ನಾರಾವಿ : ನಾರಾವಿ ಗ್ರಾಮದಲ್ಲಿರುವ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಸೆ.24ರಂದು ಅನಂತನೋಂಪಿ ಆರಾಧನಾ ಪೂಜಾ ವಿಧಾನದಲ್ಲಿ 15 ಮಂದಿ ಮತ್ತು ಉದ್ಯಾಪನಾ ಪೂಜಾ ವಿಧಾನದಲ್ಲಿ 12 ಮಂದಿ ಸೇರಿದಂತೆ ಒಟ್ಟು 27 ಮಂದಿ ಶ್ರಾವಕರು- ಶ್ರಾವಕಿಯರು ಭಾಗವಹಿಸಿದರು.
ಬೆಳಿಗ್ಗೆ ಧ್ವಜಾರೋಹಣ, ಜಿನಾಭಿಷೇಕ, ಕಂಕಣ ಬಂಧನ, ಭಗವಾನ್ ಅನಂತನಾಥ ಸ್ವಾಮಿಗೆ ಪ್ರಭಾವಳಿ ಸಮರ್ಪಣೆ ಬಳಿಕ ಧರ್ಮಶ್ರೀ ಸಭಾಭವನದಲ್ಲಿ ಅನಂತನೋಂಪಿಯ ಆರಾಧನಾ ವಿಧಾನ ನಡೆಯಿತು.

ಪಂಚ ನಮಸ್ಕಾರ ಮಂತ್ರ ಪಠಣ ದೊಂದಿಗೆ ಪಂಚಪರಮೇಷ್ಠಿಗಳ ಅಷ್ಟ ವಿಧಾರ್ಚನೆ ಪೂಜೆ, ಬಾಹುಬಲಿ ಸ್ವಾಮಿ ಪೂಜೆ, ಜಿನವಾಣಿ ಪೂಜೆ, ದಶಧರ್ಮಗಳ ಪೂಜೆ, ರತ್ನತ್ರಯ ಪೂಜೆ, ಚತುರ್ವಿಂಶತಿ(24) ತೀರ್ಥಂಕರರ ಪೂಜೆ ನಡೆಯಿತು.
ಅಳದಂಗಡಿಯ ಪ್ರತಿಷ್ಠಾ ಪುರೋಹಿತರು ಪದ್ಮಪ್ರಭ ಇಂದ್ರರು ಮತ್ತು ನಾರಾವಿ ಬಸದಿಯ ಹರ್ಷಿತ್ ಇಂದ್ರರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು.
‘ದಶಭಕ್ತಿ’ ಕೃತಿ ಲೋಕಾರ್ಪಣೆ.
ರತ್ನಕರಂಡಕ ಶ್ರಾವಕಾಚಾರ ಸ್ವಾದ್ಯಾಯ ಗಣ ದವರು ಪ್ರಕಟಿಸಿದ “ದಶಭಕ್ತಿ” ಜಿನ ವಾಣಿ ಶಾಸ್ತ್ರ ಕೃತಿಯನ್ನು ಗುರುವಾಯನಕೆರೆಯ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಲೋಕಾರ್ಪಣೆಗೊಳಿಸಿದರು.
ಜಿನೇಂದ್ರ ಬಂಗ ಸಹಕರಿಸಿದರು. ಬಂಗಾಡಿ ಗ್ರಾಮದ ಬೆಳ್ಳೂರು ” ಶಾಂತಿನಿಕೇತನ” ನಿವಾಸಿಗಳಾದ ಶುಭಲತಾ ಮತ್ತು ಸತೀಶ್ ಕುಮಾರ್ ಜೈನ್ “ದಶಭಕ್ತಿ” ಪ್ರಕಾಶನಕ್ಕೆ ಪ್ರಾಯೋಜಕರಾಗಿ ಸಹಕರಿಸಿದರು.
ಹೊರನಾಡು ಜಯಶ್ರೀ ಡಿ. ಜೈನ್ ಮತ್ತು ಬಳಗದವರ ಸುಶ್ರಾವ್ಯ ಗಾಯನ ನೋಂಪಿ ಆರಾಧನೆಗೆ ವಿಶೇಷ ಮೆರುಗನ್ನು ನೀಡಿತು.












