24.2 C
ಪುತ್ತೂರು, ಬೆಳ್ತಂಗಡಿ
October 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ‘ಸ್ವಚ್ಛ ಭಾರತ ಮತ್ತು ಯುವ ಜನತೆ’ ವಿಶೇಷ ಉಪನ್ಯಾಸ

ಉಜಿರೆ: ಸ್ವಚ್ಛತೆ ಕೇವಲ ಪರಿಸರವನ್ನು ಸುಂದರವಾಗಿಸುವ ಪ್ರಕ್ರಿಯೆಯಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ, ಜೀವನಶೈಲಿ ಹಾಗೂ ಸಾಮಾಜಿಕ ಜವಾಬ್ದಾರಿಯ ಅವಿಭಾಜ್ಯ ಅಂಗವಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ತಜ್ಞ ದೊಂಬಯ್ಯ ಇಡ್ಕಿದುಅಭಿಪ್ರಾಯಪಟ್ಟರು.

ಡಾ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವದ ಪ್ರಯುಕ್ತ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ (ಸ್ವಾಯತ್ತ) ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಾಮಾಜಿಕ ಹೊಣೆಗಾರಿಕೆ ಉಪಕ್ರಮಗಳ ಸಮಿತಿಯ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಸ್ವಚ್ಛ ಭಾರತ ಮತ್ತು ಯುವ ಜನತೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

“ಸ್ವಚ್ಛ ಭಾರತ ಮತ್ತು ನಿರ್ಮಲ ಭಾರತ ಯೋಜನೆಗಳನ್ನು ಅನುಷ್ಠಾನಗೊಳಿಸುವ ಆರಂಭಿಕ ಹಂತದಲ್ಲಿ ಬಯಲು ಬಹಿರ್ದೆಸೆ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಪ್ರಮುಖ ಸವಾಲಾಗಿತ್ತು. ಆ ಸಂದರ್ಭದಲ್ಲಿ ಕೇವಲ ಶೇ. 35ರಷ್ಟು ಕುಟುಂಬಗಳು ಮಾತ್ರ ಶೌಚಾಲಯ ಸೌಲಭ್ಯವನ್ನು ಹೊಂದಿದ್ದವು. ಸಾರ್ವಜನಿಕರಲ್ಲಿ ನೈರ್ಮಲ್ಯದ ಅಗತ್ಯತೆಯ ಕುರಿತು ಅರಿವು ಮೂಡಿಸುವುದು ಹಾಗೂ ಶೌಚಾಲಯ ಬಳಕೆಯನ್ನು ದೈನಂದಿನ ಅಭ್ಯಾಸವಾಗಿಸುವುದು ಮಹತ್ವದ ಸವಾಲಾಗಿತ್ತು” ಎಂದು ಅವರು ವಿವರಿಸಿದರು.

‘ಎಲ್ಲಿ ಸ್ವಚ್ಛತೆ ನೆಲೆಸಿರುತ್ತದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ’ ಎಂಬ ಮಹಾತ್ಮ ಗಾಂಧೀಜಿಯವರ ಆಶಯವನ್ನು ಸ್ಮರಿಸಿದ ಅವರು, ಸ್ವಚ್ಛತೆಯ ಪರಿಕಲ್ಪನೆ ವೈಯಕ್ತಿಕ ಶುಚಿತ್ವದಿಂದ ಆರಂಭವಾಗಿ ಮನೆ, ಶಿಕ್ಷಣ ಸಂಸ್ಥೆ ಹಾಗೂ ಸಾರ್ವಜನಿಕ ಪರಿಸರದವರೆಗೂ ವಿಸ್ತರಿಸಬೇಕು. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಮಹತ್ವವಿದೆ ಎಂದು ತಿಳಿಸಿದರು.

ತ್ಯಾಜ್ಯ ನಿರ್ವಹಣೆಯ ಕುರಿತು ಮಾತನಾಡಿದ ಅವರು, ಪ್ರತಿಯೊಂದು ಮನೆಯಲ್ಲಿಯೂ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದು ಅಥವಾ ಸುಡುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದರ ಜೊತೆಗೆ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ದಾರಿಯಾಗುತ್ತದೆ. ಕಸವನ್ನು ಸುಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದ್ದು, ತ್ಯಾಜ್ಯವನ್ನು ಕಡ್ಡಾಯವಾಗಿ ನಿಗದಿತ ಸಂಗ್ರಹಣಾ ವಾಹನಗಳಿಗೆ ಹಸ್ತಾಂತರಿಸಬೇಕು ಎಂದು ತಿಳಿಸಿದರು.

ಸ್ವಚ್ಛತಾ ಅಭಿಯಾನಗಳು ಕೇವಲ ಸರಕಾರದ ಯೋಜನೆಗಳಾಗಿ ಉಳಿಯದೆ ಜನಸಾಮಾನ್ಯರ ದೈನಂದಿನ ಬದುಕಿನ ಭಾಗವಾಗಬೇಕು. ವಿಶೇಷವಾಗಿ ಯುವಜನತೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ತಮ್ಮ ನಡೆನುಡಿಗಳ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ರೂಪುಗೊಳ್ಳುವ ಸ್ವಚ್ಛತಾ ಪ್ರಜ್ಞೆಯು ಸಮುದಾಯದವರೆಗೂ ತಲುಪಬೇಕು ಎಂದು ಆಶಿಸಿದರು.

ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ಸೌಮ್ಯ ಬಿ. ಪಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅತುಲ್ ಎಸ್. ಸೇಮಿತ ಸ್ವಾಗತಿಸಿದರು. ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿನಿ ವಂದಿತಾ ಪ್ರಭು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ನಿವೇದಿತಾ ವಂದಿಸಿದರು.

Related posts

ಕೊಕ್ಕಡದ ಕಿಟ್ಟ ಮಲೆಕುಡಿಯರವರಿಗೆ ಕರ್ನಾಟಕ ಜಾನಪದ ಪರಿಷತ್‌ ಪ್ರಶಸ್ತಿ ಪ್ರದಾನ

Suddi Udaya

ಪುಂಜಾಲಕಟ್ಟೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ 17.40 ಅಡಿ ಎತ್ತರದ ಶ್ರೀರಾಮ ಮಂದಿರದ ವರ್ಣ ರಂಜಿತ ಕಟ್ಟೌಟ್ ನಿರ್ಮಾಣ

Suddi Udaya

ವಸಂತಿ ಟಿ. ನಿಡ್ಲೆ ರವರು ಆಲ್ ಇಂಡಿಯಾ ವಿಮೆನ್ ಅಚೀವರ್-2023 ಪ್ರಶಸ್ತಿಗೆ ಆಯ್ಕೆ

Suddi Udaya

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : ವರದಿ ಸಾಲಿನಲ್ಲಿ ರೂ. 394.12 ಕೋಟಿ ವಾರ್ಷಿಕ ವ್ಯವಹಾರ ನಡೆಸಿ, ರೂ.1.54 ಕೋಟಿ ಲಾಭ: ರಾಕೇಶ್ ಹೆಗ್ಡೆ

Suddi Udaya

ಗಂಡಿಬಾಗಿಲು ಸೈಂಟ್ ಥೋಮಸ್ ಚರ್ಚ್‌ ಮತ್ತು ಗ್ರೋಟ್ಟೊ ಕಾಣಿಕೆ ಡಬ್ಬಿ ಕಳ್ಳತನ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Suddi Udaya

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ಉರೂಸ್ ಕಾರ್ಯಕ್ರಮದ ಸಮಾರೋಪ

Suddi Udaya
error: Content is protected !!