32.5 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಅಂತರಂಗದ ಕದನ ಮತ್ತು ನವಚೈತನ್ಯ: ದುರ್ಗೆಯ ನೆರಳಲ್ಲಿ ಮನೋವಿಜಯ

✍️ ಎಂ. ಕೃಷ್ಣಪ್ರಸಾದ್ ಭಟ್ ಮದ್ದಡ್ಕ

ಜೀವನವೆಂಬುದು ಹೊರಗಿನ ಜಗತ್ತಿನೊಂದಿಗೆ ನಡೆಸುವ ಪೈಪೋಟಿಯಲ್ಲ, ನಮ್ಮದೇ ಮಿತಿಗಳ ವಿರುದ್ಧ ನಡೆಸುವ ನಿರಂತರ ದಂಗೆ. ಮನುಷ್ಯನನ್ನು ಸೋಲಿಸುವುದು ಎದುರಾಳಿಗಳಲ್ಲ; ಅವನ ಒಳಗೇ ಹುದುಗಿರುವ ಭಯ, ಅನಿಶ್ಚಿತತೆ ಮತ್ತು ಆತ್ಮವಿಶ್ವಾಸದ ಕೊರತೆ. ನವರಾತ್ರಿಯ ಒಂಬತ್ತು ದಿನಗಳನ್ನು ಕೇವಲ ಧಾರ್ಮಿಕ ಆಚರಣೆಯ ಕಣ್ಣಿನಿಂದ ನೋಡಿದರೆ ಅದೊಂದು ಹಬ್ಬವಷ್ಟೇ. ಆದರೆ ಜೀವನದ ದೃಷ್ಟಿಕೋನದಿಂದ ಅವಲೋಕಿಸಿದರೆ, ಅದೊಂದು ಮನಸ್ಸಿನ ಕತ್ತಲೆಯನ್ನು ಸೀಳಿ ಆತ್ಮಸಾಕ್ಷಾತ್ಕಾರದ ಕಡೆಗೆ ಸಾಗುವ ಅದ್ಭುತ ಪಯಣ.

ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಪ್ರತಿಯೊಬ್ಬ ಮನುಷ್ಯನಲ್ಲೂ ಅದಮ್ಯವಾದ ಶಕ್ತಿಯಿದೆ. ಆದರೆ ಆ ಶಕ್ತಿಯನ್ನು ಗುರುತಿಸಿ ಹೊರತೆಗೆಯಲು ಒಂದು ಕ್ರಮಬದ್ಧವಾದ ಮಾನಸಿಕ ಪರಿವರ್ತನೆ ಬೇಕು. ನವದುರ್ಗೆಯರ ಒಂಬತ್ತು ಸ್ವರೂಪಗಳು ನಮ್ಮ ಸುಪ್ತ ಮನಸ್ಸನ್ನು ಜಾಗೃತಗೊಳಿಸುವ ಒಂಬತ್ತು ವೈಚಾರಿಕ ಮೆಟ್ಟಿಲುಗಳು.

ಮೊದಲ ದಿನದ ಶೈಲಪುತ್ರಿ ನಮ್ಮ ಬದುಕಿನ ಬುನಾದಿ. ಎತ್ತರದ ಶಿಖರವನ್ನು ಏರಬೇಕಾದರೆ ಮೊದಲು ಕಾಲಡಿ ಇರುವ ನೆಲ ಗಟ್ಟಿಯಾಗಿರಬೇಕು. ಬದುಕಿನಲ್ಲಿ ಎಡವಿಬಿದ್ದಾಗ ಮತ್ತೆ ಎದ್ದು ನಿಲ್ಲುವ ಮಣ್ಣಿನ ಗುಣ, ಯಾವುದೇ ಸಂಕಷ್ಟ ಬಂದರೂ ಜಗ್ಗದ ಮೂಲಭೂತ ಆತ್ಮಸ್ಥೈರ್ಯವೇ ಶೈಲಪುತ್ರಿ. ನಮ್ಮ ಅಸ್ತಿತ್ವದ ಮೇಲಿನ ಅಚಲ ನಂಬಿಕೆಯೇ ಎಲ್ಲಾ ಗೆಲುವಿನ ಆರಂಭ.

ಎರಡನೆಯ ದಿನದ ಬ್ರಹ್ಮಚಾರಿಣಿ ಜ್ಞಾನದ ಹಸಿವು ಮತ್ತು ಆಂತರಿಕ ಸಂಯಮ. ಕೇವಲ ಕನಸು ಕಂಡರೆ ಸಾಲದು, ಆ ಕನಸಿಗೆ ತಕ್ಕಂತೆ ಕಾಯಾ-ವಾಚಾ-ಮನಸಾ ಪರಿಶ್ರಮ ಪಡಬೇಕು. ಕ್ಷಣಿಕ ಸುಖಗಳ ವ್ಯಾಮೋಹಕ್ಕೆ ಬೀಳದೆ, ಮನಸ್ಸನ್ನು ಲಕ್ಷ್ಯದ ಕಡೆಗೆ ಕೇಂದ್ರೀಕರಿಸುವ ಧ್ಯಾನಸ್ಥ ಸ್ಥಿತಿಯೇ ಬ್ರಹ್ಮಚಾರಿಣಿ. ಶಿಸ್ತಿಲ್ಲದ ಪ್ರತಿಭೆಗೆ ಬೆಲೆಯಿಲ್ಲ ಎಂಬುದನ್ನು ಈ ಹಂತ ಎಚ್ಚರಿಸುತ್ತದೆ.

ಮೂರನೆಯ ದಿನದ ಚಂದ್ರಘಂಟಾ ಭಾವನೆಗಳ ಸಮತೋಲನ. ಮನುಷ್ಯನ ಅತಿ ದೊಡ್ಡ ದೌರ್ಬಲ್ಯವೆಂದರೆ ಆವೇಶ ಮತ್ತು ಅಸಹನೆ. ಚಂದ್ರನಂತಹ ತಂಪಾದ ವಿವೇಕ ಮತ್ತು ಗಂಟೆಯ ನಾದದಂತಹ ಗಂಭೀರ ಸ್ಪಷ್ಟತೆ ಒಟ್ಟಿಗೆ ಸೇರಿದಾಗ ವ್ಯಕ್ತಿತ್ವ ಪ್ರಬುದ್ಧವಾಗುತ್ತದೆ. ಅಪಮಾನಗಳು, ಟೀಕೆಗಳು ಎದುರಾದಾಗ ಕೆರಳಿ ಕೆಂಡವಾಗದೆ, ಮೌನದಲ್ಲೇ ಶಕ್ತಿ ಸಂಚಯನ ಮಾಡುವ ಪಕ್ವತೆಯೇ ಚಂದ್ರಘಂಟಾ.

ನಾಲ್ಕನೆಯ ದಿನದ ಕೂಷ್ಮಾಂಡ ನಮ್ಮ ಕಲ್ಪನಾಶಕ್ತಿ. ಶೂನ್ಯದಿಂದ ಬ್ರಹ್ಮಾಂಡವನ್ನೇ ನಗುವಿನಿಂದ ಹೊಮ್ಮಿಸಿದಂತೆ, ಬದುಕಿನಲ್ಲಿ ಎಲ್ಲವೂ ಮುಗಿದುಹೋಯಿತು ಎನ್ನುವ ಕತ್ತಲೆಯಲ್ಲೂ ಹೊಸದೊಂದು ದಾರಿಯನ್ನು ಸೃಷ್ಟಿಸುವ ಜೀವಂತಿಕೆ. ಸೋಲುಗಳ ನಡುವೆಯೂ ಕಣ್ಣೀರನ್ನು ಒರೆಸಿಕೊಂಡು ಮುಗುಳುನಗುವ ಧೈರ್ಯವಿದೆಯಲ್ಲ, ಅದೇ ಕೂಷ್ಮಾಂಡಾ ತತ್ತ್ವ. ಸೃಜನಶೀಲತೆ ಮನುಷ್ಯನನ್ನು ಮತ್ತೆ ಬದುಕಿಸುತ್ತದೆ.

ಐದನೆಯ ದಿನದ ಸ್ಕಂದಮಾತಾ ಮಾತೃತ್ವದ ಗಾಂಭೀರ್ಯ ಮತ್ತು ರಕ್ಷಣಾ ಶಕ್ತಿ. ತನ್ನ ಮಗನನ್ನು ದೇವಸೇನಾಪತಿಯನ್ನಾಗಿ ಮಾಡಿದ ತಾಯಿಯಂತೆ, ನಮ್ಮೊಳಗಿನ ಉತ್ಸಾಹ ಮತ್ತು ಕ್ರಿಯಾಶೀಲತೆಯನ್ನು ಪ್ರೀತಿಯಿಂದ ಪೋಷಿಸುವ ಹೊಣೆಗಾರಿಕೆ. ಸ್ವಾರ್ಥವನ್ನು ಮೀರಿ, ನಮ್ಮ ಜತೆಗಿರುವವರನ್ನೂ ಬೆಳೆಸುವ ವಿಶಾಲ ಮನೋಭಾವವೇ ಸ್ಕಂದಮಾತೆಯ ನಿಜವಾದ ಸಂದೇಶ.

ಆರನೆಯ ದಿನದ ಕಾತ್ಯಾಯನೀ ಅನ್ಯಾಯ ಮತ್ತು ಸ್ವಂತ ದೌರ್ಬಲ್ಯಗಳ ವಿರುದ್ಧ ಸಿಡಿದೇಳುವ ಕೆಚ್ಚು. ಒಳಗಿನ ಆಲಸ್ಯ, ಜಡತ್ವ ಮತ್ತು ನಿರಾಶೆಗಳೆಂಬ ಕಸವನ್ನು ಗುಡಿಸಿಹಾಕಲು ಕ್ರಾಂತಿಕಾರಿ ಕಿಡಿ ಬೇಕು. ನನ್ನಿಂದ ಏನೂ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಹೇಡಿತನವನ್ನು ಸುಟ್ಟುಹಾಕುವ ರುದ್ರಾವತಾರವೇ ಕಾತ್ಯಾಯನೀ. ಇದು ಆತ್ಮರಕ್ಷಣೆಯ ಮತ್ತು ಆತ್ಮಗೌರವದ ಜ್ವಾಲೆ.

ಏಳನೆಯ ದಿನದ ಕಾಲರಾತ್ರಿ ಕರಾಳ ಸತ್ಯಗಳನ್ನು ಒಪ್ಪಿಕೊಳ್ಳುವ ನಿರ್ಭಯತೆ. ಬದುಕಿನಲ್ಲಿ ಸಾವು, ನಷ್ಟ, ದ್ರೋಹ ಮತ್ತು ಒಂಟಿತನಗಳು ಎದುರಾದಾಗ ಬೆಚ್ಚಿಬೀಳದ ಎದೆಗಾರಿಕೆ ಇದು. ಕತ್ತಲೆಯನ್ನು ಪ್ರೀತಿಸಿದವನಿಗೆ ಮಾತ್ರ ನಕ್ಷತ್ರಗಳು ಕಾಣಲು ಸಾಧ್ಯ. ಜೀವನದ ಕಹಿ ವಾಸ್ತವಗಳನ್ನು ಧೈರ್ಯವಾಗಿ ಎದುರಿಸಿ, ಆ ನೋವನ್ನೇ ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುವ ಶುಭಂಕರೀ ಮನಸ್ಥಿತಿ ಕಾಲರಾತ್ರಿಯದ್ದಾಗಿದೆ.

ಎಂಟನೆಯ ದಿನದ ಮಹಾಗೌರಿ ಶುದ್ಧೀಕರಣದ ಹಂತ. ಹೋರಾಟದ ದಣಿವು, ಕಷ್ಟಗಳ ಕಲೆಗಳೆಲ್ಲ ತೊಳೆದುಹೋಗಿ ಮನಸ್ಸು ಶುಭ್ರವಾಗುವ ಸಮಯ. ತಾನು ಗೆದ್ದೆನೆಂಬ ಅಹಂಕಾರವಿಲ್ಲದೆ, ದ್ವೇಷ-ಅಸೂಯೆಗಳಿಲ್ಲದೆ ನಿರ್ಮಲ ಗಂಗೆಯಂತೆ ಪ್ರಶಾಂತವಾಗುವ ಸತ್ವವೇ ಮಹಾಗೌರಿ. ಶಾಂತಿ ಎಂದರೆ ನಿಷ್ಕ್ರಿಯತೆಯಲ್ಲ, ಅದು ಎಲ್ಲಾ ಕೋಲಾಹಲಗಳನ್ನು ಗೆದ್ದ ನಂತರ ಸಿಗುವ ಆನಂದ.

ಒಂಬತ್ತನೆಯ ದಿನದ ಸಿದ್ಧಿದಾತ್ರಿ ಪರಿಪೂರ್ಣತೆಯ ಸಂಕೇತ. ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ ಮುಗಿಸಿದ ನಂತರ ಲಭಿಸುವ ಸಾರ್ಥಕತೆ. ತನ್ನ ಮಿತಿಗಳನ್ನು ಮೀರಿ ನಿಂತು, ಈ ಸಮಾಜಕ್ಕೆ ಏನನ್ನಾದರೂ ಉಪಯುಕ್ತವಾದುದನ್ನು ಕೊಟ್ಟು ತೆರಳುವ ಉದಾತ್ತ ಭಾವ. ಇದು ಕೇವಲ ವೈಯಕ್ತಿಕ ಗೆಲುವಲ್ಲ, ಜೀವನವನ್ನು ಗೆದ್ದ ಸಿದ್ಧಿ.
ನವರಾತ್ರಿಯ ಉತ್ಸವ ಮುಗಿಯುವುದು ವಿಜಯದಶಮಿಯೊಂದಿಗೆ. ನಮ್ಮೊಳಗಿನ ಅಜ್ಞಾನ, ಸಂಕೋಲೆ ಮತ್ತು ಕೀಳರಿಮೆಗಳನ್ನು ಮೆಟ್ಟಿನಿಂತು, ಹೊಸ ಉತ್ಸಾಹದಿಂದ ಜಗತ್ತನ್ನು ಎದುರಿಸಲು ಸನ್ನದ್ಧರಾಗುವುದೇ ಈ ಹಬ್ಬದ ಪರಮ ತಾತ್ಪರ್ಯ. ದುರ್ಗೆ ಎಲ್ಲೋ ಆಕಾಶದಲ್ಲಿಲ್ಲ; ಎದೆಗುಂದದೆ ಮುನ್ನಡೆಯುವ ಪ್ರತಿಯೊಬ್ಬನ ಎದೆಯ ಬಡಿತದಲ್ಲೂ ಆಕೆಯೇ ಇದ್ದಾಳೆ.

Related posts

ಕನ್ಯಾಡಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya

ಧರ್ಮಸ್ಥಳದಲ್ಲಿ ಅಂಚೆ-ಕುಂಚ ವಿಜೇತರಿಗೆ ಪುರಸ್ಕಾರ: ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ

Suddi Udaya

ಪದ್ಮುಂಜ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಅನುಜ್ಞಾ ಕಲಶ ಹಾಗೂ ಜೀರ್ಣೋದ್ಧಾರ ಕಾರ್ಯಾರಂಭ

Suddi Udaya

ಬಳಂಜ: ಬದಿನಡೆ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ಮುಂಡಾಜೆ ಚಿತ್ಪಾವನ ಸಂಘಟನೆಯ ವಾರ್ಷಿಕೋತ್ಸವ: ಪದಗ್ರಹಣ ಸಮಾರಂಭ

Suddi Udaya

ನೆಟ್‌ಬಾಲ್‌ನಲ್ಲಿ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯ ಸಾಧನೆ: ಮಿನಿ ಒಲಿಂಪಿಕ್ಸ್ ರಾಜ್ಯಮಟ್ಟಕ್ಕೆ ಆರು ಮಂದಿ ಆಯ್ಕೆ

Suddi Udaya
error: Content is protected !!