ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸ್ಟೂಡೆಂಟ್ಸ್ ಕೌನ್ಸಿಲ್ ವತಿಯಿಂದ 2026 -27 ನೇ ಸಾಲಿನ ಶೈಕ್ಷಣಿಕ ವರ್ಷದ ‘ಸ್ಟೂಡೆಂಟ್ ಆಕ್ಟಿವಿಟೀ ಫೋರ’ ಶೈಕ್ಷಣಿಕ ಚಟುವಟಿಕೆಗಳ 12 ವಿವಿಧ ಸಂಘಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ ಸಮಾರಂಭವು ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಸಹಸ್ರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಯುವ ಸಮುದಾಯದ ನಡುವೆ ಅತಿ ಹೆಚ್ಚು ಚರ್ಚೆಯಲ್ಲಿರುವ ಸಂಗತಿ ಎಂದರೆ ಮೊಬೈಲ್, ಕೃತಕ ಬುದ್ಧಿಮತ್ತೆ ಮತ್ತು ಝೆನ್ ಜೀ. ಈಗಿನ ವಿದ್ಯಾರ್ಥಿ ಸಮೂಹ ವಿಶೇಷ ಕೌಶಲ್ಯಗಳ ಜೊತೆಗೆ ಹೊಸ ಯೋಚನೆ ಮತ್ತು ಯೋಜನೆಯನ್ನು ರೂಪಿಸುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ನಾವು ಎಷ್ಟು ಎತ್ತರಕ್ಕೆ ಬೆಳೆಯುತ್ತೇವೆ ಮತ್ತು ಹೇಗೆ ಸಾಧನೆಯ ಹಾದಿಯಲ್ಲಿ ಸಾಗುತ್ತೇವೆ ಎಂಬುದನ್ನು ನಮ್ಮೊಳಗಿನ ನಿರಂತರವಾದ ಪ್ರಯತ್ನ ಶೀಲತೆ, ದೃಡತೆ, ನಂಬಿಕೆ ಮತ್ತು ಸ್ವ ಸಾಮರ್ಥ್ಯ ನಿರ್ಧರಿಸುತ್ತದೆ. ಪ್ರತಿ ವಿದ್ಯಾರ್ಥಿ ಸಂಘಗಳು ಹಾಗು ಈ ಮೂಲಕ ನಿರಂತರವಾಗಿ ನಡೆಯುವ ಪಠ್ಯೇತರ ಚಟುವಟಿಕೆಗಳು ನಮ್ಮೊಳಗಿನ ಪ್ರತಿಭೆ ಮತ್ತು ಕೌಶಲ್ಯಗಳ ಬೆಳವಣಿಗೆ ಮತ್ತು ಅನಾವರಣಕ್ಕೆ ಇರುವ ಬಹುದೊಡ್ಡ ವೇದಿಕೆ.
ಕಾರ್ಯಕ್ರಮದ ಅತಿಥಿಗಳಾದ ಕಾಲೇಜಿನ ಹಿರಿಯ ವಿದ್ಯಾರ್ಥಿ ಜಪಾನ್ ದೇಶದ ಕ್ಯೋಟೋ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇನ್ಫೋರ್ಮೆಟಿಕ್ಸ್ ಪ್ರೋಗ್ರಾಮ್ ಸ್ಪೆಸಿಫಿಕ್ ರಿಸರ್ಚ್ರ್ ಡಾ. ಶಶಾಂಕ ಕುಳಮರ್ವ ಮಾತನಾಡಿ, ನಾವು ಮಾಡುವ ಕಲಿಕೆ, ವೃತ್ತಿ ಮತ್ತು ಅದರಿಂದಾಗುವ ಪರಿಣಾಮಗಳ ನಡುವೆ ನಿರ್ದಿಷ್ಟ ಗುರಿಗಳ ಸಮತೋಲನತೆಯನ್ನು ಕಾಯ್ದುಕೊಳ್ಳಬೇಕು. ಇದು ನಾವು ಮಾಡುವ ಕರ್ತವ್ಯಗಳ ಮೇಲಿನ ಪ್ರೀತಿಯನ್ನು ಹೆಚ್ಚಿಸುವುದರ ಜೊತೆಗೆ ಬದುಕಿನ ಸುಸ್ಥಿರತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಜಪಾನ್ ನಂತಹ ದೇಶಗಳಲ್ಲಿ ಇದನ್ನು ಬದುಕಿನ ಚೌಕಟ್ಟಾಗಿ ಪಾಲಿಸುತ್ತಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೋ. ವಿಶ್ವನಾಥ್ ಪಿ ಮಾತನಾಡಿ ಇಂದು 60ಕ್ಕೂ ಹೆಚ್ಚಿನ ವಿದ್ಯಾರ್ಥಿ ಪ್ರತಿನಿಧಿಗಳು ಜವಾಬ್ದಾರಿಯನ್ನು ಸ್ವೀಕರಿಸಿ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರವನ್ನು ನೀಡಲಿದ್ದಾರೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾಲೇಜು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ಉನ್ನತ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.
ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಮೂಹನ ವಿಭಾಗದ ವಿದ್ಯಾರ್ಥಿಗಳಿಂದ ರಚಿತವಾದ ಚಿಗುರು ಮಾಸ ಪತ್ರಿಕೆ ಹಾಗು ಛಾಯಾಚಿತ್ರಗಳ ಬಿತ್ತಿ ಪತ್ರಿಕೆಯನ್ನು ಡಾ. ಡಾ. ಶಶಾಂಕ ಕುಳಮರ್ವ ಅತಿಥಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಶ್ರೇಯಸ್ ಬಿ, ವಿದ್ಯಾರ್ಥಿ ಸಂಯೋಜಕರಾದ ವಿಜ್ಞಾನ ಅಸೋಸಿಯೇಷನ್ ವಿಭಾಗದ ಅಧ್ಯಕ್ಷ ರಂಜನ್, ಆರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ನೆವಿಲ್ ನವೀನ್ ಮೋರಸ್, ಕಾಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಭವಿಷಿತ್ ಹಾಗು ಸ್ನಾತಕೋತ್ತರ ಪದವಿ ಅಧ್ಯಕ್ಷ ಪವನ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರು, ವಿವಿಧ ವಿಭಾಗಗಳ ಉಪನ್ಯಾಸಕರು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ
ಕವನ ಮತ್ತು ಅನ್ವಿತಾ ನಿರೂಪಿಸಿ, ವಿದ್ಯಾರ್ಥಿ ಪ್ರತಿನಿಧಿ ನೆವಿಲ್ ನವೀನ್ ಮೋರಸ್ ವಂದಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕ ಶ್ರೇಯಸ್ ಬಿ ಸಂಯೋಜಿಸಿ, ನಟರಾಜ್ ಮತ್ತು ಸುರೇಶ್ ಬಾಬು ಸಹಕರಿಸಿದರು.
12 ವಿವಿಧ ವಿದ್ಯಾರ್ಥಿ ಸಂಘಗಳಿಗೆ ಚಾಲನೆ :
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಕ್ರಾಫ್ಟ್ ಫೋರಮ್, ಕ್ವಿಜ್ ಫೋರಮ್ , ಫೋಟೋಗ್ರಫಿ ಮತ್ತು ಮೀಡಿಯಾ ಫೋರಮ್ , ಕಮ್ಯುನಿಕೇಟಿವ್ ಇಂಗ್ಲೀಷ್ ಫೋರಮ್, ಲೀಗಲ್ ಮತ್ತು ಸಿವಿಲ್ ಜಾಗೃತಿ ಫೋರಮ್, ಡಿಬೆಟ್ ಫೋರಮ್, ಟ್ರೂ ಎಜುಕೇಷನ್ ಫೋರಮ್, ಇವೆಂಟ್ ಮ್ಯಾನೇಜ್ಮೆಂಟ್ ಫೋರಮ್, ರೀಡರ್ಸ್ ಫೋರಮ್ , ರೈಟರ್ಸ್ ಫೋರಮ್, ಕಾರ್ಟೂನ್ ಡ್ರಾಯಿಂಗ್ ಮತ್ತು ಪೈಂಟಿಂಗ್ ಫೋರಮ್ ,ಡ್ರಾಮಾ , ಯಕ್ಷಗಾನ ಮತ್ತು ನೃತ್ಯಗಳ ಕಲ್ಚರಲ್ ಫೋರಮ್ ಸೇರಿದಂತೆ ಒಟ್ಟು 12 ವಿವಿಧ ವಿದ್ಯಾರ್ಥಿ ಸಂಘಗಳಿಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿ ಪ್ರತಿನಿಧಿಗಳಿಗೆ ಕಾಲೇಜಿನ ಪ್ರಾಚಾರ್ಯರಾದ ಪ್ರೋ. ವಿಶ್ವನಾಥ್ ಪಿ ಪ್ರತಿಜ್ಞಾ ವಿಧಿ ಬೋಧಿಸಿದರು. ಅತಿಥಿ ಡಾ. ಶಶಾಂಕ್ ಕುಳಮರ್ವ ಗುರುತು ಪತ್ರ ವಿತರಿಸಿದರು.













