ಬೆಳ್ತಂಗಡಿ: ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲು ರೂ.13 ಕೋಟಿ ಅಂದಾಜುಪಟ್ಟಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಎ.30ರಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ.
ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿಯು ಗುಡ್ಡ, ಇಳಿಜಾರು ಮತ್ತು ತಿರುವ ಹೊಂದಿರುವ ರಸ್ತೆಯಾಗಿದೆ. ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರಕ್ಕೆ ಹಾಗೂ ಧರ್ಮಸ್ಥಳ, ವೇಣೂರು, ಉಪ್ಪಿನಂಗಡಿ , ಪುತ್ತೂರು ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಾಗಿದೆ. ಈಗಾಗಲೇ ರಸ್ತೆಯ 9.50 ಕಿ.ಮೀ. ಉದ್ದ ಚತುಷ್ಪಥ ರಸ್ತೆಯಾಗಿದೆ. ಉಳಿಕೆ ಭಾಗದಲ್ಲಿ ಲಭ್ಯವಿರುವ ಅನುದಾನಕ್ಕೆ ಅನುಗುಣವಾಗಿ 1.270 ಕಿ.ಮೀ. ಚತುಷ್ಪಥ ರಸ್ತೆ, ಆಯ್ದ ಭಾಗಗಳಲ್ಲಿ ತಡೆಗೋಡೆ, ಆರ್‌ಸಿಸಿ ಚರಂಡಿ ನಿರ್ಮಾಣ, ಭೂಸ್ವಾಧೀನ ವೆಚ್ಚಕ್ಕೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ರಾಜ್ಯ ಸಚಿವ ಸಂಪುಟವು 13 ಕೋಟಿ ವೆಚ್ಚದಲ್ಲಿ ಈ ಹೆದ್ದಾರಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ. ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸುವ ಧೀರ್ಘಕಾಲದ ಬೇಡಿಕೆಯನ್ನು ಈಡೇರಿಸಿದ ಸರ್ಕಾರಕ್ಕೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅಭಿನಂದನೆ ಸಲ್ಲಿಸಿದ್ದಾರೆ.














