ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುದೇಮುಗೇರು ಅಂಗನವಾಡಿಯಲ್ಲಿ ಮಕ್ಕಳದಿನಾಚರಣೆ ಮತ್ತು ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನ.14ರಂದು ಜರುಗಿತು.
ಸುದ್ದಿ ಉದಯ ಪತ್ರಿಕೆಯ ಸಂಪಾದಕರಾದ ಬಿ.ಎಸ್ ಕುಲಾಲ್ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸುದೆಮುಗೇರು ಅಂಗವಾಡಿಯಲ್ಲಿ ರಾಷ್ಟ್ರೀಯ ಹಬ್ಬಗಳನ್ನು ನಿರಂತರವಾಗಿ ಕಳೆದ ಕೆಲ ವರ್ಷಗಳಿಂದ ಆಚರಿಸುತ್ತಿದೆ. ಮಕ್ಕಳಿಗೆ ಹಾಗೂ ಪರಿಸರದ ಯುವ ಸಮುದಾಯಕ್ಕೆ ಆನೇಕ ಚಟುವಟಿಕೆಗಳನ್ನು ಮಾಡಿ ಅವರಲ್ಲಿರುವ ಪ್ರತಿಭಾವಿಕಸನಕ್ಕೆ ಅವಕಾಶ ಮಾಡುತ್ತಿರುವ ಈ ಅಂಗವಾಡಿ ತಾಲೂಕಿಗೆ ಮಾದರಿ ಅಂಗನವಾಡಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಗನವಾಡಿಯ ಪುಟಾಣಿ ರಿಷಿತ್ ಪಿ.ಆರ್ ವಹಿಸಿದ್ದರು. ಮುಖ್ಯ ಅತಿಥಿ ತಾ.ಪಂ ಕೆಡಿಪಿ ಸದಸ್ಯ ಹಾಗೂ ವಾರ್ಡ್‌ನ ಮಾಜಿ ಹಿರಿಯ ಸದಸ್ಯರಾದ ಜಗದೀಶ್ ಡಿ. ಅವರು ಪ್ರಸ್ತಾವಿಕವಾಗಿ ಮಾತನಾಡಿ ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿ, ಸ್ಥಳೀಯ ಪ್ರತಿಭೆಗಳಿಗೆ ಹಾಗೂ ಸ್ಥಳೀಯ ಕ್ರೀಡೆಗಳಿಗೆ ಹಾಗೂ ಭಜನಾ ತಂಡ, ನಾಸಿಕ್‌ಬ್ಯಾಂಡ್ ತಂಡ ಹಾಗೂ ಹುಲಿವೇಷ ತಂಡಗಳಿಗೆ ಸಹಕಾರ ನೀಡುವ ಬಗ್ಗೆ ತಿಳಿಸಿದರು. ತಾಲೂಕು ಸಮುದಾಯ ಆರೋಗ್ಯಾಧಿಕಾರಿ ಸತೀಶ್, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ನಾಜ್ಮಿನ್, ಅಂಗನವಾಡಿ ಶಿಕ್ಷಕಿ ದಿವ್ಯ ಅನುಪಸ್ಥಿತಿಯಲ್ಲಿ ಸಹಾಯಕಿ ರೋಹಿನಿ ಅಶೋಕ್ ಉಪಸ್ಥಿತರಿದ್ದರು.
ಮಕ್ಕಳ ದಿನಾಚರಣೆ ಪ್ರಯುಕ್ತ ನಡೆಸಿದ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಹಾಗೂ ಸ್ಥಳೀಯ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಏರ್ಪಡಿಸಲಾದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸುದೆಮುಗೇರು ಪರಿಸರದ ವಿವಿಧ ಕ್ಷೇತ್ರಗಳ ಪ್ರತಿಭೆಗಳಾದ ಭಜನಾ ತಂಡದ ನಾಯಕಿ ರೋಹಿಣಿ, ಹುಲಿವೇಷ ತಂಡದ ನಾಯಕ ಸಚಿನ್ ಸುದೆಮುಗೇರು, ನಾಸಿಕ್ ಬ್ಯಾಂಡ್ ತಂಡದ ನಾಯಕ ಚರಣ್ ಇವರನ್ನು ಗೌರವಿಸಲಾಯಿತು.
ಅದೃಷ್ಟವ್ಯಕ್ತಿ ಚೀಟಿ ಎತ್ತಿ ಬಹುಮಾನ ವಿತರಿಸಲಾಯಿತು. ಜಲಾನಯನ ಇಲಾಖೆಯ ಅಶೋಕ್ ಸುದೆಮುಗೇರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.














