November 7, 2026
ಪ್ರಮುಖ ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ 57ನೇ ಸಂಸ್ಥೆಯಾಗಿ ನರ್ಸಿಂಗ್ ಕಾಲೇಜು ಆರಂಭ-ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ನರ್ಸಿಂಗ್ ಶಿಕ್ಷಣ ಒದಗಿಸುವ ಉದ್ದೇಶ : ಡಾ. ಡಿ. ವೀರೇಂದ್ರ ಹೆಗ್ಗಡೆ

ಉಜಿರೆ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕೈಗೆಟುಕುವ ರೀತಿಯಲ್ಲಿ ಒದಗಿಸುವ ಉದ್ದೇಶ ಹೊಂದಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ವತಿಯಿಂದ 57ನೇ ಸಂಸ್ಥೆಯಾದ ಎಸ್‌ಡಿಎಂ ಕಾಲೇಜು ಆಫ್ ನರ್ಸಿಂಗ್‌ನ ನೂತನ ಬಿ.ಎಸ್ಸಿ. ನರ್ಸಿಂಗ್ ಕೋರ್ಸ್‌ನ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.

ಉಜಿರೆಯ ಸ್ನಾತಕೋತ್ತರ ಪದವಿ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಲಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸುವ ಮೂಲಕ ನೂತನ ಕೋರ್ಸ್‌ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಇವರು, ನೂತನ ನರ್ಸಿಂಗ್ ಕೋರ್ಸ್ ಆರಂಭವು ಬಹುದಿನಗಳ ಕನಸಾಗಿದ್ದು, ಈ ವೃತ್ತಿಗೆ ದೇಶ ಹಾಗೂ ವಿದೇಶಗಳಲ್ಲಿ ಉತ್ತಮ ಬೇಡಿಕೆಯಿದೆ. ನರ್ಸಿಂಗ್ ಶಿಕ್ಷಣದ ಆರಂಭವು ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ವಿಸ್ತರಣೆಗೆ ಮತ್ತೊಂದು ಮೈಲಿಗಲ್ಲಾಗಲಿದೆ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ವತಿಯಿಂದ ಧಾರವಾಡದಲ್ಲಿರುವ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಉಜಿರೆಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆ, ಹಾಸನ ಮತ್ತು ಉಡುಪಿಯ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಗಳು ಆರೋಗ್ಯ ಸೇವೆಯಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳ ಸಾಲಿಗೆ ನರ್ಸಿಂಗ್ ಕಾಲೇಜು ಸೇರ್ಪಡೆಯಾಗಿರುವುದು ಸಂತಸದ ಸಂಗತಿ. ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲಸೌಕರ್ಯ ಮತ್ತು ಕಲಿಕಾ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ವೃತ್ತಿಪರರಾಗಿ ರೂಪುಗೊಳ್ಳಬೇಕು. ಶಿಕ್ಷಣದ ಮೂಲಕ ಸಂಸ್ಥೆಗೆ ಉತ್ತಮ ಹೆಸರು ತರಬೇಕು ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಮತ್ತು ಡಾ. ಸತೀಶ್ಚಂದ್ರ ಎಸ್., ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ದನ್ ಹಾಗು ನರ್ಸಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭ ಅಂಗವಾಗಿ ಬೆಳಿಗ್ಗೆ ಗಣಹೋಮ ನಡೆಯಿತು.

ಕಾರ್ಯಕ್ರಮದಲ್ಲಿ ಸೋನಿಯಾ ಯಶೋವರ್ಮ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರನ್ ವರ್ಮ, ಆಡಳಿತ ಮಂಡಳಿ ಸದಸ್ಯರಾದ ಡಾ. ಬಿ. ಪ್ರಕಾಶ್, ರಾಜೇಶ್ ಪೈ, ಭಾಸ್ಕರ್ ಪೈ, ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸಾತ್ವಿಕ್ ಜೈನ್, ವಿವಿಧ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕೇಂದ್ರ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕನ್ನಡ ಉಪನ್ಯಾಸಕ ಡಾ. ದಿವಾಕರ ಕೊಕ್ಕಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಎಸ್‌.ಡಿ.ಎಂ ಕಾಲೇಜು ಆಫ್ ನರ್ಸಿಂಗ್ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಇದರ ಸಂಯೋಜನೆ ಹೊಂದಿದ್ದು, ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಮಾನ್ಯತೆ ಹಾಗೂ ಕರ್ನಾಟಕ ಸರ್ಕಾರದ ಅನುಮೋದನೆ ಪಡೆದಿದೆ. ನಾಲ್ಕು ವರ್ಷಗಳ ಬಿ.ಎಸ್ಸಿ. ನರ್ಸಿಂಗ್ ಪದವಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತರಗತಿ ಬೋಧನೆಯ ಜೊತೆಗೆ ಆಸ್ಪತ್ರೆಗಳಲ್ಲಿ ಪ್ರಾಯೋಗಿಕ ತರಬೇತಿ ಮತ್ತು ಕ್ಲಿನಿಕಲ್ ಅನುಭವ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಉಜಿರೆಯ ಮಲ್ಟಿ ಎಸ್‌ಡಿಎಂ ಸ್ಪೆಷಾಲಿಟಿ ಆಸ್ಪತ್ರೆಯು ವಿದ್ಯಾರ್ಥಿಗಳ ಕ್ಲಿನಿಕಲ್ ತರಬೇತಿಗೆ ಪ್ರಮುಖ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದೆ.

Related posts

ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮೂರನೇ ಅಂತರಾಷ್ಟ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾಸಮ್ಮೇಳನ ಉದ್ಘಾಟನೆ

Suddi Udaya

ಧರ್ಮಸ್ಥಳ ಗಣಪತಿ ದೇವಸ್ಥಾನದ ವ್ಯವಸ್ಥಾಪಕರಾಗಿದ್ದ ಎಂ. ಕೃಷ್ಣ ಭಟ್ ನಿಧನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕಡಿರ ಬನದಲ್ಲಿ ನಾಲ್ಕು ನಾಗನ ಕಲ್ಲುಗಳು ಹಾಗೂ ಎರಡು ಮಣ್ಣಿನ ಮಡಕೆ, ಒಂದು ತಿಬಿಲೆ ಪತ್ತೆ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆಧಾರ್ ನೋಂದಣಿ ಮತ್ತು ಪರಿಷ್ಕರಣಾ ಶಿಬಿರ

Suddi Udaya

ಸೌತಡ್ಕ ದೇವಾಲಯಗಳಲ್ಲಿ ಕಾನೂನು ಬಾಹಿರವಾಗಿ ಮತ್ತು ಭಕ್ತಾದಿಗಳ ನಂಬಿಕೆಗೆ ವಿರುದ್ಧವಾಗಿ ನಡೆಸಿರುವ ಅವ್ಯವಹಾರದ ಕುರಿತು ಪ್ರಶಾಂತ್ ಪೂವಾಜೆ ಯವರಿಂದ ಪತ್ರಿಕಾಗೋಷ್ಠಿ

Suddi Udaya

ರಾಷ್ಟ್ರಮಟ್ಟದ ಹಿರಿಯರ ಟೆನ್ನಿಸ್ ವಾಲಿಬಾಲ್ ಪಂದ್ಯಾಟ: ಶ್ರೀ ಧ.ಮಂ. ಕ್ರೀಡಾ ಸಂಘದ ವಿದ್ಯಾರ್ಥಿಗಳು ತೃತೀಯ ಸ್ಥಾನ

Suddi Udaya
error: Content is protected !!