29.4 C
ಪುತ್ತೂರು, ಬೆಳ್ತಂಗಡಿ
September 21, 2026
ಪ್ರಮುಖ ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್‌ಡಿಎಂಐಟಿ ಕೆಸರುಗದ್ದೆ ಕ್ರೀಡಾಕೂಟ : ಗ್ರಾಮೀಣ ಕ್ರೀಡೆಗಳೊಂದಿಗೆ ಸಂಭ್ರಮಿಸಿದ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳು

ಉಜಿರೆ : ಮಣ್ಣಿನ ಸೊಗಡು, ಗ್ರಾಮೀಣ ಬದುಕಿನ ಸೊಗಸು, ಜಾನಪದ ಕ್ರೀಡೆಗಳ ಉತ್ಸಾಹ ಹಾಗೂ ಕ್ರೀಡಾಸ್ಫೂರ್ತಿಯ ಸಮ್ಮಿಲನಕ್ಕೆ ಸಾಕ್ಷಿಯಾದ ಕೆಸರುಗದ್ದೆ ಕ್ರೀಡಾಕೂಟವು ಉಜಿರೆಯ ಎಸ್‌.ಡಿ.ಎಂ ಇಂಜಿನಿಯರಿಂಗ್ ಕಾಲೇಜು (ಎಸ್‌ಡಿಎಂಐಟಿ)ಯ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಅವಿಸ್ಮರಣೀಯ ಅನುಭವವನ್ನು ನೀಡಿತು.

ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಈ ವಿಶಿಷ್ಟ ಕ್ರೀಡಾಕೂಟವು ಉಜಿರೆಯ ಮುಂಡತೋಡಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಸಾಂಪ್ರದಾಯಿಕವಾಗಿ ಉದ್ಘಾಟನೆ :

ಕೆಸರುಗದ್ದೆ ಕ್ರೀಡಾಕೂಟಕ್ಕೆ ಸಾಂಪ್ರದಾಯಿಕ ಸ್ಪರ್ಶ ನೀಡುವ ಉದ್ದೇಶದಿಂದ ಕಾರ್ಯಕ್ರಮವನ್ನು ಗದ್ದೆಯ ಮಾಲೀಕರಾದ ಶಾರದಾ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂದೀಪ್ ಆರ್. ಅವರು ಗದ್ದೆಗೆ ಹಾಲು ಮತ್ತು ಎಳನೀರು ಸಮರ್ಪಿಸುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು. ಬಳಿಕ ಕ್ರೀಡಾಪಟುಗಳಿಗೆ ಶುಭ ಹಾರೈಸಿ, ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುವಂತೆ ಪ್ರೋತ್ಸಾಹಿಸಿದರು.

ಬಳಿಕ ಮಾತನಾಡಿದ ಪ್ರಾಚಾರ್ಯರು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯೊಂದಿಗೆ ಅವರ ದೈಹಿಕ ಹಾಗೂ ಮಾನಸಿಕ ಕ್ಷೇಮಕ್ಕೂ ಕ್ರೀಡಾ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಗ್ರಾಮೀಣ ಪರಿಸರದಲ್ಲಿ ನಡೆಯುವ ಇಂತಹ ಕ್ರೀಡಾಕೂಟಗಳು ವಿದ್ಯಾರ್ಥಿಗಳಿಗೆ ಪ್ರಕೃತಿ ಮತ್ತು ಸ್ಥಳೀಯ ಸಂಸ್ಕೃತಿಯೊಂದಿಗೆ ನೇರವಾದ ಅನುಭವವನ್ನು ನೀಡುತ್ತವೆ ಎಂದರು.

ನಗರೀಕರಣ ಮತ್ತು ಆಧುನಿಕ ಜೀವನಶೈಲಿಯ ನಡುವೆ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳು ಹಾಗೂ ಸ್ಥಳೀಯ ಸಂಸ್ಕೃತಿಯನ್ನು ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂದೀಪ್ ಆರ್. ಅಭಿಪ್ರಾಯ ಪಟ್ಟರು.

ಪ್ರಾರ್ಥನೆ, ನೃತ್ಯದಿಂದ ಆರಂಭವಾದ ಕ್ರೀಡಾ ಸಂಭ್ರಮ :

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಬಳಿಕ ನಡೆದ ಸಾಂಸ್ಕೃತಿಕ ನೃತ್ಯ ಪ್ರದರ್ಶನವು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ಜಾನಪದ ಸೊಗಡನ್ನು ಪ್ರತಿಬಿಂಬಿಸುವ ನೃತ್ಯ ಪ್ರದರ್ಶನಕ್ಕೆ ನೆರೆದಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಕೆಸರುಗದ್ದೆಯಲ್ಲಿ ವಿವಿಧ ಜಾನಪದ ಮಾದರಿಯ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಮಾತ್ರವಲ್ಲದೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯೂ ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಿ, ತಮ್ಮ ದಿನನಿತ್ಯದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳಿಂದ ಹೊರಬಂದು ಗ್ರಾಮೀಣ ಕ್ರೀಡಾ ವಾತಾವರಣದಲ್ಲಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಐಟಿ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಡಾ. ಬಸವ ಟಿ., ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ರಮೇಶ್ ಎಚ್. ಹಾಗೂ ಪವಿತ್ರ ಮಂಜುನಾಥ್ ಉಪಸ್ಥಿತರಿದ್ದು ಕ್ರೀಡಾಕೂಟಕ್ಕೆ ಪ್ರೋತ್ಸಾಹ ನೀಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಡಾ. ರವೀಶ್ ನಿರ್ವಹಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಭಾಕರ್ ಅವರು ಕೆಸರುಗದ್ದೆ ಕ್ರೀಡಾಕೂಟ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಧರ್ಮೇಂದ್ರ ಕುಮಾರ್ ಹಾಗೂ ಜಸ್ವಂತ್, ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್‌ನ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಕ್ರೀಡಾ ಸಂಘದ ಪದಾಧಿಕಾರಿಗಳು ಸಕ್ರಿಯವಾಗಿ ಸಹಕರಿಸಿದರು.

” ಇಂದಿನ ಯುವಜನತೆ ತಂತ್ರಜ್ಞಾನ ಮತ್ತು ಡಿಜಿಟಲ್ ಜಗತ್ತಿನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವ ಸಂದರ್ಭದಲ್ಲಿ, ಇಂತಹ ಗ್ರಾಮೀಣ ಕ್ರೀಡಾಕೂಟಗಳು ಮಣ್ಣಿನೊಂದಿಗೆ, ಪ್ರಕೃತಿಯೊಂದಿಗೆ ಹಾಗೂ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆಸೆಯುವ ಅವಕಾಶವನ್ನು ಒದಗಿಸುತ್ತವೆ. ಕೆಸರುಗದ್ದೆಯಲ್ಲಿ ನಡೆಯುವ ಸಾಂಪ್ರದಾಯಿಕ ಕ್ರೀಡೆಗಳು ಕೇವಲ ಮನರಂಜನೆಗೆ ಸೀಮಿತವಾಗಿರದೆ, ದೈಹಿಕ ಸಾಮರ್ಥ್ಯ, ಚುರುಕುತನ, ಸಮನ್ವಯ, ತಂಡದ ಸಹಕಾರ ಮತ್ತು ಕ್ರೀಡಾಸ್ಫೂರ್ತಿಯನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತವೆ.”

 - ಪ್ರಭಾಕರ್  ದೈಹಿಕ ಶಿಕ್ಷಣ ನಿರ್ದೇಶಕರು ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ ಉಜಿರೆ

Related posts

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರದ ನ್ಯೂನತೆಗಳನ್ನು ಸರಿಪಡಿಸುವಂತೆ ಉಸ್ತುವಾರಿ ಸಚಿವರಿಗೆ ಕೆ.ವಸಂತ ಬಂಗೇರ ಮನವಿ

Suddi Udaya

ಬೆಳ್ತಂಗಡಿ ಶ್ರೀ ಧ. ಮಂ.ಆಂ.ಮಾ. ಶಾಲೆಯಲ್ಲಿ ಆಟಿದ ಕೂಟ

Suddi Udaya

ಅಪಾಯದಂಚಿನಲ್ಲಿರುವ ತೋಟತ್ತಾಡಿಯ ಸೇತುವೆ: ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಆಗ್ರಹ

Suddi Udaya

ಪಿಯುಸಿ ಫಲಿತಾಂಶ; ನಯನಾಡು ಸುಶ್ಮಿತಾ ಆಶಾಲತಾ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್

Suddi Udaya

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ : ಮುಂಡಾಜೆಯ ತೇಜಲ್ ಕೆ .ಆರ್ ರವರಿಗೆ ಬೆಳ್ಳಿಯ ಪದಕ

Suddi Udaya

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ

Suddi Udaya
error: Content is protected !!