಸ್ವಾಗತಿಸಿದರು. ನಿರ್ದೇಶಕ ಜಯವಿಕ್ರಮ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರೇಕ್ಷಾ ಕಿನ್ನಿಗೋಳಿ ಪ್ರಾರ್ಥಿಸಿದರು. ಹಿರಿಯ ಸದಸ್ಯ ತಿಮ್ಮಪ್ಪ ಪೂಜಾರಿ ಕಿನ್ನಿಗೋಳಿ, ಕಡಬ ಶಾಖಾ ವ್ಯವಸ್ಥಾಪಕಿ ಮಾನಸ, ಲೆಕ್ಕಿಗ ಕೀರ್ತನ್ ಕುಮಾರ್, ಸಿಬ್ಬಂದಿ ದೀಕ್ಷಾ, ಆಲಂಕಾರು ಶಾಖಾ ವ್ಯವಸ್ಥಾಪಕ ಶೈಲೇಶ್ ಕುಮಾರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ಸಂಘದ ನಿರ್ದೇಶಕರಾದ ಸುಜಿತಾ ವಿ ಬಂಗೇರ, ಕೆ.ಪಿ ದಿವಾಕರ, ಧರ್ಣಪ್ಪ ಪೂಜಾರಿ, ಡಾ.ರಾಜಾರಾಮ ಕೆ.ಬಿ., ತನುಜಾ ಶೇಖರ್, ಗಂಗಾಧರ ಮಿತ್ತಮಾರು, ಸಂಜೀವ ಪೂಜಾರಿ, ಚಂದ್ರಶೇಖರ, ಧರಣೇಂದ್ರ ಕುಮಾರ್, ಆನಂದ ಪೂಜಾರಿ ಸರ್ವೆದೋಳ, ಜಯವಿಕ್ರಮ ಕಲ್ಲಾಪು, ರಕ್ಷಿತ್ ಶಿವರಾಂ, ಚಿದಾನಂದ ಪೂಜಾರಿ ಎಲ್ದಕ್ಕ, ಸೂರಜ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಲಂಕಾರು ಭಾಗದ ಸದಸ್ಯರ ಬೇಡಿಕೆಯಂತೆ ಸಂಘದ ೨೭ನೇ ಶಾಖೆ ಪ್ರಾರಂಭಿಸಲಾಗಿದೆ. ಶಾಖೆಯು ಪ್ರಾರಂಭದಲ್ಲಿಯೇ ರೂ.1.60ಕೋಟಿ ಠೇವಣಿ ಸಂಗ್ರಹಿಸಿದೆ. ಸಂಘದ ಮುಖಾಂತರ ಬಡವರಿಗೆ ಮನೆ ನಿರ್ಮಾಣ ಮಾಡಿ ಕೊಡುವ ಯೋಜನೆ ಇದೆ. ಈ ಪರಿಸರದಲ್ಲಿ ಮನೆ ಅಗತ್ಯವಿರುವ ತೀರಾ ಬಡವರ ಬಗ್ಗೆ ಮಾಹಿತಿ ನೀಡಿದರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಕಳೆದ ೧೭ ವರ್ಷದಿಂದ ನಿರ್ದೇಶಕರು ಯಾವುದೇ ಭತ್ಯೆ ಪಡೆಯದೇ ಸಂಘದ ಬೆಳವಣಿಗೆಯಲ್ಲಿ ಸಹಕಾರ ನೀಡುತ್ತಿದ್ದಾರೆ. ಭತ್ಯೆಯ ಮೊತ್ತಕ್ಕೆ ಪ್ರತ್ಯೇಕ ಖಾತೆ ಪ್ರಾರಂಭಿಸಲಾಗಿದೆ. ಇದರಲ್ಲಿ ಸಂಗ್ರಹವಾದ ಮೊತ್ತವನ್ನು ಬಡ ವಿದ್ಯಾರ್ಥಿಗಳ ಶೈಕ್ಷಣಿಕ, ಆರೋಗ್ಯಕ್ಕಾಗಿ ಬಳಕೆ ಮಾಡಲಾಗುವ ಯೋಜನೆಯಿದೆ.-ಭಗೀರಥ ಜಿ.ಅಧ್ಯಕ್ಷರು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ
ಉಡುಪಿ ಹಾಗೂ ದ.ಕ.ಜಿಲ್ಲೆಯ ವ್ಯಾಪ್ತಿ ಹೊಂದಿರುವ ಸಂಘ ೫೨ ಸಾವಿರ ಸದಸ್ಯರನ್ನು ಹೊಂದಿದೆ. ರೂ.96ಲಕ್ಷ ಬಂಡವಾಳದಿಂದ ಪ್ರಾರಂಭಗೊಂಡ ಸಂಘವು ಪ್ರಸ್ತುತ ರೂ.೩೦೫ ಕೋಟಿ ಠೇವಣಿ ಹೊಂದಿದೆ. ರೂ.269 ಕೋಟಿ ಸಾಲ ವಿತರಿಸಿದೆ. ಕೃಷಿ ಸಾಲ ಹೊರತುಪಡಿಸಿ ಇತರ ಎಲ್ಲಾ ರೀತಿಯ ಸಾಲ ನೀಡುತ್ತಿದೆ. ಒಬ್ಬ ಗ್ರಾಹಕನಿಗೆ ಗರಿಷ್ಠ ರೂ.5 ಕೋಟಿ ಸಾಲ ನೀಡಲಾಗುತ್ತಿದೆ. ವ್ಯವಹಾರಕ್ಕಾಗಿ ಸ್ವಂತ ಐಎ-ಎಸ್ ಕೋಡ್ ಪಡೆದುಕೊಂಡಿದೆ. ಕನಿಷ್ಠ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುತ್ತಿದೆ. ಆಲಂಕಾರು ಭಾಗದ ಗ್ರಾಹಕರ ಬೇಡಿಕೆಯಂತೆ ಸಂಘದ 27ನೇ ಶಾಖೆ ಪ್ರಾರಂಭಿಸಲಾಗಿದೆ. ಇನ್ನೂ ಐದು ಶಾಖೆ ತೆರೆಯಲು ಸರಕಾರದಿಂದ ಅನುಮತಿ ದೊರೆತಿದ್ದು ಗುರುಪುರ, ಕೈಕಂಬ, ಕುತ್ತಾರಪದವು, ಕಕ್ಕೆಪದವು, ಬೆಳ್ಳಾರೆಗಳಲ್ಲಿ ಶಾಖೆ ತೆರೆಯಲಾಗುವುದು.
-ಮೋನಪ್ಪ ಪೂಜಾರಿ ಕಂಡೆತ್ಯಾರು, ಸಂಘದ ವಿಶೇಷಾಧಿಕಾರಿ












