ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಿದ್ದ ‘ಆರೋಹಣಂ – 2026’ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಭವ್ಯವಾಗಿ ನಡೆಯಿತು.
ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಐಬಿಎಂ ಮಾಸ್ಟರ್ ಇನ್ವೆಂಟರ್ ಹಾಗೂ ಸಾಫ್ಟ್‌ವೇರ್ ಆರ್ಕಿಟೆಕ್ಟ್ ಆಶ್ರಿತ್ ಶೆಟ್ಟಿ ಮಾತನಾಡಿ, ಕನಸುಗಳಿಗೆ ಯಾವುದೇ ಮಿತಿ ಇಲ್ಲ. ಇಂದು ಕಾಣುವ ಕನಸುಗಳು ನಮ್ಮ ಪ್ರಯತ್ನ, ಪರಿಶ್ರಮ ಮತ್ತು ಬದ್ಧತೆಯಿಂದ ಬೆಳೆಯುತ್ತಾ ಸಾಕಾರಗೊಳ್ಳುತ್ತವೆ. ಕೃತಕ ಬುದ್ಧಿಮತ್ತೆ (AI) ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಪ್ರಭಾವ ಬೀರುತ್ತಿದೆ. AI ಒಂದು ಸವಾಲು ಎನ್ನುವುದಕ್ಕಿಂತ, ಮನುಷ್ಯ ತನ್ನ ಆಲೋಚನಾ ಸಾಮರ್ಥ್ಯವನ್ನು ಕಳೆದುಕೊಳ್ಳುವುದೇ ನಿಜವಾದ ಅಪಾಯವಾಗಿದೆ. ನಮ್ಮ ಚಿಂತನಾ ಕೌಶಲ್ಯವನ್ನು ತಂತ್ರಜ್ಞಾನಕ್ಕೆ ಒಪ್ಪಿಸದೆ, AI ಉಪಕರಣಗಳನ್ನು ಬಳಸಿಕೊಂಡರೂ ನಮ್ಮ ಸ್ವಂತ ಸೃಜನಶೀಲತೆ ಮತ್ತು ವಿಚಾರಶಕ್ತಿಯನ್ನು ಉಳಿಸಿಕೊಳ್ಳಬೇಕು ಎಂದರು.
ChatGPT ಸೇರಿದಂತೆ AI ಉಪಕರಣಗಳನ್ನು ಬಳಸುವ ವಿಧಾನ ಬಹಳ ಮುಖ್ಯವಾಗಿದ್ದು, ಕುತೂಹಲದಿಂದ ಪ್ರಶ್ನೆಗಳನ್ನು ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು. AI ಮೂಲಕ ದೊರೆಯುವ ಮಾಹಿತಿಯ ಮಹಾಪೂರದಲ್ಲಿ ಉಪಯುಕ್ತ ಮತ್ತು ಗುಣಮಟ್ಟದ ಮಾಹಿತಿಯನ್ನು ಆಯ್ಕೆಮಾಡುವ ವಿವೇಕವನ್ನು ಹೊಂದಿರಬೇಕು. ಆತಂಕಗೊಳ್ಳದೆ, ಸ್ಪರ್ಧೆಯ ಒತ್ತಡಕ್ಕೆ ಒಳಗಾಗದೆ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಾಗ ಸೂಕ್ತ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯ. ಪ್ರಶ್ನಿಸುವ ಗುಣವೇ ಸರಿಯಾದ ಜ್ಞಾನ ಮತ್ತು ಉತ್ತರಗಳತ್ತ ನಮ್ಮನ್ನು ಕರೆದೊಯ್ಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಮತ್ತು ತರಬೇತುದಾರರಿಗೆ , ಪ್ರೋತ್ಸಾಹಿಸಿದ ಉಪನ್ಯಾಸಕರು ಮತ್ತು ಪೋಷಕರಿಗೆ ಅಭಿನಂದನೆಗಳನ್ನು ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೌಲ್ಯಯುತ ಶಿಕ್ಷಣ ಮತ್ತು ಜೀವನ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲ್ಪಸಿಕೊಡುವುದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಮಹತ್ತರ ಉದ್ದೇಶವಾಗಿದೆ. ಇದನ್ನು ಹಿರಿಯ ವಿದ್ಯಾರ್ಥಿಗಳು ಸಾಬೀತು ಮಾಡಿದ್ದಾರೆ. ಇವೆಲ್ಲವು ನಿಮಗೆ ಪ್ರೇರಣೆಯಾಗಬೇಕು.
ಜೀವನಪೂರ್ತಿ ನಾವು ವಿದ್ಯಾರ್ಥಿಗಳಾಗಿಯೇ ಇರಬೇಕು. ಪ್ರತಿದಿನ ಹೊಸ ವಿಷಯಗಳನ್ನು ಕಲಿಯುವ ಮನೋಭಾವ ಹೊಂದಿರಬೇಕು. ಜ್ಞಾನವನ್ನು ಅರಸುವವನೇ ನಿಜವಾದ ವಿದ್ಯಾರ್ಥಿ. ಸಾಧನೆಗೆ ನಿರಂತರ ಅಭ್ಯಾಸ, ಸಮರ್ಪಣೆ ಮತ್ತು ಪರಿಶ್ರಮ ಅತ್ಯಗತ್ಯ. ಸದಾ ಜಾಗೃತರಾಗಿದ್ದು, ಹೊಸ ಅವಕಾಶಗಳನ್ನು ಗುರುತಿಸಿ, ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು. ಸವಾಲುಗಳನ್ನು ಎದುರಿಸುವ ಮನೋಭಾವ ನಮ್ಮನ್ನು ಹೊಸ ಕಲಿಕೆಯತ್ತ ಕೊಂಡೊಯ್ಯುತ್ತದೆ ಹಾಗೂ ಸಾಧನೆಯ ಹಾದಿಯಲ್ಲಿ ಮುನ್ನಡೆಸುತ್ತದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಮೋದ್ ಕುಮಾರ್ ಬಿ. ಎಸ್.ಡಿ.ಎಂ ಪದವಿಪೂರ್ವ ವಿದ್ಯಾ ಸಂಸ್ಥೆಯ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಇತ್ಯಾದಿ ಸಾಧನೆಗಳ ವಾರ್ಷಿಕ ವರದಿಯನ್ನು ವಾಚಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಬೆಳವಣಿಗೆಯ ಕುರಿತಾಗಿ ಹಿರಿಯರು ಮತ್ತು ಗಣ್ಯರು ಕಳುಹಿಸಿದ ಸಂದೇಶ ಪತ್ರವನ್ನು ಉಪನ್ಯಾಸಕಿ ಅಶ್ವಿನಿ ಎಚ್ ಆರ್ ವಾಚಿಸಿದರು. ಇದೇ ಸಂದರ್ಭದಲ್ಲಿ ಹೆಮಲ್ ಮುರುಗನ್ ಅವರ The Hidden Heritage ಪುಸ್ತಕ ಬಿಡುಗಡೆ ಕಾರ್ಯಕ್ರಮವೂ ನಡೆಯಿತು.
ಶೈಕ್ಷಣಿಕ ಸಾಲಿನಲ್ಲಿ ಪಠ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜಿನ ವತಿಯಿಂದ ಉಪನ್ಯಾಸಕರಿಗೆ ಆಯೋಜಿಸಿದ್ದ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ನಡೆಯಿತು. ಪ್ರಶಸ್ತಿಯನ್ನು ಅತಿಥಿಗಳಾದ ಡಾ. ಸತೀಶ್ಚಂದ್ರ ಎಸ್., ಆಶ್ರಿತ್ ಶೆಟ್ಟಿ ಸೇರಿದಂತೆ ಕಾಲೇಜಿನ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಸ್ತಾಂತರಿಸಿದರು.
ಸಭೆಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಮತ್ತು ಕಾಲೇಜಿನ ವತಿಯಿಂದ ಕಾರ್ಯಕ್ರಮದ ಅಭ್ಯಾಗತರಾಗಿದ್ದ ಆಶ್ರಿತ್ ಅವರನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಗೌರವಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಮನೋರಂಜನೀಯ ಸಾಂಸ್ಕೃತಿಕ ಕಾರ್ಯಕ್ರಮದ ನಡೆಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಉಪ ಪ್ರಾಚಾರ್ಯ ಡಾ. ರಾಜೇಶ್ ಬಿ. ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ವೈದೇಹಿ, ನಿಹಾರಿಕ , ಪದ್ಮಶ್ರೀ ಸೇರಿದಂತೆ ವಿದ್ಯಾರ್ಥಿಗಳಾದ ಸಂಪ್ರಿಯಾ ಮತ್ತು ರಕ್ಷಿತಾ ನಿರೂಪಿಸಿದರು. ಡಾ. ಮಹಾವೀರ ಜೈನ್ ವಂದಿಸಿದರು.













