ಬೆಳ್ತಂಗಡಿ: ಸರಕಾರಿ ಶಾಲೆಯ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗುವ ಉದ್ದೇಶದಿಂದ ಸಮಾಜಸೇವಕ ರಝಾಕ್ ಚಾನ್ಸ್ ಅವರು ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆಯ ಎಲ್‌ಕೆಜಿ/ಯುಕೆಜಿ ತರಗತಿಯ ಕೊಠಡಿಯ ಗೋಡೆಗಳ ಮೇಲೆ ಜ್ಞಾನಯುಕ್ತ ಮತ್ತು ಸುಂದರವಾದ ಚಿತ್ರಗಳನ್ನು ಬರೆಸಿ ಶಾಲೆಗೆ ಕೊಡುಗೆ ನೀಡಿ ಶಿಕ್ಷಣ ಪ್ರೇಮ ಬೆಳೆಸಿದ್ದಾರೆ.

ಗೋಡೆಗಳ ಮೇಲೆ ಜ್ಞಾನಯುಕ್ತ ಮತ್ತು ಸುಂದರವಾದ ಚಿತ್ರಗಳು, ವರ್ಣಮಾಲೆ, ಗಣಿತದ ಸೂತ್ರಗಳು, ಪ್ರಾಣಿ-ಪಕ್ಷಿಗಳು, ನಕ್ಷೆಗಳು ಮತ್ತು ವಿಜ್ಞಾನದ ಚಿತ್ರಗಳನ್ನು ಬಿಡಿಸಲಾಗುತ್ತಿದ್ದು, ಇವು ವಿದ್ಯಾರ್ಥಿಗಳಿಗೆ ದೃಶ್ಯ ಮಾಧ್ಯಮದ ಮೂಲಕ ಸುಲಭವಾಗಿ ಅರ್ಥೈಸಿಕೊಳ್ಳಲು ಕಲಿಕಾ ಸಾಧನವನ್ನಾಗಿ ಪರಿವರ್ತಿಸಲಾಗುತ್ತಿದೆ.

ತಮ್ಮ ಸ್ವಂತ ಖರ್ಚಿನಿಂದ ರೂ.50ಸಾವಿರ ವೆಚ್ಚದಲ್ಲಿ ವರ್ಣರಂಜಿತ ಚಿತ್ರಗಳನ್ನು ಬರೆಯಲಾಗಿದ್ದು ಸರಕಾರಿ ಶಾಲೆಗಳ ಅಬಿವೃದ್ಧಿಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಬಲರ್ವಧನೆ ನೀಡಿದ್ದಂತೆ ಹಾಗಾಗಿ ತನ್ನ ದುಡಿಮೆ ಒಂದಿಷ್ಟು ಭಾಗ ಸಮಾಜಮುಖಿ ಕಾರ್ಯಗಳಿಗೆ ಮೀಸಲಿರಿಸಿರುವುದಾಗಿ ರಝಾಕ್ ಚಾನ್ಸ್ ಹೇಳಿದರು.

ಶಾಲೆಯ ವಿದ್ಯಾರ್ಥಿಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ನೀಡಲಾದ ಈ ಸಹಾಯವು ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ದೇಣಿಗೆ ಸ್ವೀಕರಿಸಿದ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ರಝಾಕ್ ಚಾನ್ಸ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮಾಜದ ವಿವಿಧ ವರ್ಗಗಳ ಸಹಕಾರ ಅಗತ್ಯವಾಗಿದ್ದು, ಇಂತಹ ಸೇವಾ ಮನೋಭಾವ ಇತರರಿಗೂ ಪ್ರೇರಣೆಯಾಗಲಿದೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟರು.
ರಝಾಕ್ ಅವರು ಸ್ಥಳೀಯವಾಗಿ ರಸ್ತೆ ದುರಸ್ತಿ, ಕುಡಿಯುನೀರಿನ ಸಮಸ್ಯೆ, ಹಾಗೂ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಸಹಾಯ ನೀಡುತ್ತಿರುವುದು ಅವರು ಸಮಾಜಮುಖಿ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.











