25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಹುಮುಖ ಪ್ರತಿಭೆ ವಿದುಷಿ ಸಹನಾ ಎಂ. ಶೆಟ್ಟಿ ಭರತನಾಟ್ಯ ರಂಗಪ್ರವೇಶ

ಬಂಟ್ವಾಳ : ತುಂಬೆಯ ಬಂಟರ ಭವನದಲ್ಲಿ ಆಯೋಜಿಸಿದ್ದ ಬಂಟ್ವಾಳದ ನರ್ವಲ್ದಡ್ಡ ನಿವಾಸಿ ಮೋಹನ್ ಶೆಟ್ಟಿ ನರ್ವಲ್ದಡ್ಡ ಮತ್ತು ಹರಿಣಾಕ್ಷಿ ಎಂ ಶೆಟ್ಟಿ ದಂಪತಿಗಳ ಪುತ್ರಿ ವಿದುಷಿ ಸಹನಾ ಎಂ. ಶೆಟ್ಟಿ ನರ್ವಲ್ದಡ್ಡ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಅಭೂತಪೂರ್ವವಾಗಿ ನಡೆಯಿತು.

ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆ ಕುಮಾರಿ ಸಹನಾ ಎಂ. ಶೆಟ್ಟಿ ಸುಮಾರು 3 ಗಂಟೆಗಳ ನಿರಂತರ ನೃತ್ಯ ಸೇವೆಯನ್ನು ಪ್ರದರ್ಶಸುವ ಮೂಲಕ ಭರತನಾಟ್ಯ ರಂಗಪ್ರವೇಶ ಪಡೆದರು. ಈ ಸಂದರ್ಭದಲ್ಲಿ ಭರತನಾಟ್ಯದ ಸಂಕೀರ್ಣ ಭಾಗಗಳಾದ ವರ್ಣಂ, ಪದಂ ಮತ್ತು ತಿಲ್ಲಾನಗಳನ್ನು ಅತ್ಯಂತ ಸುಲಲಿತವಾಗಿ ಹಾಗೂ ಲಯಬದ್ಧವಾಗಿ ಪ್ರದರ್ಶಿಸಿದರು. ಸಹನಾಳ ಮನೋಜ್ಞ ಹಾವಭಾವ ಮತ್ತು ಪಾದಚಲನೆಯನ್ನು ಕಂಡು ಕಲಾ ವಿಮರ್ಶಕರು ಮುಕ್ತ ಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮವನ್ನು ಪುತ್ತೂರಿನ ‘ವಿಶ್ವಕಲಾನಿಕೇತನ’ ಇದರ ನಿರ್ದೇಶಕರು ಹಾಗೂ ಕರ್ನಾಟಕ ಕಲಾಶ್ರೀ ಪ್ರಶಸ್ತಿ ವಿಜೇತರಾಗಿರುವ ವಿದುಷಿ ನಯನ ವಿ. ರೈ ನಟರಾಜ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ದೀಪ ಪ್ರಜ್ವಲಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅಭ್ಯಾಗತರಾಗಿದ್ದ ಉಡುಪಿ ಶ್ರೀ ಸೋದೆ ವಾದಿರಾಜ ಮಠದ ಶ್ರೀ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಮಾತನಾಡಿ, ಕಲೆ ಎಂಬುದು ದೈವದತ್ತವಾದ ಕೊಡುಗೆ. ಭರತನಾಟ್ಯದಂತ ಭಾರತೀಯ ಕಲೆ ಈ ನೆಲದ ಸಾಂಸ್ಕೃತಿಕ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಇಂತಹ ಶಾಸ್ತ್ರೀಯ ಕಲೆಗಳು ಮನುಷ್ಯನ ಮನಸ್ಸನ್ನು ಕೇಂದ್ರೀಕರಿಸುವ ಜೊತೆಗೆ ಆಧ್ಯಾತ್ಮಿಕ ಉನ್ನತಿಯತ್ತ ಕೊಂಡೊಯ್ಯುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ನಡುವೆಯೂ ಯುವ ಪೀಳಿಗೆ ಭಾರತೀಯ ಪರಂಪರೆಯನ್ನು ಬೆಳೆಸಿ ಪ್ರೇರೆಪಿಸಿತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಕುಮಾರಿ ಸಹನಾಳು ಬಹುಮುಖ ಪ್ರತಿಭೆಯಾಗಿದ್ದು, ಆಕೆಯ ನೃತ್ಯದಲ್ಲಿನ ಏಕಾಗ್ರತೆ ಮತ್ತು ಸಮರ್ಪಣಾ ಭಾವ ಕಲಾ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಸಲಿದೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯಕ್ಷದ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷ ಪಟ್ಲಗುತ್ತು ಶ್ರೀ ಸತೀಶ್ ಶೆಟ್ಟಿ ಮಾತನಾಡಿ, ಕಲೆಗೆ ಯಾವುದೇ ಜಾತಿ, ಮತದ ಹಂಗಿಲ್ಲ. ಕಲೆ ಮತ್ತು ಸಂಸ್ಕೃತಿ ನಮ್ಮ ಬದುಕಿನ ಅವಿಭಾಜ್ಯ ಅಂಗ. ಇದಕ್ಕೆ ಸರ್ವರನ್ನೂ ಒಗ್ಗೂಡಿಸುವ ಶಕ್ತಿ ಹೊಂದಿದೆ. ಸಹನಾಳ ಪ್ರತಿಭೆ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿ ಗ್ರಾಮದವರು ಮತ್ತು ಕುಟುಂಬಸ್ಥರಿಗೆ ಹೆಮ್ಮೆ ತರಿಸಿದೆ. ರಂಗಪ್ರವೇಶವು ಕಲಾವಿದೆಯ ಆರಂಭದ ಹೆಜ್ಜೆಯ ಮೈಲಿಗಲ್ಲು. ಇದು ನಿರಂತರ ಕಲಾ ಸಾಧನೆಯ ಹಾದಿಯಲ್ಲಿ ಸಾಗುವಂತೆ ಪ್ರೇರೆಪಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವುದರ ಜೊತೆಗೆ ಭಾರತೀಯ ಕಲೆ ಮತ್ತು ಆಚರಣೆಯನ್ನು ಅನುಸರಿಸುವಂತೆ ಪ್ರೋತ್ಸಾಹ ನೀಡಿದಾಗ ಮಾದರಿಯ ಸಮಾಜ ನಿರ್ಮಾಣವಾಗುತ್ತದೆ ಎಂದು ಕಲಾ ಪ್ರೇಮವನ್ನು ಮೆಚ್ಚಿಕೊಂಡರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಚೌಟ ಮಾತನಾಡಿ, ತುಳುನಾಡಿನ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವುದು ಸಂತಸದ ಸಂಗತಿ. ಬಂಟ್ವಾಳ ತಾಲೂಕು ಸಾಂಸ್ಕೃತಿಕವಾಗಿ ಶ್ರೀಮಂತವಾಗುತ್ತಿದೆ. ಈ ದಿನ ನಡೆದ ವಿದುಷಿ ಸಹನಾ ಎಂ. ಶೆಟ್ಟಿಯವರ ರಂಗಪ್ರವೇಶವು ನಮ್ಮ ಭಾಗದ ಕಲಾ ಇತಿಹಾಸ ಮತ್ತು ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ತಂದಿದೆ. ಯುವ ಕಲಾವಿದರಿಗೆ ತಾಲೂಕಿನ ಸಂಘದ ಪ್ರೋತ್ಸಾಹ ಮತ್ತು ಸಹಕಾರ ಸದಾ ಇರುತ್ತದೆ ಎಂದು ಸರ್ವರ ಸಮ್ಮುಖದಲ್ಲಿ ಭರವಸೆ ನೀಡಿದರು.

ಕಲಾ ಪ್ರದರ್ಶನದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಮಾರಿ ಸಹನಾ ತನ್ನ ಗುರುಗಳಾದ ಮಡಂತ್ಯಾರಿನ ದೇವಿ ಕಿರಣ್ ಕಲಾನಿಕೇತನ್ ಇದರ ನಿರ್ದೇಶಕಿಯಾದ ವಿದುಷಿ ಸ್ವಾತಿ ಜಯರಾಮ್ ಮತ್ತು ವಿದುಷಿ ಪೃಥ್ವಿ ಸತೀಶ್ ರವರಿಗೆ ಭಕ್ತಿಪೂರ್ವಕವಾಗಿ ‘ಗುರುವಂದನೆ’ ಸಲ್ಲಿಸಿದರು.

ಕಾರ್ಯಕ್ರಮದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪುತ್ತೂರಿನ ವಿದ್ಯಾ ವರ್ಧಕ ಸಂಸ್ಥೆಯ ಸಂಚಾಲಕ ರಾಗಿರುವ ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ
ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದ ಸಂಯೋಜಕರಾದ ಮೋಹನ್ ಶೆಟ್ಟಿ, ಹರಿಣಾಕ್ಷಿ ಮತ್ತು ಮೋಕ್ಷಿತ್ ಎಂ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಂದ್ರಹಾಸ ಡಿ. ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಡಾ. ಮಂಜುಳಾ ಶೆಟ್ಟಿ ನಿರೂಪಿಸಿ, ಪುನೀತ್ ಶೆಟ್ಟಿ ವಂದಿಸಿದರು.

“ಆಧುನಿಕ ಬದಲಾವಣೆ ಮತ್ತು ಯಾಂತ್ರಿಕತೆಯ ಪ್ರಭಾವದಿಂದ ಯುವ ಸಮುದಾಯ ಮೊಬೈಲ್ ಮತ್ತು ಪಾಶ್ಚಾತ್ಯ ಸಂಸ್ಕೃತಿಯೆಡೆಗೆ ಮಾರುಹೋಗುತ್ತಿ ರುವ ಸಂದರ್ಭದಲ್ಲಿ ನರ್ವಲ್ದಡ್ಡದಂತಹ ಗ್ರಾಮೀಣ ಭಾಗದ ಕುವರಿ ಸಹನಾ ಶೆಟ್ಟಿಯವರು ಕಠಿಣ ಅಭ್ಯಾಸ ಮಾಡಿ ರಂಗಪ್ರವೇಶ ಮಾಡುತ್ತಿರುವುದು ಕಲಾಮಾತೆಗೆ ಸಲ್ಲಿಸುವ ದೊಡ್ಡ ಕಾಣಿಕೆ. ಶಾಸ್ತ್ರೀಯ ನೃತ್ಯವು ಬದುಕಿನ ಶಿಸ್ತು ಮತ್ತು ಏಕಾಗ್ರತೆಯನ್ನು ಕಲಿಸುತ್ತದೆ. ಈ ಕಲಾವಿದೆ ರಾಷ್ಟ್ರಮಟ್ಟದಲ್ಲಿ ಬೆಳಗಲಿ” – ವಿಶ್ವವಲ್ಲಭತೀರ್ಥ ಸ್ವಾಮೀಜಿ ಸೋದೆ ವಾದಿರಾಜ ಮಠ, ಉಡುಪಿ

“ಕಲೆಯೆಂಬ ಸಾಗರದಲ್ಲಿ ನಾನು ಕೇವಲ ಒಂದು ಬಿಂದು. ಗುರುಗಳ ಮಾರ್ಗದರ್ಶನ ಮತ್ತು ಪೋಷಕರ ಪ್ರೋತ್ಸಾಹ ರಿಂದ ಈ ವೇದಿಕೆಯಲ್ಲಿ ಕಲಾ ಸೇವೆಯನ್ನು ನಡೆಸಿಕೊಡಲು ಸಾಧ್ಯವಾಯಿತು. ಈ ನನ್ನ ಕಲಾ ಹೆಜ್ಜೆಯ ಬೆಳವಣಿಗೆಗೆ ತಾಲೂಕಿನ ಹಲವು ಸಂಘ ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವಕಾಶ ನೀಡಿ ಪ್ರೋತ್ಸಾಹಿಸಿದೆ. ಈ ನನ್ನ ಕಲಾ ಪಯಣವನ್ನು ಮುಂದುವರಿಯಲು ಮತ್ತಷ್ಟು ಸಹಕಾರಬೇಕು.
ನನ್ನ ನೃತ್ಯಕ್ಕೆ ಲಯ ನೀಡಿದ ಹಿಮ್ಮೇಳ ಕಲಾವಿದರಿಗೂ, ತಾಂತ್ರಿಕ ತಂಡಕ್ಕೂ ಹಾಗೂ ಸದಾ ಪ್ರೋತ್ಸಾಹಿಸುವ ಸ್ನೇಹಿತರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.” – ವಿದೂಷಿ ಸಹನಾ ಎಂ. ಶೆಟ್ಟಿ

ಬಹುಮುಖ ಪ್ರತಿಭೆ ವಿದುಷಿ ಸಹನಾ ಎಂ. ಶೆಟ್ಟಿ: ಸಹನಾ ಅವರು ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಎಂಬಿಎ (MBA) ಪದವಿಧರೆ. ಭರತನಾಟ್ಯದಲ್ಲಿ ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ ಹಾಗೂ ವಿದ್ವತ್ ಅಂತಿಮ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ‘ವಿದುಷಿ’ ಪದವಿ ಪಡೆದಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವು ಬಾರಿ ವಿಜೇತರಾಗಿದ್ದು, ರಾಜ್ಯದ ವಿವಿಧೆಡೆ 200ಕ್ಕೂ ಹೆಚ್ಚು ನೃತ್ಯ ಪ್ರದರ್ಶನ ನೀಡಿದ್ದಾರೆ.

ಕರಾಟೆಯಲ್ಲಿ ಅಂತರಾಷ್ಟ್ರೀಯ ಸಾಧನೆ: 5ನೇ ವಯಸ್ಸಿನಲ್ಲೇ ಕರಾಟೆ ತರಬೇತಿ ಆರಂಭಿಸಿದ ಇವರು ಕರಾಟೆಯಲ್ಲಿ ‘ಬ್ಲಾಕ್ ಸೆಕೆಂಡ್ ಡ್ಯಾನ್ ಬೆಲ್ಟ್’ ಹೊಂದಿದ್ದಾರೆ. ನೇಪಾಳ ಮತ್ತು ಪುಣೆಯಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದ ಸಾಧಕಿ. ಪಂಜಾಬ್, ಹರಿಯಾಣ, ಮುಂಬೈ ಸೇರಿದಂತೆ ದೇಶದ ವಿವಿಧೆಡೆ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 260ಕ್ಕೂ ಹೆಚ್ಚು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸತತ 7 ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸಿರುವ ಇವರು, ಪ್ರಸ್ತುತ ರೆಫರಿಯಾಗಿ ಹಾಗೂ ತರಬೇತುದಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆ: ಕುಣಿತ ಭಜನೆ: ಸಿರಿಗುಂದದಪಾಡಿಯ ಶ್ರೀ ಬ್ರಹ್ಮಲಿಂಗೇಶ್ವರ ಕುಣಿತ ಭಜನಾ ಮಂಡಳಿಯ ಮೂಲಕ 30ಕ್ಕೂ ಹೆಚ್ಚು ಮಕ್ಕಳ ತಂಡವನ್ನು ಕಟ್ಟಿ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯಕ್ಷಗಾನ, ಜಾನಪದ ಮತ್ತು ವೆಸ್ಟರ್ನ್ ನೃತ್ಯಗಳಲ್ಲೂ ಆಸಕ್ತಿ ಹೊಂದಿರುವ ಇವರು, ವಿಶ್ವ ಬಂಟರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ‘ಕಾಳಿ’ ಪಾತ್ರದ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಈಗಾಗಲೇ ಅನೇಕ ಗೌರವಗಳು ಸಂದಿವೆ: ಭಾರತ ಕಲಾರತ್ನ ಪ್ರಶಸ್ತಿ, ಗ್ಲೋಬಲ್ ಆರ್ಯಭಟ ಇಂಟರ್ ನ್ಯಾಷನಲ್ ಪ್ರಶಸ್ತಿ, ಶ್ರೇಷ್ಠ ಕಲಾ ವಿಭೂಷಣ ಪ್ರಶಸ್ತಿ, ತೌಳವ ಕುಮಾರಿ ಪ್ರಶಸ್ತಿ ಲಭಿಸಿದೆ.

Related posts

ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಾತ್ರಿ ನಿವಾಸ ಶಿಲಾನ್ಯಾಸ: ವಿ.ಪ. ಸದಸ್ಯ ಬಿ.ಕೆ. ಹರಿಪ್ರಸಾದ್ ರಿಗೆ ಆಹ್ವಾನ

Suddi Udaya

ಮಾಲಾಡಿ ಗ್ರಾ.ಪಂ. ಮತ್ತು ಗ್ರಾ.ಪಂ. ಗ್ರಂಥಾಲಯದ ಆಶ್ರಯದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ವೃತ್ತಿಪರ ತರಬೇತಿ ಕಾರ್ಯಾಗಾರ

Suddi Udaya

ಸಾರಿಗೆ ನಿಯಮಗಳ ಉಲ್ಲಂಘನೆಯ ಪ್ರಕರಣಗಳು : ಡಿ.12 ರ ಒಳಗೆ ದಂಡ ಕಟ್ಟಿದಲ್ಲಿ ಶೇ 50 ರಿಯಾಯಿತಿ

Suddi Udaya

ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಅರಸಿನಮಕ್ಕಿ ಧ.ಗ್ರಾ. ಯೋಜನೆಯ ಎ ಮತ್ತು ಬಿ ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya
error: Content is protected !!