ಬೆಳ್ತಂಗಡಿ: ಮಂಗಳೂರು ನಗರದಲ್ಲಿ ಮಾದಕ ವಸ್ತುವನ್ನು ಪೂರೈಸುತ್ತಿದ್ದ ಬೆಳ್ತಂಗಡಿಯ ಲಾಯಿಲ ನಿವಾಸಿ ಮಹಿಳೆಯನ್ನು ಮಂಗಳೂರು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.
ಲಾಯಿಲ ಗ್ರಾಮದ ಗುರಿಂಗಾನ ಮನೆ ನಿವಾಸಿ ರಫೀಕ್ ಎಂಬವರ ಪತ್ನಿ ನಸೀಮಾ ಯಾನೆ ನಸೀಮ (42ವ) ಬಂಧಿತ ಮಹಿಳೆಯಾಗಿದ್ದಾರೆ.
ನ.1ರಂದು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾದಕ ವಸ್ತು ಸೇವನೆ ಪ್ರಕರಣದ ಆರೋಪಿತರಿಗೆ ಮಾದಕ ವಸ್ತು ಪೂರೈಸುತ್ತಿದ್ದ ನಸೀಮಾ @ ನಸೀಮ ಎಂಬಾಕೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಪೂರೈಕೆಯ ಜಾಲದ ಬಗ್ಗೆ ತನಿಖೆಯನ್ನು ಕೈಗೊಂಡ ಮಂಗಳೂರು ಪೊಲೀಸರು ಆರೋಪಿತೆಯು ವಾಸ್ತವ್ಯವಿದ್ದ ಪಂಪ್‌ವೆಲ್ ಉಜ್ಜೋಡಿಯ ಹತ್ತಿರದ ರಾಧಾ ರೆಸಿಡೆನ್ಸಿ ಎಂಬ ಅಪಾರ್ಟ್ ಮೆಂಟ್ ಕಟ್ಟಡದ, ಒಂದನೇ ಮಹಡಿಯಲ್ಲಿರುವ ಫ್ಲ್ಯಾಟ್ ನಂಬ್ರ 103 ರಲ್ಲಿ ಶೋದ ನಡೆಸಿ ಸುಮಾರು 15,30,000(ಹದಿನೈದು ಲಕ್ಷದ ಮೂವತ್ತು ಸಾವಿರ ) ಮೌಲ್ಯದ 153. ಗ್ರಾಂ ಎಂಡಿಎಂಎ ಯನ್ನು ಸ್ವಾದೀನ ಪಡಿಸಿಕೊಂಡಿದ್ದಾರೆ.
ಆರೋಪಿತೆಯು ಮಂಗಳೂರು ನಗರದಾದ್ಯಂತ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದುದಾಗಿ, ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಆರೋಪಿತೆಯನ್ನು ಬಂಧಿಸಿ, ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಈ ಪ್ರಕರಣದಲ್ಲಿ ಇನ್ನು ಕೆಲವು ಆರೋಪಿಗಳು ಭಾಗಿಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.













